ಅಕ್ಟೋಬರ್ 21ರಂದು ನಡೆದ ಕೆನಡಾ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಜಸ್ಟಿನ್ ಟ್ರುಡೊ ನೇತೃತ್ವದ ಲಿಬರಲ್ ಪಕ್ಷ ಸಂಸತ್ತಿನ ಬಹುಮತ ಕಳೆದುಕೊಳ್ಳಲಿದೆ ಎಂಬ ನಿರೀಕ್ಷೆ ಬಲವಾಗಿತ್ತು. ಮತಗಟ್ಟೆ ಸಮೀಕ್ಷೆಯ ಅಭಿಪ್ರಾಯಗಳನ್ನು ಫಲಿತಾಂಶ ಸಮರ್ಥಿಸಿತು. ಸರಳ ಬಹುಮತ ಗಳಿಸಲು 157 (ಒಟ್ಟು 338) ಸ್ಥಾನ ಅಗತ್ಯವಿದ್ದು ಆಡಳಿತಾರೂಢ ಪಕ್ಷಕ್ಕೆ 20 ಸ್ಥಾನಗಳ ಕೊರತೆ ಎದುರಾಯಿತು. ಭಾರತದಲ್ಲಿರುವಂತೆ ಫಸ್ಟ್- ಪಾಸ್ಟ್- ದ- ಪೋಸ್ಟ್ ಚುನಾವಣಾ ವ್ಯವಸ್ಥೆ ಅಲ್ಲಿಯೂ ಜಾರಿಯಲ್ಲಿದೆ. ಆ ಪ್ರಕಾರ ಲಿಬರಲ್ ಪಕ್ಷಕ್ಕಿಂತಲೂ, ಪ್ರಮುಖ ವಿರೋಧಪಕ್ಷವಾದ ಕನ್ಸರ್ವೇಟೀವ್ಸ್ ಹೆಚ್ಚು ಮತಗಳನ್ನು ಕಲೆಹಾಕಿದರೂ ಕೇವಲ 121 ಸ್ಥಾನಗಳನ್ನು ಗೆಲ್ಲಲು ಶಕ್ತವಾಯಿತು.
ಚೌಕಾಸಿ ನಡೆದು 24 ಸಂಸದರ ಬಲದ ಎಡಪಂಥೀಯ ನ್ಯಾಷನಲ್ ಡೆಮಾಕ್ರಟಿಕ್ ಪಕ್ಷದ (ಎನ್ ಡಿ ಪಿ) ನೇತೃತ್ವ ವಹಿಸಿದ; ಕಿಂಗ್ ಮೇಕರ್ ಎನಿಸಿಕೊಂಡಿರುವ ಭಾರತ ಮೂಲದ ಕೆನಡಾ ಪ್ರಜೆ ಮುನ್ನೆಲೆಗೆ ಬರಬಹುದು ಎಂದು ಕೆಲವರು ಇನ್ನೂ ನಿರೀಕ್ಷಿಸುತ್ತಿದ್ದಾರೆ. ಈ ಬಗ್ಗೆ ಭಾರತ ಸಂತಸಪಡಬೇಕಿತ್ತು. ಆದರೆ ಸಣ್ಣದೊಂದು ಸಂಗತಿ ಅದಕ್ಕೆ ತೊಡರಾಗಿದೆ. ಆ ಕೆನಡಾ ಪ್ರಜೆ ಖಲಿಸ್ತಾನದ ಬಗ್ಗೆ ಸಹಾನುಭೂತಿ ಹೊಂದಿದವರು ಎನ್ನಲಾದ ಜಗ್ಮೀತ್ ಸಿಂಗ್ ಆಗಿದ್ದು, ಎಂದಿನಂತೆ ತನಗೆ ನುಂಗಲಾರದ ತುತ್ತಾಗಬಹುದು ಎಂಬ ಎಣಿಕೆ ಭಾರತದ್ದು. ಸರಳ ಬಹುಮತ ಗಳಿಸದ ಟ್ರುಡೊ ಅವರ ಪಕ್ಷ ಈಗ ಎನ್ ಡಿಪಿ ಅಥವಾ ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬ್ಲಾಕ್ ಕ್ವಿಬೆಕೊಯಿಸ್ ಪಾರ್ಟಿಯನ್ನು ನೆಚ್ಚಿಕೊಂಡಿದೆ. ಈ ಎರಡು ಪಕ್ಷಗಳಲ್ಲಿ ಯಾವುದಾದರೂ ಒಂದನ್ನು ಅಥವಾ ಎರಡನ್ನೂ ವಿಷಯಾಧಾರಿತ ಬಾಹ್ಯ ಬೆಂಬಲ ನೀಡುವಂತೆ ಕೋರಲಿದೆ. ಹೀಗಾದರೆ ಅದು ಭಾರತ- ಕೆನಡಾ ಬಾಂಧವ್ಯಕ್ಕೆ ಒಳ್ಳೆಯ ಶಕುನವಾಗದು.
