ಮುಂಬೈ:ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ ವಿರೋಧಿಸಿ ಎಂಇಎಸ್ ಕರಾಳ ದಿನಾಚರಣೆಗೆ ಮಹಾರಾಷ್ಟ್ರ ಸರ್ಕಾರ ಬೆಂಬಲ ನೀಡಿದೆ. ಮಹಾರಾಷ್ಟ್ರದ ಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಚಗನ್ ಭುಜ್ಬಲ್ ಅವರು ಎರಡು ರಾಜ್ಯಗಳ ಗಡಿಯಲ್ಲಿ ವಾಸಿಸುತ್ತಿರುವ ಜನರಿಗೆ ಪತ್ರ ಬರೆಯುವ ಮೂಲಕ ಹೊತ್ತಿ ಉರಿಯುತ್ತಿರುವ ಗಡಿ ಪ್ರದೇಶಗಳ ಘರ್ಷಣೆಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.
ಮಹಾರಾಷ್ಟ್ರದ ಗಡಿ ಪ್ರದೇಶ ಬೆಳಗಾವಿಯನ್ನು ಸೇರಿಸಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪತ್ರ ಬರೆದಿರುವ ಮಹಾರಾಷ್ಟ್ರದ ಮಂತ್ರಿ ಏಕನಾಥ್ ಶಿಂಧೆ, ಇದು ಯಾವಾಗ ಸಂಭವಿಸುತ್ತದೆಯೋ ಆ ದಿನ ಅದು ಐತಿಹಾಸಿಕ ದಿನವಾಗಿರುತ್ತದೆ. ಆ ದಿನದವರೆಗೂ ನಾವು ನಿಮ್ಮೊಂದಿಗಿದ್ದೇವೆ. ಇದಕ್ಕಾಗಿ ಆರು ದಶಕಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಈ ಹೋರಾಟಕ್ಕೆ ನಾವು ಶೀಘ್ರದಲ್ಲೇ ಇತಿಶ್ರೀ ಇಡಲಿದ್ದೇವೆ. ಈ ಮೂಲಕ ಗಡಿ ಪ್ರದೇಶಗಳಾದ ಬೆಳಗಾವಿ ಸೇರಿದಂತೆ ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.