ತಿರುವನಂತಪುರಂ :ಕೋವಿಡ್ ನಿರ್ವಹಣೆಯಲ್ಲಿ ಮಾದರಿ ಎನಿಸಿಕೊಂಡಿರುವ ಕೇರಳದ ಕಾರ್ಯವನ್ನು ವಿಶ್ವ ಸಂಸ್ಥೆ ಗುರುತಿಸಿದ್ದು, ಯುಎನ್ ಪ್ರಧಾನ ಕಾರ್ಯದರ್ಶಿ ಮತ್ತು ಸಾಮಾನ್ಯ ಸಭೆಯ ಅಧ್ಯಕ್ಷರು ನೇತೃತ್ವ ವಹಿಸಿದ್ದ ಸಾರ್ವಜನಿಕ ಸೇವಾ ದಿನಾಚರಣೆಯಲ್ಲಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಪಾಲ್ಗೊಂಡಿದ್ದರು.
ಕೇರಳದ ಕೋವಿಡ್ ಡಿಫೆನ್ಸ್ ಇನಿಶಿಯೇಟಿವ್‌ಗೆ ವಿಶ್ವ ಸಂಸ್ಥೆಯ ಮಾನ್ಯತೆ
ಸಾರ್ವಜನಿಕ ಸೇವಾ ದಿನದ ನಿಮಿತ್ತ ವಿಶ್ವ ಸಂಸ್ಥೆ ಆಯೋಜಿಸಿದ್ದ ವಿಶೇಷ ವರ್ಚುವಲ್ ಕಾರ್ಯಕ್ರಮದಲ್ಲಿ ಕೋವಿಡ್ ತಡೆಗಟ್ಟುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ದೇಶಗಳ ಪ್ರತಿನಿಧಿಗಳ ಜೊತೆ ಕೇರಳದ ಆರೋಗ್ಯ ಸಚಿವೆ .ಕೆ.ಕೆ ಶೈಲಜಾ ಪಾಲ್ಗೊಂಡಿದ್ದರು.
ವರ್ಚುವಲ್ ಕಾರ್ಯಕ್ರಮದಲ್ಲಿ ಕೋವಿಡ್ ತಡೆಗಟ್ಟುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ವಿವಿಧ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಭಾರತದಿಂದ ಕೇರಳದ ಆರೋಗ್ಯ ಸಚಿವೆಗೆ ಮಾತ್ರ ಆಹ್ವಾನ ಸಿಕ್ಕಿತ್ತು. ಕೋವಿಡ್ ತಡೆಗಟ್ಟುವಲ್ಲಿ ಕೇರಳ ಕೈಗೊಂಡ ಕ್ರಮಗಳ ಬಗ್ಗೆ ಕಾರ್ಯಕ್ರಮದಲ್ಲಿ ಸಚಿವೆ ವಿವರಿಸಿದರು.
ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಸಾಮಾನ್ಯ ಸಭೆಯ ಅಧ್ಯಕ್ಷ ಟಿಜ್ಜನಿ ಮೊಹಮ್ಮದ್ ಬಂಡೆ, ಇಥಿಯೋಪಿಯಾದ ಅಧ್ಯಕ್ಷ ಸಾಹ್ಲೆ ವರ್ಕ್ ಸೂಡ್, ಡಬ್ಲ್ಯುಹೆಚ್‌ಒ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಡೆನೊಮಮ್ ಗೆಬ್ರಿಯೇಶಿಯಸ್, ಯುಎನ್ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಉಪ ಕಾರ್ಯದರ್ಶಿ ಲಿಯು ಶೆನ್ಮಿನ್, ಕೊರಿಯಾದ ಆಂತರಿಕ ಮತ್ತು ಭದ್ರತಾ ಸಚಿವ ಚಿನ್ ಯಂಗ್, ಸಹ - ಮಂತ್ರಿ ಇಂಗೆ ಲೀ, ವಿಶ್ವ ಆರೋಗ್ಯ ಸಂಸ್ಥೆಯ ಆರೋಗ್ಯ ಕಾರ್ಯಪಡೆಯ ನಿರ್ದೇಶಕ ಜಿಮ್ ಕ್ಯಾಂಪ್ಬೆಲ್, ಅಂತಾರಾಷ್ಟ್ರೀಯ ದಾದಿಯರ ಒಕ್ಕೂಟದ ಅಧ್ಯಕ್ಷ ಆನೆಟ್ ಕೆನಡಿ ಮತ್ತು ಸಾರ್ವಜನಿಕ ಸೇವೆಗಳ ಅಂತಾರಾಷ್ಟ್ರೀಯ ಕಾರ್ಯದರ್ಶಿ ರೋಸಾ ಪಾವೆಲ್ಲೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.