ಧೆಂಕನಲ್ (ಒಡಿಶಾ) :ಮನೆಯಲ್ಲಿ ಸಂಗ್ರಹಿಸಿಟ್ಟಿದ್ದಪಟಾಕಿ ಸ್ಫೋಟಗೊಂಡ ಪರಿಣಾಮ ಇಬ್ಬರು ಬಾಲಕರು ಮೃತಪಟ್ಟು ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ತುಮುಸಿಂಗ ಪೊಲೀಸ್ ಠಾಣಾ ವ್ಯಾಪ್ತಿಯ ಸೊಗರ್ ಗ್ರಾಮದ ಮನೆಯಲ್ಲಿ ಮೂವರು ಬಾಲಕರು ಆಟವಾಡುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ. ಸ್ಥಳಕ್ಕೆ ಧಾವಿಸಿ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಗಾಯಾಳು ಬಾಲಕರ ರಕ್ಷಣೆ ಮಾಡಿದ್ದಾರೆ.
ಘಟನೆ ನಡೆದ ತಕ್ಷಣ ಮೂವರು ಬಾಲಕರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಬಳಿಕ ಧೆಂಕನಲ್ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ಎಂಟು ವರ್ಷದ ಇಬ್ಬರು ಬಾಲಕರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿರುವ 12 ವರ್ಷದ ಇನ್ನೋರ್ವ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಟಕ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮನೆಯಲ್ಲಿ ಯಾಕೆ ಪಟಾಕಿ ಸಂಗ್ರಹಿಸಿಟ್ಟಿದ್ದರು ಮತ್ತು ಸ್ಫೋಟಗೊಳ್ಳಲು ಕಾರಣವೇನು ಎಂಬುವುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.