ನವದೆಹಲಿ: ಸ್ವಂತ ಸಹೋದರನ ಮಗುವನ್ನೇ ಅಪಹರಿಸಲು ಯತ್ನಿಸಿದ ಚಿಕ್ಕಪ್ಪನೊಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಇಲ್ಲಿನ ಶಿಕಾರ್ಪುರ್ನಲ್ಲಿ ನಡೆದಿದೆ.
ಘಟನೆ ವಿವರ:
ಹಣದಾಸೆಗೆ ಉಪೇಂದ್ರ ತನ್ನ ಸ್ನೇಹಿತ ಧೀರಜ್ ಜೊತೆಗೂಡಿ ಸಹೋದರನ ಮಗುವನ್ನು ಅಪಹರಿಸಲು ಯೋಜನೆ ರೂಪಿಸಿದ್ದ. ಅದರಂತೆ ಮಂಗಳವಾರ ಪಲ್ಸರ್ ಬೈಕ್ನಲ್ಲಿ ಸಹೋದರನ ಮನೆಗೆ ತೆರಳಿ ಮಗುವನ್ನು ಅಪಹರಿಸಲು ಯತ್ನಿಸಿದ್ದಾನೆ.
ತಾಯಿಯಿಂದ ಮಗುವನ್ನು ಅಪಹರಿಸಲು ಯತ್ನಿಸಿದ ಚಿಕ್ಕಪ್ಪ - ತಾಯಿಯ ಧೈರ್ಯ ಮೆಚ್ಚಲೇಬೇಕು...!
ತಾಯಿಯ ಕೈಯಿಂದ ನಾಲ್ಕು ವರ್ಷದ ಮಗುವನ್ನು ಅಪಹರಿಸಲು ಉಪೇಂದ್ರ ಯತ್ನಿಸಿದ್ದಾನೆ. ಈ ವೇಳೆ ಮಗುವಿನ ತಾಯಿ ಆರೋಪಿಗಳಿಬ್ಬರ ವಿರುದ್ಧ ಹೋರಾಡಿ ದಿಟ್ಟತನ ಮೆರೆದಿದ್ದಾರೆ. ಮಗುವನ್ನು ಆರೋಪಿಗಳಿಂದ ರಕ್ಷಿಸಿ ಬೈಕ್ ಅನ್ನು ಬಿಗಿಯಾಗಿ ಹಿಡಿದಿದ್ದರು. ಆದ್ರೂ ಸಹ ಆರೋಪಿಗಳು ತಪ್ಪಿಸಿಕೊಂಡು ಮುಂದೆ ಸಾಗಿದರು.
- ಶೌರ್ಯ ಪ್ರದರ್ಶಿಸಿದ ಸ್ಥಳೀಯರು!
ಆರೋಪಿಗಳು ಬೈಕ್ ಮೂಲಕ ತಪ್ಪಿಸಿಕೊಳ್ಳುತ್ತಿರುವಾಗ ಸ್ಥಳೀಯರು ಶೌರ್ಯ ಮೆರೆದಿದ್ದಾರೆ. ನಗರದ ನಿವಾಸಿಯೊಬ್ಬ ಆರೋಪಿಗಳ ಬೆನ್ನಟ್ಟಿ ಹಿಡಿಯಲು ಯತ್ನಿಸಿದ್ದರು. ಇನ್ನೊಬ್ಬ ನಿವಾಸಿ ಸ್ಕೂಟಿಯನ್ನು ಅಡ್ಡಗಟ್ಟಿ ದುಷ್ಕರ್ಮಿಗಳನ್ನು ಹಿಡಿಯಲು ಪ್ರಯತ್ನಿಸಿದ್ದನು. ಈ ವೇಳೆ ಪಲ್ಸರ್ ಬೈಕ್ ಸ್ಕಿಡ್ ಆಗಿ ನೆಲಕ್ಕೆ ಬಿದ್ದಿದೆ. ದುಷ್ಕರ್ಮಿಗಳು ಬೈಕ್ ಅನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
- 24 ಗಂಟೆಯೊಳಗೆ ಆರೋಪಿಗಳು ಅಂದರ್!
ಈ ಘಟನೆ ಕುರಿತು ಶಿಕಾರ್ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿ ತನಿಖೆ ಕೈಗೊಂಡರು. 24 ಗಂಟೆಯೊಳಗೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳಿಂದ ಲೋಡೆಡ್ ಗನ್ ಮತ್ತು ಪಲ್ಸರ್ ಬೈಕ್ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ವಿಚಾರಣೆ ವೇಳೆ ಹಣದಾಸೆಗೆ ಈ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.