ನವದೆಹಲಿ:ಇನ್ನು 20 ದಿನ ಕಳೆದ ನಾವು ಮತ್ತೊಂದು ವರ್ಷವನ್ನು ಬರಮಾಡಿಕೊಳ್ಳಲಿದ್ದೇವೆ. ವರ್ಷ ಕೊನೆಗೊಳ್ಳುತ್ತಿದ್ದಂತೆ ಜನವರಿಯಿಂದ ಆರಂಭಿಸಿ ಇಲ್ಲಿಯ ತನಕ ದೇಶದಲ್ಲಿ ನಡೆದ ಪ್ರಮುಖ ಘಟನಾವಳಿಗಳನ್ನು ಒಂದು ಬಾರಿ ತಿರುವಿ ನೋಡೋದು ರೂಢಿ.
ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚುತ್ತಿರುವ ದಿನದಲ್ಲಿ ದೇಶದಲ್ಲಿ ನಡೆಯುವ ಪ್ರತಿಯೊಂದು ಮಹತ್ವದ ಘಟನೆಯೂ ದಾಖಲಾಗುತ್ತವೆ. ಈ ವರ್ಷ ಟ್ವಿಟರ್ನಲ್ಲಿ ಅತಿಹೆಚ್ಚು ಬಳಸಲ್ಪಟ್ಟ ಹ್ಯಾಷ್ಟ್ಯಾಗ್ ಯಾವ್ಯಾವುದು ಎಂಬುದನ್ನು ಟ್ವಿಟರ್ ಇಂಡಿಯಾ ಬಿಡುಗಡೆ ಮಾಡಿದೆ.
ಲೋಕಸಭೆ ಚುನಾವಣೆ (#loksabhaelections2019), ಚಂದ್ರಯಾನ 2 (#chandrayan2), ವಿಶ್ವಕಪ್ ಟೂರ್ನಿ (#cwc19) ಪುಲ್ವಾಮಾ ದಾಳಿ(#pulwama) ಹಾಗೂ ಆರ್ಟಿಕಲ್ 370 (#article370) ಬಗ್ಗೆ ದೇಶದ ಜನತೆ ಹೆಚ್ಚು ಹ್ಯಾಷ್ಟ್ಯಾಗ್ ಬಳಕೆ ಮಾಡಿದ್ದಾರೆ. ಅತಿಹೆಚ್ಚು ಬಳಕೆಯಾದ ಹ್ಯಾಷ್ಟ್ಯಾಗ್ ಅಗ್ರ ಹತ್ತರಲ್ಲಿ ಎರಡೇ ಸಿನಿಮಾಗಳಿವೆ. ವಿಶೇಷ ಎಂದರೆ ಈ ಎರಡರಲ್ಲೂ ಬಾಲಿವುಡ್ ಸಿನಿಮಾಗಳಿಲ್ಲ.
ಇಳಯ ದಳಪತಿ ವಿಜಯ್ ನಟನೆಯ ಬಿಗಿಲ್ ಸಿನಿಮಾ (#bigil) ಆರನೇ ಸ್ಥಾನದಲ್ಲಿದ್ದರೆ ಹಾಲಿವುಡ್ ಸಿನಿಮಾ ಅವೇಂಜರ್ಸ್ ಎಂಡ್ಗೇಮ್ (#avengersendgame) ಎಂಟನೇ ಸ್ಥಾನದಲ್ಲಿದೆ. ಅಗ್ರ ಹತ್ತರಲ್ಲಿ ಎರಡು ಹಬ್ಬಗಳು ಇವೆ. ಏಳನೇ ಸ್ಥಾನದಲ್ಲಿ ದೀಪಾವಳಿ (#diwali) ಹಾಗೂ ಹತ್ತನೇ ಸ್ಥಾನದಲ್ಲಿ ಈದ್- ಮುಬಾರಕ್ (#eidmubarak) ಕಾಣಿಸಿಕೊಂಡಿದೆ. ದೇಶದ ಜನತೆಯ ಕುತೂಹಲಕ್ಕೆ ಕಾರಣವಾಗಿದ್ದ ಅಯೋಧ್ಯೆ ತೀರ್ಪಿನ ಬಗೆಗಿನ ಹ್ಯಾಷ್ಟ್ಯಾಗ್ (#ayodhyaverdict) ಒಂಭತ್ತನೇ ಸ್ಥಾನದಲ್ಲಿದೆ.
ಕ್ರೀಡಾ ವಿಭಾಗದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮಾಜಿ ಕ್ಯಾಪ್ಟನ್ ಎಂ.ಎಸ್. ಧೋನಿ ಜನ್ಮ ದಿನದಂದು ಶುಭಕೋರಿದ ಟ್ವೀಟ್, ಅತಿಹೆಚ್ಚು ರೀಟ್ವಿಟ್ ಆಗಿದೆ. ಧೋನಿ ಅವರ ಜನ್ಮದಿನದಂದು ಕೊಹ್ಲಿ ಮಾಡಿದ್ದ ಹೃತ್ಪೂರ್ವಕ ಟ್ವೀಟ್, ಮನೋರಂಜನೆ ವಿಭಾಗದಲ್ಲಿ ತಮಿಳು ನಟ ವಿಜಯ್ ಅಭಿನಯದ 'ಬಿಗಿಲ್' ಸಿನಿಮಾ ಪೋಸ್ಟರ್ ಪೋಸ್ಟ್( 1 ಲಕ್ಷ ರಿಟ್ವೀಟ್, 27 ಸಾವಿರ ಕಮೆಂಟ್ಸ್) ಅತ್ಯಧಿಕ ಮರು ಟ್ವೀಟ್ ಹಾಗೂ ಕಮೆಂಟ್ಸ್ ಪಡೆದಿದೆ.