ನವದೆಹಲಿ:ಈ ವರ್ಷದ ಗಣರಾಜ್ಯೋತ್ಸವ ಆಚರಣೆಗೆ ಮುಖ್ಯ ಅತಿಥಿಯಾಗಿ ಆಗಮಿಸಬೇಕಾಗಿದ್ದ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಪ್ರವಾಸ ಮುಂದೂಡಿದ್ದಾರೆ. ಹೀಗಾಗಿ ಗಣತಂತ್ರ ಸಂಭ್ರಮಾಚರಣೆಯಲ್ಲಿ ಅವರು ಭಾಗಿಯಾಗುತ್ತಿಲ್ಲ.
ಇಂಗ್ಲೆಂಡ್ನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹಾವಳಿ ಹೆಚ್ಚಾಗಿರುವ ಕಾರಣ ಅವರು ಈ ಪ್ರವಾಸ ರದ್ದುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂಗ್ಲೆಂಡ್ನಲ್ಲಿ ಈಗಾಗಲೇ 56 ಮಿಲಿಯನ್ ಜನರು ಸೋಂಕಿಗೊಳಗಾಗಿರುವ ಕಾರಣ ಹಾಗೂ ರೂಪಾಂತರಿ ಕೊರೊನಾ ಹಿನ್ನೆಲೆಯಲ್ಲಿ ಇಂಗ್ಲೆಂಡ್ನಲ್ಲಿ ಇಂದಿನಿಂದ ಲಾಕ್ಡೌನ್ ಘೋಷಣೆ ಮಾಡಲಾಗಿದೆ.
ಓದಿ: ಮತ್ತೆ ಲಾಕ್ ಆದ ಇಂಗ್ಲೆಂಡ್.. ಕೋವಿಡ್ ವಿರುದ್ಧ ಒಟ್ಟಾಗಿ ಕೆಲಸ ಮಾಡೋಣ ಎಂದ ಪ್ರಧಾನಿ ಜಾನ್ಸನ್
ರಾಷ್ಟ್ರವನ್ನಿದ್ದೇಶಿಸಿ ಇಂದು ಬೆಳಗ್ಗೆ ಮಾತನಾಡಿದ್ದ ಪ್ರಧಾನಿ ಬೋರಿಸ್ ಜಾನ್ಸನ್, ಈ ಕೋವಿಡ್ ಮಹಾಮಾರಿ ಕಳೆದ ವರ್ಷ ಪ್ರಾರಂಭವಾಗಿದ್ದು, ಇದರ ವಿರುದ್ಧ ಇಡೀ ರಾಷ್ಟ್ರವೇ ಹೋರಾಡಿದೆ. ಮಹಾಮಾರಿ ಕೊರೊನಾ ವಿರುದ್ಧ ಸಾಮೂಹಿಕ ಹೋರಾಟ ನಡೆದಿದೆ ಎಂಬುದರಲ್ಲಿ ಸಂದೇಹವಿಲ್ಲ. ಇದೀಗ ಕೊರೊನಾ ರೂಪಾಂತರ ಹೊಂದಿದೆ. ಈ ರೂಪಾಂತರ ಕೊರೊನಾ ಹರಡುವಿಕೆ ವೇಗ ಗಮನಿಸಿದರೆ ಆತಂಕವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಇದರ ಬೆನ್ನಲ್ಲೇ ತಮ್ಮ ಭಾರತದ ಪ್ರವಾಸ ಮುಂದೂಡಿಕೆ ಮಾಡಿದ್ದಾರೆ.
2021ರ ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಭಾರತದ ಗಣರಾಜ್ಯೋತ್ಸವ ಆಚರಣೆಯಲ್ಲಿ ಪ್ರಧಾನ ಅತಿಥಿಯಾಗಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನವನ್ನು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸ್ವೀಕರಿಸಿದ್ದರು. ಜತೆಗೆ ಇದೊಂದು ದೊಡ್ಡ ಗೌರವ ಎಂದು ಅವರು ಹೇಳಿದ್ದರು.