ಚೆನ್ನೈ(ತಮಿಳುನಾಡು): ಮಧುರೈನ ಸಲೂನ್ ಮಾಲೀಕ ಸಿ.ಮೋಹನ್ ಎಂಬುವವರ 13 ವರ್ಷದ ಮಗಳು ಎಂ.ನೇತ್ರಾ ಅವರನ್ನು ಯುನೈಟೆಡ್ ನೇಷನ್ಸ್ ಅಸೋಸಿಯೇಶನ್ ಫಾರ್ ಡೆವಲಪ್ಮೆಂಟ್ ಅಂಡ್ ಪೀಸ್(ಯುಎನ್‌ಎಡಿಎಪಿ), ಸದ್ಭಾವನಾ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.
ನ್ಯೂಯಾರ್ಕ್‌ನಲ್ಲಿ ನಡೆಯುವ ವಿಶ್ವಸಂಸ್ಥೆಯ ಸಮಾವೇಶ ಮತ್ತು ಜಿನೀವಾದಲ್ಲಿ ಸಿವಿಲ್ ಸೊಸೈಟಿ ಫೋರಂ ಮತ್ತು ಸಮ್ಮೇಳನಗಳನ್ನು ಉದ್ದೇಶಿಸಿ ಮಾತನಾಡಲು ನೇತ್ರಾಗೆ ಅವಕಾಶ ನೀಡಲಾಗುವುದು ಎಂದು ಯುಎನ್‌ಎಡಿಎಪಿ ತಿಳಿಸಿದೆ.
ನೇತ್ರಾ ಅವರ ತಂದೆ ಮೋಹನ್ ಮಧುರೈನಲ್ಲಿ ಸಲೂನ್ ಮಾಲೀಕನಾಗಿದ್ದಾರೆ. ಲಾಕ್ಡೌನ್ನಿಂದ ಸಂಕಷ್ಟದ ವೇಳೆ ತಾವು ಕೂಡಿಟ್ಟಿದ್ದ 5 ಲಕ್ಷ ರೂಪಾಯಿ ಹಣ ಬಳಸಿ ಸುಮಾರು 600 ಕುಟುಬಂಗಳಿಗೆ ಅಗತ್ಯ ಸಾಮಗ್ರಿ ನೀಡಿದ್ದಾರೆ. ಲಾಕ್ಡೌನ್ನಿಂದ 2 ತಿಂಗಳು ಸಲೂನ್ ಬಾಗಿಲು ಹಾಕಿದ್ದರೂ ಮೊಹನ್ ಕಷ್ಟದಲ್ಲಿರುವವರಿಗೆ ನೆರವಾಗಿದ್ದಾರೆ. ಪುತ್ರಿಯ ಒತ್ತಾಯದಿಂದಲೇ ತಂದೆ ಸಹಾಯ ಮಾಡಲು ಮುಂದಾಗಿದ್ದರು.
ಮೋಹನ್ ಅವರ ಕಾರ್ಯವನ್ನು ಮೆಚ್ಚಿಕೊಂಡಿದ್ದ ಪ್ರಧಾನಿ ಮೋದಿ ತಿಂಗಳಾಂತ್ಯದ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. 13 ವರ್ಷದ ಮಗಳ ಒತ್ತಾಯದ ನಂತರ ತಂದೆ ತಾವು ಕೂಡಿಟ್ಟ ಹಣವನ್ನು ಉತ್ತಮ ಕಾರ್ಯಕ್ಕೆ ಬಳಕೆ ಮಾಡಿದ್ದಾರೆ ಎಂದು ಮೋದಿ ಮೆಚ್ಚುಗೆ ಸೂಚಿಸಿದ್ದರು. ಇದಲ್ಲದೆ ಡಿಕ್ಸನ್ನಿಂದ ನೇತ್ರಾಗೆ 1 ಲಕ್ಷ ರೂ. ವಿದ್ಯಾರ್ಥಿ ವೇತನ ಘೋಷಿಸಲಾಗಿದೆ.