ನವದೆಹಲಿ: ರಾಜ್ಯಸಭೆಯಲ್ಲಿ ಇತ್ತೀಚೆಗೆ ಅಂಗೀಕರಿಸಲಾದ ಕೊವಿಡ್-19 ಕರ್ತವ್ಯದಲ್ಲಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ದಾಳಿ ನಡೆಸುವವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸುವ ತಿದ್ದುಪಡಿ ಮಸೂದೆಗೆ ಸಂಸದ ಉಮೇಶ್ ಜಾಧವ್ ಬೆಂಬಲ ನೀಡುವುದಾಗಿ ಘೋಷಿಸಿದರು.
ನಾನೊಬ್ಬ ವೈದ್ಯನಾಗಿದ್ದು, ಕೊರೊನಾ ಸೋಂಕಿನಿಂದ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದೇನೆ. ಶಾಸಕ ಹಾಗೂ ವೈದ್ಯನಾಗಿರು ನನ್ನ ಮಗ, ಗನ್ ಮ್ಯಾನ್ ಸೇರಿದಂತೆ ನನ್ನ ಕುಟುಂಬದ ಕೆಲ ಸದಸ್ಯರಿಗೂ ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದೆವು. ಯುವ ವೈದ್ಯರು, ನರ್ಸ್, ತರಬೇತಿ ನಿರತ ಕಲಿಕಾ ವಿದ್ಯಾರ್ಥಿ ವೈದ್ಯರ ಸೇವೆಯನ್ನು ನಾನು ಜೀವಮಾನದಲ್ಲಿ ಮರೆಯುವುದಿಲ್ಲ ಎಂದರು.
ಲೋಕಸಭೆಯಲ್ಲಿ ಮಾತನಾಡಿದ ಸಂಸದ ಉಮೇಶ್ ಜಾಧವ್ ನನಗೆ ಮರು ಜನ್ಮ ನೀಡಿದ ವೈದ್ಯರಿಗೆ ಕೈಮುಗಿಯುತ್ತೇನೆ. ನಾನು ಕಲಬುರಗಿ ಜಿಲ್ಲೆಯಿಂದ ಬಂದವನು. ಕಲಬುರಗಿ ಆಂಧ್ರ, ತೆಲಂಗಾಣ ಹಾಗೂ ಮಹಾರಾಷ್ಟ್ರ ಗಡಿಯನ್ನು ಹಂಚಿಕೊಂಡಿದೆ. ಆ ಜಿಲ್ಲೆಯವನ್ನು ನಾನು. ಗಡಿಯಲ್ಲಿ ನಾಲ್ಕೈದು ರಾಜ್ಯಗಳ ವಲಸೆ ಕಾರ್ಮಿಕರನ್ನು ಬರಮಾಡಿಕೊಂಡಿದ್ದೇವೆ. ತವರಿಗೆ ಮರಳಿದ ವಲಸೆ ಕಾರ್ಮಿಕರನ್ನು ಬೇಸಿಗೆಯ 46 ಡಿಗ್ರಿ ಉಷ್ಣಾಂಶದಲ್ಲಿ ಕ್ವಾರಂಟೈನ್ ಇರಿಸಲಾಗಿತ್ತು. ಕೆಲವರು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ದಾಳಿ ಮಾಡಿದ್ದರು ಎಂದರು.
ಕೆಲವು ವೈದ್ಯರು ನಮ್ಮ ಬಳಿ ಬಂದು, 'ಸರ್ ಈ ಜನ ನಮ್ಮ ಮೇಲೆ ದಾಳಿ ಮಾಡಿ ಹೊಡೆಯುತ್ತಿದ್ದಾರೆ. ಆ್ಯಂಬುಲೆನ್ಸ್ ಮೇಲೆ ದಾಳಿ ನಡೆಸುತ್ತಿದ್ದಾರೆ' ಎಂದು ದೂರು ನೀಡಿದ್ದರು. ನಾವು, ನಮ್ಮ ಸ್ಥಳೀಯ ಅಧಿಕಾರಿಗಳು ಈ ಗಲಾಟೆಗಳ ಮಧ್ಯೆ ಪ್ರವೇಶಿಸಿ ಶಮನಗೊಳಿಸಿದೆವು. ಹೀಗಾಗಿ, ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅತ್ಯುತ್ತಮವಾದ ಮಸೂದೆ ಮಂಡಿಸಿದ್ದಾರೆ ಎಂದು ಶ್ಲಾಘಿಸಿದರು.
ನಾನು ಈ ಮಸೂದಿಗೆ ಬೆಂಬಲ ನೀಡುತ್ತೇನೆ. ಕೋವಿಡ್ ಸೋಂಕಿನ ವಿರುದ್ಧ ಹೋರಾಟದಲ್ಲಿ ಭಾಗಿಯಾದ ಪ್ರತಿಯೊಬ್ಬ ವೈದ್ಯ, ಕಾರ್ಮಿಕ, ಆಶಾ ಕಾರ್ಯಕರ್ತೆ, ಪೊಲೀಸರಿಗೆ ಧನ್ಯವಾದ ಸಲ್ಲಿಸುತ್ತೇನೆ. ಇದೊಂದು ಮಾದರಿ ಕಾಯ್ದೆ ಆಗಲಿದೆ. ರೋಗಿಗಳ ಸೇವೆಗೆ ದುಡಿಯುತ್ತಿರುವವರಿಗೆ ರಕ್ಷಣೆ ನೀಡಿಲಿದೆ ಎಂದರು.
ಯಾವುದೇ ಸಂದರ್ಭದಲ್ಲಾಗಲಿ ಕೋವಿಡ್ 19 ಸೋಂಕಿನ ವಿರುದ್ಧ ಹೋರಾಡುತ್ತಿರುವ ಕೋವಿಡ್ ಆಶಾಕಾರ್ಯಕರ್ತೆಯರಾಗಲಿ, ಆರೋಗ್ಯ ಸಿಬ್ಬಂದಿ ಮತ್ತು ವೈದ್ಯರ ಮೇಲೆ ಹಲ್ಲೆ ನಡೆಸಿದರೆ ಐದು ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸುವ 'ಸಾಂಕ್ರಾಮಿಕ ರೋಗಗಳ ತಿದ್ದುಪಡಿ' ಮಸೂದೆಗೆ ರಾಜ್ಯಸಭೆ ಶನಿವಾರ (ಸೆಪ್ಟೆಂಬರ್ 19, 2020) ಅಂಗೀಕರಿಸಿತು. ಏಪ್ರಿಲ್ ತಿಂಗಳಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ್ದ 'ಸಾಂಕ್ರಾಮಿಕ ರೋಗಗಳ ತಿದ್ದುಪಡಿ' ಮಸೂದೆ 2020 ಅನ್ನು ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಶನಿವಾರ ಮೇಲ್ಮನೆಯಲ್ಲಿ ಮಂಡಿಸಿದರು.