ನವದೆಹಲಿ: ಭಯೋತ್ಪಾದನೆ ಕುರಿತ ಯುಎನ್ ವರದಿಯೊಂದು ಪಾಕಿಸ್ತಾನವು ಇನ್ನೂ ಕೂಡ ಅಂತಾರಾಷ್ಟ್ರೀಯ ಭಯೋತ್ಪಾದನೆಯ ಕೇಂದ್ರಬಿಂದುವಾಗಿಯೇ ಉಳಿದಿದೆ ಎಂಬ ತನ್ನ ದೀರ್ಘ ಕಾಲದ ನಿಲುವನ್ನು ಸಮರ್ಥಿಸಿದೆ ಎಂದು ಭಾರತ ಮಂಗಳವಾರ ತಿಳಿಸಿದೆ.
ವರದಿಯ ಪ್ರಕಾರ, ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳಾದ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ಅಫ್ಘಾನಿಸ್ಥಾನಕ್ಕೆ ಉಗ್ರರನ್ನು ಕಳ್ಳಸಾಗಣೆ ಮಾಡುವ ಕಾರ್ಯದಲ್ಲಿ ನಿರತವಾಗಿವೆ. ಈಗಾಗಲೇ ಯುದ್ಧದಿಂದ ಹಾನಿಗೊಳಗಾದ ದೇಶದಲ್ಲಿ ಶಾಂತಿ ಪ್ರಕ್ರಿಯೆಯ ಹಳಿ ತಪ್ಪಿಸುವ ಬೆದರಿಕೆ ಹಾಕುತ್ತಿವೆ.
ವರದಿಯ ಕುರಿತಾದ ಮಾಧ್ಯಮ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಅವರು, "ಪಾಕಿಸ್ತಾನವು ಅಂತಾರಾಷ್ಟ್ರೀಯ ಭಯೋತ್ಪಾದನೆಯ ಕೇಂದ್ರಬಿಂದುವಾಗಿದೆ ಎಂಬ ಭಾರತದ ದೀರ್ಘಕಾಲದ ನಿಲುವನ್ನು ಈ ವರದಿ ಸಮರ್ಥಿಸುತ್ತದೆ. ನಿಷೇಧಿತ ಭಯೋತ್ಪಾದಕ ಘಟಕಗಳು ಮತ್ತು ಭಯೋತ್ಪಾದಕರಿಗೆ ಸುರಕ್ಷಿತ ಸ್ಥಳಗಳಲ್ಲಿ ಸೂಕ್ತ ಸೌಲಭ್ಯಗಳನ್ನು ಒದಗಿಸಿ ನೋಡಿಕೊಳ್ಳಲಾಗುತ್ತಿದೆ. ಅವರು ಪಾಕಿಸ್ತಾನದ ಬೆಂಬಲದೊಂದಿಗೆ ನಿರ್ಭಯದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.
"ಯುಎನ್ ಗೊತ್ತುಪಡಿಸಿರುವ ವರದಿಯಲ್ಲಿ, ಅಲ್ಖೈದಾ ಭಯೋತ್ಪಾದಕ ಸಂಘಟನೆ ಹಾಗೂ ಅಫ್ಘಾನಿಸ್ಥಾನದಲ್ಲಿರುವ ಅದರ ಅಂಗಸಂಸ್ಥೆಗಳಲ್ಲಿ 6500 ಪಾಕಿಸ್ತಾನ ಪ್ರಜೆಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ವಿದೇಶಿ ಭಯೋತ್ಪಾದಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಗಂಭೀರ ಉಲ್ಲೇಖವನ್ನು ಕಾಣಬಹುದು." ಎಂದು ಶ್ರೀವಾಸ್ತವ್ ಹೇಳಿದರು.