ನವದೆಹಲಿ :ರೈತರ ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿರುವ ಆರೋಪದಡಿ ಟ್ವಿಟರ್ ಸುಮಾರು 250 ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ.
ಸುಳ್ಳು ಮತ್ತು ಪ್ರಚೋದನಾಕಾರಿ ವಿಷಯ ಹರಡಲು ಮೈಕ್ರೋಬ್ಲಾಗಿಂಗ್ ವೇದಿಕೆ ಬಳಸುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಲು ಟ್ವಿಟರ್ ಸಂಸ್ಥೆಗೆ ಗೃಹ ಸಚಿವಾಲಯ ಸೂಚಿಸಿದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಟ್ವೀಟ್ ಮತ್ತು ಟ್ವಿಟರ್ ಖಾತೆಗಳಿಗೆ ಸಂಬಂಧಿಸಿದಂತೆ ಅನೇಕ ದೇಶಗಳು ತಮ್ಮದೇ ಆದ ಕಾನೂನುಗಳನ್ನು ಹೊಂದಿವೆ. ಆ ನಿಯಮ ಮೀರಬಾರದು ಎಂದು ಟ್ವಿಟರ್ ಸಂಸ್ಥೆ ತಿಳಿಸಿದೆ.
ಮೂಲಗಳ ಪ್ರಕಾರ ಕೆಲವರು, ಪ್ರತಿಭಟನಾ ರೈತರ ಹತ್ಯೆ ಮಾಡಲು ಯೋಜಿಸಿದ್ದಾರೆ ಎಂದು ಆರೋಪಿಸಿ ನಕಲಿ ಟ್ವೀಟ್ ಮಾಡಿದ್ದರು. ನರಮೇಧಕ್ಕೆ ಪ್ರಚೋದನೆ ನೀಡುವುದು ಸಾರ್ವಜನಿಕ ಸುವ್ಯವಸ್ಥೆಗೆ ಗಂಭೀರ ಅಪಾಯವಾಗಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿ ಈ ಟ್ವಿಟರ್ ಖಾತೆಗಳನ್ನು ಮತ್ತು ಟ್ವೀಟ್‌ಗಳನ್ನು ನಿರ್ಬಂಧಿಸಲು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಆದೇಶಿಸಿದೆ ಎಂದು ತಿಳಿದು ಬಂದಿದೆ.