ಕರ್ನಾಟಕ

karnataka

ETV Bharat / bharat

ಭುವಿಯ ಅನೂಹ್ಯ ಇತಿಹಾಸ ಅರಿಯುವ ಪ್ರಯತ್ನ: ಮಂಜುಗಡ್ಡೆ ಮರ್ಮದಿಂದ ವಿಜ್ಞಾನಿಗಳಿಗೆ ತಿಳಿದಿದ್ದೇನು? - ವಿಜ್ಞಾನ ಪತ್ರಿಕೆಯಾದ ನೇಚರ್

ಭೂಮಿಯ ಇತಿಹಾಸವನ್ನು ಬಹಿರಂಗಪಡಿಸುವ ಉದ್ದೇಶದಿಂದ ಮಹತ್ವದ ಸಂಶೋಧನೆಗೆ ವಿಜ್ಞಾನಿಗಳು ಮುಂದಾಗಿದ್ದಾರೆ. ಇದಕ್ಕೆ ಅವರು ಎರಡು ದಶಲಕ್ಷ ವರ್ಷಗಳಷ್ಟು ಹಳೆಯದಾದ ಅಂಟಾರ್ಕ್ಟಿಕಾದ ಮಂಜುಗಡ್ಡೆಯನ್ನು ಬಳಸಿಕೊಂಡಿದ್ದಾರೆ. ಭವಿಷ್ಯದಲ್ಲಿ ಹವಾಮಾನ ಬದಲಾವಣೆಯನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳಿಗೆ ಈ ಸಂಶೋಧನೆಗೆ ಸಹಕಾರಿಯಾಗಲಿದೆ.

ಅಂಟಾರ್ಕ್ಟಿಕಾದ ಮಂಜುಗಡ್ಡೆ

By

Published : Nov 5, 2019, 5:05 PM IST

ಓರೆಗಾನ್​​, ಅಮೆರಿಕಾ:ಭೂಮಿ ಹಿಂದೆ ಹೇಗಿತ್ತು? ಮುಂದೆ ಹೇಗಿರಲಿದೆ? ಅನ್ನೋದು ನಿಜಕ್ಕೂ ಕೂಡಾ ಅನೂಹ್ಯ. ಆದರೆ ವಿಜ್ಞಾನಿಗಳು ಇದನ್ನು ತಿಳಿದುಕೊಳ್ಳುವ ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ಲಕ್ಷಾಂತರ ವರ್ಷಗಳ ಹಿಂದೆ ಭೂಮಿಯ ಮೇಲಿನ ವಾತಾವರಣ ಹೇಗಿತ್ತು? ಭವಿಷ್ಯದಲ್ಲಿ ಭುವಿ ಹೇಗಿರಲಿದೆ? ಅನ್ನೋದನ್ನು ಕಂಡುಹಿಡಿಯುವ ಮಹತ್ವದ ಸಂಶೋಧನೆ ನಡೆಯುತ್ತಿದೆ.

ಭೂಮಿಯ ಇತಿಹಾಸವನ್ನು ಬಹಿರಂಗಪಡಿಸುವ ಈ ಮಹತ್ವದ ಸಂಶೋಧನೆಗೆ ವಿಜ್ಞಾನಿಗಳು ಎರಡು ದಶಲಕ್ಷ ವರ್ಷಗಳಷ್ಟು ಹಳೆಯದಾದ ಅಂಟಾರ್ಕ್ಟಿಕಾದ ಮಂಜುಗಡ್ಡೆಯನ್ನು ಬಳಸಿಕೊಂಡಿದ್ದಾರೆ. ಮಂಜುಗಡ್ಡೆಯ ಒಳಭಾಗವನ್ನು ತೆಗೆದುಕೊಂಡು ಸಂಶೋಧನೆಗೊಳಪಡಿಸಿದಾಗ ಕೆಲವು ಅಚ್ಚರಿಯ ವಿಚಾರಗಳು ಬಹಿರಂಗವಾಗಿವೆ. ಇದರ ಜೊತೆಗೆ 'ಹಸಿರುಮನೆ ಅನಿಲ'ಗಳ ಬಗ್ಗೆಯೂ ಕೆಲವು ಮಾಹಿತಿ ಸಿಕ್ಕಿದೆ. ಭವಿಷ್ಯದಲ್ಲಿ ಹವಾಮಾನ ಬದಲಾವಣೆಯನ್ನು ಅರ್ಥಮಾಡಿಕೊಳ್ಳಲು ಕೂಡಾ ವಿಜ್ಞಾನಿಗಳಿಗೆ ಸಹಕಾರಿಯಾಗಿದೆ.

