ನವದೆಹಲಿ: ರಾಜ್ಯಸಭೆಯಲ್ಲಿ ಕೃಷಿ ಮಸೂದೆಗಳ ಮಂಡನೆ ವೇಳೆ ಗದ್ದಲ ಆರೋಪಕ್ಕೆ ಸಂಬಂಧಿಸಿದಂತೆ ಅಮಾನತಾಗಿದ್ದ ಎಂಟು ಮಂದಿ ಸಂಸದರು ಸಂಸತ್ ಆವರಣದಲ್ಲಿನ ಗಾಂಧಿ ಪ್ರತಿಮೆಯ ಬಳಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.
ಸೋಮವಾರ ಬೆಳಗ್ಗೆ ಆರಂಭವಾದ ಧರಣಿ ರಾತ್ರಿಯೂ ಮುಂದುವರೆದಿದ್ದು, ಗಾಂಧಿ ಪ್ರತಿಮೆಯ ಬಳಿಯ ಹುಲ್ಲು ಹಾಸಿನ ಮೇಲೆ ಕುಳಿತು ಕೃಷಿ ಮಸೂದೆಗಳು ಹಾಗೂ ತಮ್ಮನ್ನು ಅಮಾನತುಗೊಳಿಸಿದ ನಿರ್ಧಾರದ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಹಲವು ವಿಪಕ್ಷಗಳ ನಾಯಕರು, ಸಂಸದರು ಅಮಾನತಾದ ಸಂಸದರನ್ನು ಭೇಟಿಯಾಗಿ ಪ್ರತಿಭಟನಾಕಾರರಿಗೆ ನೈತಿಕ ಬೆಂಬಲ ನೀಡಿದರು. ಗುಲಾಂ ನಬೀ ಆಜಾದ್, ಅಧೀರ್ ರಂಜನ್ ಚೌಧರಿ, ದಿಗ್ವಿಜಯ್ ಸಿಂಗ್ ಮುಂತಾದವರು ಸಂಸದರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.