ವಾಷಿಂಗ್ಟನ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಧಾರ್ಮಿಕ ಸ್ವಾತಂತ್ರ್ಯದ ವಿಷಯವನ್ನು ಚರ್ಚಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ಡೋನಾಲ್ಡ್ ಟ್ರಂಪ್ ನಮ್ಮ ಪ್ರಜಾಪ್ರಭುತ್ವದ ಸಾಂಪ್ರದಾಯಿಕ ಹಂಚಿಕೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಸರ್ವಜನಿಕ ಸಭೆ ಮತ್ತು ಖಾಸಗಿ ಚರ್ಚೆ ವೇಳೆ ಪ್ರಸ್ತಾಪಿಸಲಿದ್ದಾರೆ. ವಿಶೇಷವಾಗಿ ಧಾರ್ಮಿಕ ಸ್ವಾತಂತ್ರ್ಯದ ವಿಷಯವನ್ನು ಎತ್ತುತ್ತಾರೆ. ಇದು ಆಡಳಿತಕ್ಕೆ ತುಂಬಾ ಮುಖ್ಯವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
'ಧಾರ್ಮಿಕ ಅಲ್ಪಸಂಖ್ಯಾತರನ್ನ ಗೌರವಿಸುವುದು, ಎಲ್ಲಾ ಧರ್ಮದವರನ್ನೂ ಸಮಾನವಾಗಿ ಕಾಣುವುದು ಸೇರಿದಂತೆ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಭಾರತ ಸಂವಿಧಾನದಲ್ಲಿ ಹೇಳಲಾಗಿದೆ. ಆದಾಗ್ಯೂ ಇದೊಂದು ಮುಖ್ಯ ವಿಷಯವಾಗಿರುವುದರಿಂದ ಅಮೆರಿಕ ಅಧ್ಯಕ್ಷರು ಇದನ್ನ ಖಂಡಿತವಾಗಿಯೂ ಪ್ರಸ್ತಾಪಿಸುತ್ತಾರೆ' ಎಂದು ತಿಳಿಸಿದ್ದಾರೆ.
ಸಿಎಎ, ಎನ್ಆರ್ಸಿ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಕ್ಕೆ ಉತ್ತರಿಸಿದ ಅವರು, ನೀವು ಪ್ರಸ್ತಾಪಿಸಿದ ಕೆಲ ವಿಚಾರಗಳ ಬಗ್ಗೆ ನಮಗೂ ಆತಂಕವಿದೆ. ಪ್ರಧಾನಿ ಮೋದಿ ಅವರನ್ನು ಭೇಟಿಯಾದಾಗ ಅಧ್ಯಕ್ಷರು ಈ ವಿಚಾರದ ಬಗ್ಗೆ ಮಾತನಾಡಬಹುದು. ಭಾರತದಲ್ಲಿರುವ ಪ್ರಜಾತಂತ್ರ ಪರಂಪರೆ ಮತ್ತು ಧಾರ್ಮಿಕ ಸ್ವಾತಂತ್ರ್ಯದತ್ತ ಇಡೀ ವಿಶ್ವದ ಕಣ್ಣು ನೆಟ್ಟಿರುವುದನ್ನು ತಿಳಿಸಿಕೊಡಲಿದ್ದಾರೆ ಎಂದಿದ್ದಾರೆ.
ಭಾರತವು ಬಲವಾದ ಪ್ರಜಾಪ್ರಭುತ್ವ ಅಡಿಪಾಯವನ್ನು ಹೊಂದಿದೆ. ಭಾರತವು ಧಾರ್ಮಿಕ, ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯಿಂದ ಸಮೃದ್ಧವಾಗಿರುವ ದೇಶವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
'ಮೋದಿ ಅವರು ಕಳೆದ ವರ್ಷ ಚುನಾವಣೆಯಲ್ಲಿ ಗೆದ್ದ ನಂತರ ತಮ್ಮ ಮೊದಲ ಭಾಷಣದಲ್ಲಿ ಭಾರತದ ಧಾರ್ಮಿಕ ಅಲ್ಪಸಂಖ್ಯಾತರ ಆದ್ಯತೆ ಬಗ್ಗೆ ಮಾತನಾಡಿದ್ದರು. ಖಂಡಿತವಾಗಿಯೂ ಕಾನೂನಿನ ನಿಯಮದಡಿಯಲ್ಲಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಮಾನತೆ ನೀಡುವ ಭಾರತದತ್ತ ವಿಶ್ವದ ಕಣ್ಣು ನೆಟ್ಟಿದೆ ಎಂದು ಮೋದಿ ತಿಳಿಸಿದ್ದರು' ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.