ವಿಜ್ಞಾನ ಪತ್ರಿಕೆಯಾದ ನೇಚರ್​​ನಲ್ಲಿ ಪ್ರಕಟವಾದ ವರದಿಯಂತೆ ಹಸಿರುಮನೆ ಅನಿಲಗಳಾದ ಇಂಗಾಲದ ಡೈ ಆಕ್ಸೈಡ್​ ಹಾಗೂ ಮಿಥೇನ್​ ಗುಣಮಟ್ಟವನ್ನು ಅಳೆಯಲು ವಿಜ್ಞಾನಿಗಳು ಹೊಸ ಮಾರ್ಗವನ್ನು ಅನುಸರಿಸಿದರು. ಇದಕ್ಕಾಗಿ 2 ದಶಲಕ್ಷ ವರ್ಷಗಳಷ್ಟು ಹಳೆಯದಾದ ಮಂಜುಗಡ್ಡೆಯೊಳಗಿನ ಗಾಳಿಯ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಈ ಹಳೆಯ ಮಂಜುಗಡ್ಡೆ ಸುಮಾರು 8 ಲಕ್ಷ ವರ್ಷಗಳ ಹಿಂದಿನ ಮಾಹಿತಿಯನ್ನು ಒದಗಿಸುತ್ತದೆ. 8 ಲಕ್ಷ ವರ್ಷಗಳ ಹಿಂದೆ ಭೂಮಿಯ ವಾತಾವರಣ ಹೇಗಿತ್ತು? ಹಾಗೂ ತಾಪಮಾನದ ಬಗ್ಗೆ ಕುತೂಹಲಕಾರಿ ಅಂಶಗಳನ್ನು ತಿಳಿದುಕೊಳ್ಳಲು ಇದು ವಿಜ್ಞಾನಿಗಳಿಗೆ ಸಹಕಾರಿಯಾಯಿತು. ಆದ್ರೆ, ಇಂಗಾಲ ಡೈ ಆಕ್ಸೈಡ್​ನ ಮಟ್ಟ ಯಾವ ರೀತಿ ಇತ್ತು ಅನ್ನೋದು ಮಾತ್ರ ಸಂಶೋಧನೆಯಲ್ಲಿ ಅಸ್ಪಷ್ಟವಾಗಿದೆ.

ಅಂಟಾರ್ಕ್ಟಿಕಾದ ಮಂಜುಗಡ್ಡೆ

ಈ ಮಂಜುಗಡ್ಡೆಯನ್ನು ಅಲನ್ ಹಿಲ್ಸ್ ಎಂಬ ಪ್ರದೇಶದಿಂದ ತೆಗೆದುಕೊಳ್ಳಲಾಗಿತ್ತು. ನಂತರ ಅಮೆರಿಕಾದ ಅಂಟಾರ್ಕ್ಟಿಕ್ ಸಂಶೋಧನಾ ಕೇಂದ್ರದಿಂದ ಮೆಕ್‌ಮುರ್ಡೋ ಸ್ಟೇಷನ್ ಎಂಬಲ್ಲಿ ಸಂಶೋಧನೆ ನಡೆಸಲಾಯ್ತು. ಈ ಸಂಶೋಧನೆ ವಿಭಿನ್ನವಾದ ಮಾಹಿತಿಯನ್ನು ಒದಗಿಸಿತು. ಇದರ ನೇತೃತ್ವ ವಹಿಸಿದ ವಿಜ್ಞಾನಿಗಳು ಪ್ರಿನ್ಸ್​​​ಟನ್​ ಯುನಿವರ್ಸಿಟಿಯ ಜಾನ್​​​ ಹಿಗ್ಗಿನ್ಸ್​ ಹಾಗೂ ಯೂಜೆನ್​ ಯಾನ್​​, ಮೈನ್​ ಯೂನಿವರ್ಸಿಟಿಯ ಆ್ಯಂಡ್ರೈ ಕುರ್ಬಟೋವ್​, ಓರೆಗಾನ್​ ಸ್ಟೇಟ್​ ಯೂನಿವರ್ಸಿಟಿಯ ಎಡ್​ ಬ್ರೂಕ್ ಹಾಗು​ ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯ ಜೆಫ್ ಸೆವೆರಿಂಗಾಸ್​.

