ನವದೆಹಲಿ: ದೇಶದಲ್ಲಿ ಕೊರೊನಾ ಸ್ಥಿತಿ - ಗತಿ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಭಾರತದಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿರುವ ಸಂಖ್ಯೆ ಇದೀಗ 51 ಲಕ್ಷಕ್ಕೂ ಅಧಿಕವಾಗಿದೆ. ಇಡೀ ವಿಶ್ವದಲ್ಲೇ ಇದು ಅತಿ ಹೆಚ್ಚು ಎಂದು ಹೇಳಿದೆ.
ದೇಶದಲ್ಲಿ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ ಅಧಿಕ: ಕೇಂದ್ರ ಆರೋಗ್ಯ ಸಚಿವಾಲಯ - ಕೇಂದ್ರ ಆರೋಗ್ಯ ಸಚಿವಾಲಯ ಸುದ್ದಿಗೋಷ್ಠಿ
ವಿಶ್ವಕ್ಕೆ ಹೋಲಿಕೆ ಮಾಡಿದಾಗ ಭಾರತದಲ್ಲಿ ಕೊರೊನಾ ವೈರಸ್ನಿಂದ ಚೇತರಿಸಿಕೊಂಡಿರುವವರ ಸಂಖ್ಯೆ ಅತಿ ಹೆಚ್ಚು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ಭಾರತದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ವಿಶ್ವದಲ್ಲೇ ಅತಿ ಕಡಿಮೆಯಾಗಿದೆ. ಒಂದೇ ತಿಂಗಳಲ್ಲಿ ದೇಶಾದ್ಯಂತ ಬರೋಬ್ಬರಿ 2.97 ಕೋಟಿ ಕೊರೊನಾ ಟೆಸ್ಟ್ ನಡೆಸಲಾಗಿದ್ದು, ಕೇವಲ ಒಂದು ವಾರದಲ್ಲಿ 77.8 ಲಕ್ಷ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಎಂಬ ಮಾಹಿತಿ ನೀಡಿದರು. ದೇಶದಲ್ಲಿ ಇಲ್ಲಿಯವರೆಗೆ 7 ಕೋಟಿಗೂ ಅಧಿಕ ಕೊರೊನಾ ಟೆಸ್ಟ್ ನಡೆಸಲಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳಿಗಿಂತಲೂ ನಗರದ ಕೊಳೆಗೇರಿ ಪ್ರದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚು ಹರಡುತ್ತಿದ್ದು, ಬರುವ ಹಬ್ಬ-ಹರಿದಿನ, ಚಳಿಗಾಲದ ವೇಳೆಗೆ ಇದನ್ನ ಹತೋಟಿಗೆ ತರಬೇಕಾಗಿದೆ ಎಂದು ತಿಳಿಸಿದರು.