ಪೋಚೆಫ್‌ಸ್ಟ್ರೂಮ್ (ದಕ್ಷಿಣ ಆಫ್ರಿಕಾ): ಐಸಿಸಿ ಅಂಡರ್ -19 ವಿಶ್ವಕಪ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು 74 ರನ್ಗಳಿಂದ ಸೋಲಿಸಿ ಸತತ ಮೂರನೇ ಬಾರಿಗೆ ಸೆಮಿಫೈನಲ್ಗೆ ಲಗ್ಗೆಯಿಟ್ಟಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ಆರಂಭಿಕ ಆಘಾತದ ಹೊರತಾಗಿಯೂ, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 62 (82ಎಸೆತ) ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ ಅಥರ್ವ ಅಂಕೋಲೆಕರ್ 55 (54) ಹೋರಾಟದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 233 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.
ಆಸ್ಟ್ರೇಲಿಯಾ ಪರ ಕೆಲ್ಲಿ ಹಾಗೂ ಮುರ್ಫಿ ತಲಾ 2 ವಿಕೆಟ್ ಪಡೆದು ಮಿಂಚಿದರು. ತನ್ವೀರ್ ಸಂಗಾ, ವಿಲಿಯನ್ಸ್, ಹಾಗೂ ಸಲ್ಲಿ ತಲಾ ಒಂದೊಂದು ವಿಕೆಟ್ ಪಡೆದರು.
234 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾಗೆ ಕಾರ್ತಿಕ್ ತ್ಯಾಗಿ ಆರಂಭದ ಓವರ್ನಲ್ಲೆ ಶಾಕ್ ನೀಡಿದರು. ಮೊದಲ ಓವರ್ನಲ್ಲೆ ಆರಂಭಿಕ ಬ್ಯಾಟ್ಸ್ಮನ್ ಜಾಕ್ಸ್ ಫ್ರೆಸರ್ ಮೆಕ್ಗ್ರಕ್ ಒಂದು ಎಸೆತ ಎದುರಿಸದೆ ರನ್ ಔಟ್ ಆದರು. ನಂತರ 4ನೇ ಎಸೆತದಲ್ಲಿ ನಾಯಕ ಮೆಕೆಂಜಿ ಹಾರ್ವೆರಿ(4), 5ನೇ ಎಸೆತದಲ್ಲಿಲಚ್ಲಾನ್ ಹಾರ್ನೆ(0) ವಿಕೆಟ್ ಪಡೆದರು. ಮತ್ತೆ ಮೂರನೇ ಓವರ್ನಲ್ಲಿ ಒಲಿವಿರ್ ಡೇವಿಸ್(2) ವಿಕೆಟ್ ಪಡೆದ ಆಸ್ಟ್ರೇಲಿಯಾರ ಮರ್ಮಾಘಾತ ನೀಡಿದರು. ತ್ಯಾಗಿ ದಾಳಿಗೆ ಬೆಚ್ಚಿದ ಆಸೀಸ್ 17 ರನ್ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ಆರಂಭಿಕ ಆಟಗಾರ ಸ್ಯಾಮ್ ಫಾನ್ನಿಂಗ್ 75 (127) ಎಸೆತ ಹಾಗೂ ವಿಕೆಟ್ ಕೀಪರ್ ಪ್ಯಾಟ್ರಿಕ್ ರೋವ್(21) 5ನೇ ವಿಕೆಟ್ಗೆ 52 ರನ್‌ಗಳ ಜೊತೆಯಾಟ ನೀಡಿದರು. ರೋವ್ ಔಟಾದ ನಂತರ ಬಂದ ಲಿಯಮ್ ಸ್ಕಾಟ್ (35) 6ನೇ ವಿಕೆಟ್ 81 ರನ್ ಸೇರಿಸಿ ಭಾರತಕ್ಕೆ ತಿರುಗೇಟು ನೀಡುವ ಹಂತಕ್ಕೆ ಬಂದಿತ್ತು. ಆದರೆ ರವಿ ಬಿಶ್ನೋಯ್ ಸ್ಕಾಟ್ರ ವಿಕೆಟ್ ಪಡೆಯುವ ಮೂಲಕ ಜೊತೆಯಾಟ ಮುರಿದರು. 149ಕ್ಕೆ 6 ವಿಕೆಟ್ ಕಳೆದುಕೊಂಡರೂ ಗೆಲುವಿನ ಹಾದಿಯಲ್ಲಿದ್ದ ಆಸ್ಟ್ರೇಲಿಯಾಕ್ಕೆ ಆಕಾಶ್ ಸಿಂಗ್ ಒಂದೇ ಓವರ್ನಲ್ಲಿ ಒಂದು ರನ್ ಸೇರಿದಂತೆ 3 ವಿಕೆಟ್ ಪಡೆದು ಕಾಂಗರೂಗಳ ಆಟವನ್ನು ಅಂತ್ಯಕ್ಕೆ ತಂದು ನಿಲ್ಲಿಸಿದರು. ಮತ್ತೆ ಒಂದು ಓವರ್ಗಳ ಬಳಿಕ ಬಂದು ಕೊನೆಯ ಬ್ಯಾಟ್ಸ್ಮನ್ ವಿಲ್ಲಾನ್ಸ್ರನ್ನು ಬೌಲ್ಡ್ ಮಾಡುವ ಮೂಲಕ ಭಾರತಕ್ಕೆ ಜಯ ತಂದುಕೊಟ್ಟರು. ಒಟ್ಟಾರೆ ಆಸೀಸ್ 43.3 ಓವರ್ಗಳಲ್ಲಿ 159 ರನ್ಗಳಿಗೆ ಆಲೌಟ್ ಆಗಿ 74 ರನ್‌ಗಳ ಸೋಲನುಭವಿಸಿತು.
ಭಾರತ ಪರ ತ್ಯಾಗಿ 4, ಆಕಾಶ್ ಸಿಂಗ್ 3. ಹಾಗೂ ರವಿ ಬಿಶ್ನೋಯ್ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಗೆಲುವಿನ ರೂವಾರಿಯಾದ ಕಾರ್ತಿಕ್ ತ್ಯಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಈ ಮೂಲಕ ಭಾರತದ ಕಿರಿಯರು ಸತತ ಮೂರನೇ ಭಾರಿಗೆ ಐಸಿಸಿ ಅಂಡರ್-19 ನಲ್ಲಿ ಸೆಮಿಫೈನಲ್ಗೆ ಪ್ರವೇಶಿಸಿದ ಸಾಧನೆ ಮಾಡಿತು.