ಭೂಮಿ ಹಿಮಯುಗದ ವೇಳೆಯಲ್ಲಿದ್ದಾಗ ಒಂದು ಲಕ್ಷ ವರ್ಷಗಳಿಗೊಮ್ಮೆ ಅಪರೂಪವಾಗಿ ಬೆಚ್ಚಗಿನ ವಾತಾವರಣ ಕಾಣಿಸಿಕೊಳ್ಳುತ್ತಿತ್ತು. ಆದರೆ 2.8 ಮಿಲಿಯನ್​ ವರ್ಷಗಳ ಹಿಂದೆ ಹಿಮಯುಗದ ಅವಧಿಯೂ ಕೂಡಾ ಕಡಿಮೆಯಾಯಿತು. ಕೇವಲ 40 ಸಾವಿರ ವರ್ಷಗಳಿಗೊಮ್ಮೆ ಬೆಚ್ಚಗಿನ ವಾತಾವರಣ ಕಾಣಿಸಿಕೊಳ್ಳತೊಡಗಿತು. ಎಡ್​​ ಬ್ರೂಕ್​​​​​ ಒಳಗೊಂಡ ತಂಡವು ಈ ಅವಧಿಯಲ್ಲಿ ಇಂಗಾಲದ ಡೈಆಕ್ಸೈಡ್ ಮಟ್ಟ ಹೇಗೆ ಬದಲಾಗುತ್ತದೆ ಅನ್ನೋದನ್ನು ಕಂಡುಹಿಡಿಯಲು ಮುಂದಾಗಿತ್ತು. ಆಗಿನ ಇಂಗಾಲದ ಡೈಆಕ್ಸೈಡ್​ ಮಟ್ಟ ಈಗಿನ ಬೆಚ್ಚಗಿನ ಅವಧಿಗಳಿಗೆ ಪೂರ್ಣವಾಗಿ ಸರಿಹೊಂದುತ್ತದೆ ಅನ್ನೋದನ್ನು ಕಂಡುಕೊಂಡರು. ಆದರೆ ಇಂಗಾಲದ ಡೈ ಆಕ್ಸೈಡ್​ನ ಸಾಂದ್ರತೆ ಹಿಮಯುಗದಲ್ಲಿ ತುಂಬಾನೇ ಕಡಿಮೆಯಿತ್ತು ಅನ್ನೋದು ಕೂಡಾ ಸಾಬೀತಾಯಿತು.

ಎಡ್​ ಬ್ರೂಕ್​ ಪ್ರಕಾರ, ಈ ಅಧ್ಯಯನದ ಪ್ರಮುಖ ಉದ್ದೇಶ ಹಿಂದಿನ ಕಾಲದ ಇಂಗಾಲದ ಡೈ ಆಕ್ಸೈಡ್​​​ ತಾಪಮಾನಕ್ಕೆ ಸಂಬಂಧಿಸಿದೆ ಅನ್ನೋದನ್ನು ತೋರಿಸಿಕೊಡುವುದೇ ಆಗಿತ್ತು. ಈ ಸಂಶೋಧನೆ ರಸಾಯನಶಾಸ್ತ್ರವನ್ನು ಆಧರಿಸಿದ್ದು ಇಂಗಾಲದ ಡೈ ಆಕ್ಸೈಡ್​​ನಲ್ಲಿ ಆಗುವ ವ್ಯತ್ಯಾಸದಂತೆ ತಾಪಮಾನ ಬದಲಾವಣೆಯ ಸೂಚನೆಯನ್ನು ಕೂಡಾ ನೀಡುತ್ತದೆ ಎನ್ನುವ ವಿಚಾರವೂ ಬಹಿರಂಗವಾಯಿತು. ಹವಾಮಾನವನ್ನು ಅರ್ಥ ಮಾಡಿಕೊಂಡು ಭವಿಷ್ಯದಲ್ಲಿ ಏನಾಗುತ್ತದೆ ಎಂದು ತಿಳಿದುಕೊಳ್ಳುವುದೂ ಕೂಡಾ ಈ ಸಂಶೋಧನೆಯ ಉದ್ದೇಶ.

ABOUT THE AUTHOR

...view details