ಹೈದರಾಬಾದ್ :ಇಂಗ್ಲೆಂಡ್ನ ಔಷಧೀಯ ಕಂಪನಿ ಅಸ್ಟ್ರಾಜೆನೆಕಾ ಹಾಗೂ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ಕೋವಿಡ್-19 ಲಸಿಕೆ ಶೋಧದಲ್ಲಿ ಮಹತ್ವದ ಮುನ್ನಡೆ ಕಂಡಿದೆ. ಅಷ್ಟೇ ಅಲ್ಲ, ಜಾಗತಿಕವಾಗಿ ವ್ಯಾಕ್ಸಿನ್ ಪೂರೈಕೆಗೂ ಅದು ಸಜ್ಜಾಗುತ್ತಿದೆ.
ಲಸಿಕೆಗಳ ತಯಾರಿಕೆಯ ವೇಗ ಹೆಚ್ಚಿಸುವ ಜಾಗತಿಕ ಮಟ್ಟದ ಸಂಶೋಧಕರ ಗುಂಪಾದ ಕೊಯಿಲಿಷನ್ ಫಾರ್ ಎಪಿಡೆಮಿಕ್ ಪ್ರಿಪೇರ್ಡ್‌ನೆಸ್ ಇನ್ನೋವೇಷನ್ಸ್ (ಸಿಇಪಿಐ) ಜೊತೆ ಸಿಎಸ್‌ಐಆರ್‌ಒ ಸೇರಿಕೊಂಡಿತ್ತು. ಸೀರಮ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಕೂಡ ಇದರಲ್ಲಿದೆ.
ಕೊರೊನಾ ಲಸಿಕೆಯ 300 ಮಿಲಿಯನ್ ಡೋಸ್‌ಗಳ ಉತ್ಪಾದನೆ, ಸಂಗ್ರಹಣೆ ಮತ್ತು ವಿತರಣೆಗೆ ಕಂಪನಿಯು ಇತ್ತೀಚೆಗೆ ಸಿಇಪಿಐ ಮತ್ತು ಗವಿ (ಗ್ಲೋಬಲ್ ವ್ಯಾಕ್ಸಿನ್ ಅಲಯನ್ಸ್) ಒಕ್ಕೂಟ ಜತೆ 750 ಮಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿದೆ. ವರ್ಷಾಂತ್ಯದ ವೇಳೆಗೆ ವಿತರಣೆಯೂ ಆರಂಭವಾಗುತ್ತದೆ. ಇದಲ್ಲದೆ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಒಂದು ಶತಕೋಟಿ ಪ್ರಮಾಣದಷ್ಟು ಪೂರೈಸಲು ಅಸ್ಟ್ರಾಜೆನೆಕಾ ಎಸ್‌ಐಐನೊಂದಿಗೆ ಪರವಾನಗಿ ಒಪ್ಪಂದ ಮಾಡಿಕೊಂಡಿದೆ. 2020ರ ಅಂತ್ಯಕ್ಕೂ ಮುನ್ನ 400 ಮಿಲಿಯನ್ ಡೋಸ್ಗಳನ್ನು ಒದಗಿಸುವ ಬದ್ಧತೆ ಇರಿಸಿಕೊಂಡಿದೆ.
ಆಕ್ಸ್‌ಫರ್ಡ್‌ನ ಲಸಿಕೆಗಾಗಿ ವಿಶ್ವದಾದ್ಯಂತ ಯಾವುದೇ ಲಾಭವಿಲ್ಲದೆ ಸಮನಾಂತರ ಹಂಚಿಕೆ ಒದಗಿಸಲು ದಣಿವರಿಯದೆ ಕೆಲಸ ಮಾಡುತ್ತಿದ್ದೇವೆ. ಕಡಿಮೆ ವೈದ್ಯಕೀಯ ಸೌಕರ್ಯಗಳು ಸೇರಿ ವಿಶ್ವದಾದ್ಯಂತ ಇರುವ ಎಲ್ಲಾ ಜನರಿಗೂ ಪೂರೈಸುತ್ತೇವೆ. ಇಷ್ಟು ಕಡಿಮೆ ಸಮಯದಲ್ಲಿ ಎಲ್ಲರೂ ಒಟ್ಟುಗೂಡಿ ಬದ್ಧತೆಯಿಂದ ಕೆಲಸ ಮಾಡಿದ್ದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಅಂತಾ ಅಸ್ಟ್ರಾಜೆನೆಕಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ಯಾಸ್ಕಲ್ ಸೊರಿಯೊಟ್ ಹೇಳಿದರು.
ಸಿಇಪಿಐನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಿಚರ್ಡ್ ಹ್ಯಾಟ್ಚೆಟ್ ಮಾತನಾಡಿ, ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಗಳನ್ನು ವೇಗವಾಗಿ ಅಭಿವೃದ್ಧಿಪಡಿಸಲು ಮತ್ತು ಕೋವಿಡ್-19 ರೋಗಕ್ಕೆ ಶಾಶ್ವತ ಅಂತ್ಯವಾಡಲು ಶತಕೋಟಿ ಪ್ರಮಾಣದಲ್ಲಿ ಲಸಿಕೆ ತಯಾರಿಸುವಲ್ಲಿ ಅಸ್ಟ್ರಾಜೆನೆಕಾ ಮತ್ತು ನಮ್ಮ ಇತರ ಉದ್ಯಮದ ಪಾಲುದಾರರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ನಮ್ಮ ಈ ಸಹಭಾಗಿತ್ವವು ಖಾಸಗಿ, ಸಾರ್ವಜನಿಕ ಮತ್ತು 3ನೇ ವಲಯಗಳನ್ನು ಹೇಗೆ ಒಗ್ಗೂಡಿಸುತ್ತದೆ ಎಂಬುದನ್ನು ತೋರಿಸುತ್ತದೆ. ಕೋವಿಡ್-19 ಲಸಿಕೆಗಳನ್ನು ಹೆಚ್ಚು ಅಗತ್ಯವಿರುವವರಿಗೆ ಲಭ್ಯವಾಗುವಂತೆ ಮಾಡುತ್ತೇವೆ ಎಂದರು.