ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕೊರೊನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ನಿರ್ಲ್ಯಕ್ಷ ವಹಿಸಿ ಐತಿಹಾಸಿಕ ರಾಷ್ಟ್ರೀಯ ದುರಂತಕ್ಕೆ ಕಾರಣರಾಗಿದ್ದಾರೆ ಎಂದು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಆರೋಪಿಸಿದ್ದಾರೆ.
"ಅಧ್ಯಕ್ಷರ ಮಾತುಗಳು ವಿನಾಶಕಾರಿ ಸತ್ಯವನ್ನು ತಿಳಿಸುತ್ತಿವೆ. ಅಮೆರಿಕದಲ್ಲಿ ಕೊರೊನಾ ದುರಂತವನ್ನು ತಪ್ಪಿಸಬಹುದಿತ್ತು. ಆದರೆ ಟ್ರಂಪ್ ಕೊರೊನಾದಿಂದ ಸಂಭವಿಸಬಹುದಾದ ಅಪಾಯಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇದರಿಂದ ಇಡೀ ದೇಶವೇ ಗಂಭೀರ ಪರಿಸ್ಥಿತಿಗೆ ತಲುಪಿತು" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಈ ನೋವನ್ನು ತಪ್ಪಿಸಬಹುದಿತ್ತು. ಆದರೆ ಅಧ್ಯಕ್ಷ ಟ್ರಂಪ್ ಸತ್ಯವನ್ನು ಹೇಳಲು ಮತ್ತು ಅಮೆರಿಕದ ಜನರನ್ನು ರಕ್ಷಿಸಲು ಮುಂದಾಗದೆ ನಿರಾಕರಿಸಿದರು. ದುಃಖಿತ ಕುಟುಂಬಗಳ ಜೀವನಕ್ಕೆ ಮತ್ತು ನಮ್ಮ ಆರ್ಥಿಕತೆಗೆ ಟ್ರಂಪ್ ಅವರು ದುರಂತವನ್ನು ತಂದೊಡ್ಡಿದ್ದಾರೆ. ಇದು ಐತಿಹಾಸಿಕ ರಾಷ್ಟ್ರೀಯ ದುರಂತ" ಎಂದು ಅವರು ಹೇಳಿದರು.
"ಅಮೆರಿಕದಲ್ಲಿ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದರೂ ಸಹ ತಜ್ಞರ ಮಾತನ್ನು ಕೇಳಲು ಟ್ರಂಪ್ ಸಿದ್ಧರಿಲ್ಲ. ವಿಜ್ಞಾನಿಗಳ ಮಾತನ್ನು ನಿರಾಕರಿಸುತ್ತಾರೆ. ವೈರಸ್ನ್ನು ಹತ್ತಿಕ್ಕಲು ಮತ್ತು ಅಮೆರಿಕನ್ನರ ಜೀವನವನ್ನು ರಕ್ಷಿಸಲು ಅಗತ್ಯವಾದ ಕ್ರಮ ತೆಗೆದುಕೊಳ್ಳುತ್ತಿಲ್ಲ" ಎಂದು ನ್ಯಾನ್ಸಿ ವಾಗ್ದಾಳಿ ನಡೆಸಿದ್ದಾರೆ.