ಕೋಲ್ಕತಾ :ಅಮೆರಿಕಾದಲ್ಲಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆ ವಿರೋಧಿಸಿ ಜಗತ್ತಿನ ಹಲವೆಡೆ ಪ್ರತಿಭಟನೆ ನಡೆಯುತ್ತಿರುವ ವೇಳೆ ಪಶ್ಚಿಮ ಬಂಗಾಳದಲ್ಲಿ ವರ್ಣ ಬೇಧ ಪ್ರಚೋದಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಇಂಗ್ಲೀಷ್ ವರ್ಣಮಾಲೆಯ ಪುಸ್ತಕದಲ್ಲಿದ್ದ ಕಪ್ಪು ಮೈಬಣ್ಣ ಹೊಂದಿರುವ ಜನರಿಗೆ ಅವಹೇಳನ ಮಾಡುವಂತಹ ವಿಷಯವನ್ನು ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಸರ್ಕಾರ ಇಬ್ಬರು ಶಿಕ್ಷಕಿಯರನ್ನು ಗುರುವಾರ ಅಮಾನತುಗೊಳಿಸಿದೆ.
'U' ಫಾರ್ 'UGLY' ಎಂದು ಬೋಧಿಸಿದ ಶಿಕ್ಷಕರು ಸಸ್ಪೆಂಡ್.. ಇಂಗ್ಲೀಷ್ ವರ್ಣಮಾಲೆಯ ಅಕ್ಷರಗಳಿಗೆ ಅನುಗುಣವಾದ ಪದಗಳು ಮತ್ತು ಚಿತ್ರಗಳೊಂದಿಗೆ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದ ವೇಳೆ 'U' ಅಕ್ಷರಕ್ಕೆ 'UGLY' ಎಂದು ಶಿಕ್ಷಕರು ಹೇಳಿದ್ದಾರೆ. ಇದರ ಮೇಲೆ ಕಪ್ಪು ಮೈಬಣ್ಣ ಹೊಂದಿರುವ ಯುವಕನ ಫೋಟೋ ಮುದ್ರಿತವಾಗಿತ್ತು.
ಈ ಪುಸ್ತಕವು ಶಿಕ್ಷಣ ಇಲಾಖೆಯಿಂದ ನೀಡಿದ ಪಠ್ಯ ಪುಸ್ತಕವಲ್ಲ. ಪೂರ್ವ ಬುರ್ದ್ವಾನ್ ಜಿಲ್ಲೆಯ ಪಾಲಿಕೆ ಅಡಿಯಲ್ಲಿ ಬರುವ ಈ ಶಾಲೆಯೇ ಪರಿಚಯಿಸಿರುವ ಪುಸ್ತಕವಿದು. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳನ್ನು ತುಂಬುವಂತಹ ಕೃತ್ಯಗಳನ್ನು ನಾವು ಸಹಿಸುವುದಿಲ್ಲ ಎಂದು ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.