ಸಹಜ ಮತ್ತು ನಿಕಟ ಒಡನಾಡಿ ದೇಶಗಳು ಎಂದು ಯಾವುದಾದರೂ ಇದ್ದರೆ ನಿರ್ವಿವಾದವಾಗಿ ಅದು ಭಾರತ ಮತ್ತು ಕೆನಡಾ. ಎರಡೂ ದೇಶಗಳ ನಡುವೆ ಅನೇಕ ಸಮಷ್ಠಿ ಶಕ್ತಿ ಮತ್ತು ಸಾಮ್ಯತೆ ಇದ್ದು ಬಹುಜನಾಂಗ, ಬಹುಸಂಸ್ಕೃತಿ, ಸದೃಢ ಪ್ರಜಾಪ್ರಭುತ್ವ, ಇಂಗ್ಲಿಷ್ ಪ್ರೌಢಿಮೆ, ಕಾನೂನು ಪಾಲನೆ, ಅನಿವಾಸಿಗಳ ಜೊತೆಗಿನ ಸಂಬಂಧ, ಪೂರಕ ಆರ್ಥಿಕತೆ, ಶೈಕ್ಷಣಿಕ ನಂಟು ಅವುಗಳಲ್ಲಿ ಕೆಲವು. ಆದರೂ ವಿಧಿಗೆ ಈ ಬಾಂಧವ್ಯ ಇಷ್ಟ ಇಲ್ಲವೆಂದು ತೋರುತ್ತದೆ. ಕ್ಷಣಿಕ ಮೈತ್ರಿಯ ಹೊರತಾಗಿ ಎರಡೂ ದೇಶಗಳು ಪರಸ್ಪರ ಭಿನ್ನರಾಗ ಹಾಡಿವೆ.
ನಂಬಲಸಾಧ್ಯವಾದರೂ 42 ವರ್ಷಗಳ ಬಳಿಕ 2015 ರ ಏಪ್ರಿಲ್‌ನಲ್ಲಿ ಕೆನಡಾಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಶ್ರೀ ನರೇಂದ್ರ ಮೋದಿ ಎಂಬುದು ವಾಸ್ತವ. ಪರಮಾಣು ‘ಕಾರ್ಮೋಡ’ ಇಲ್ಲವಾಗಿಸಿ 2010ರಲ್ಲಿ ನಡೆದ ದ್ವಿಪಕ್ಷೀಯ ನಾಗರಿಕ ಪರಮಾಣು ಸಹಕಾರ ಒಪ್ಪಂದದ ಧ್ಯೋತಕವಾಗಿ ಈ ಮಹತ್ವದ ಭೇಟಿ ಏರ್ಪಟ್ಟಿತು ಮತ್ತು ಎಲ್ಲ ನಿಟ್ಟಿನಿಂದಲೂ ನಿರೀಕ್ಷೆಗೂ ಮೀರಿದ ಯಶ ನೀಡಿತು. ಮೊಟ್ಟಮೊದಲ ಬಾರಿಗೆ ಕನ್ಸರ್ವೇಟೀವ್ ಪಕ್ಷದಿಂದ ಚುನಾಯಿತರಾಗಿದ್ದ ಅಂದಿನ ಪ್ರಧಾನಿ ಸ್ಟೀಫನ್ ಹಾರ್ಪರ್ ಭಾರತದ ಏಕತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುವುದಾಗಿ ಸಾರ್ವಜನಿಕವಾಗಿ ವಾಗ್ದಾನ ಮಾಡಿದರು. ಇದು ಎರಡೂ ದೇಶಗಳ ಸಂಬಂಧದಲ್ಲಿ ಹೊಸ ತಿರುವು ನೀಡಿತು.
ಆದರೆ, 2015 ರ ಅಕ್ಟೋಬರ್ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯುವ ಮತ್ತು ಟಿವಿ ವಾಹಿನಿಗಳ ಕಣ್ಮಣಿ ಜಸ್ಟಿನ್ ಟ್ರುಡೊ ಬಹುಮತದೊಂದಿಗೆ ಅಧಿಕಾರ ಹಿಡಿದರು. ಅಭಿನಂದನಾ ಕರೆ ಮಾಡಿದ ಮತ್ತು ಭಾರತಕ್ಕೆ ಭೇಟಿ ನೀಡುವಂತೆ ಆತ್ಮೀಯ ಆಹ್ವಾನ ನೀಡಿದ ಮೊದಲ ನಾಯಕರಲ್ಲಿ ಪ್ರಧಾನಿ ಮೋದಿ ಒಬ್ಬರಾಗಿದ್ದರು. ಆದರೆ, ತಮ್ಮ ಸರ್ಕಾರ ಮತ್ತು ಪಕ್ಷದೊಳಗಿನ ಖಲಿಸ್ತಾನಿ ವಿಚಾರಗಳಿಗೆ ಕಿವಿಗೊಟ್ಟ ಜನಪ್ರಿಯ ಹೊಸ ನೇತಾರನಿಗೆ ಬೇರೆಯದೇ ಆಲೋಚನೆ ಇತ್ತು.
ಸಿಖ್ ಸಮುದಾಯದವರು ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ರಾಜಕೀಯ ಧ್ವನಿಯಾಗಿ ಹೃದಯಾಂತರಾಳದಿಂದ ಟ್ರುಡೊ ಅವರ ಬೆಂಬಲಕ್ಕೆ ನಿಂತಿದ್ದಾರೆ. ಆ ಸಮುದಾಯದಿಂದ ‘ಜಸ್ಟಿನ್ ಸಿಂಗ್’ ಎಂದು ಕರೆಸಿಕೊಳ್ಳುವ ಟ್ರುಡೊ, ಕೃತಜ್ಞತಾಪೂರ್ವಕವಾಗಿ ಹರ್ಜಿತ್ ಸಿಂಗ್ ಸಜ್ಜನ್ ಅವರಿಗೆ ರಕ್ಷಣಾ ಸಚಿವ ಸ್ಥಾನ ಸೇರಿದಂತೆ ಭಾರಿ ತೂಕದ ಖಾತೆಗಳನ್ನು ಹಂಚಿದ್ದಾರೆ. ಚುನಾವಣೆ ಸಮಯದಲ್ಲಿ ಮಿತ್ರ ರಾಜಕಾರಣಿಗಳಿಗೆ ಅಗತ್ಯ ಜನಬಲ ಮತ್ತು ಧನಬಲ ಒದಗಿಸುವ ಖಲಿಸ್ತಾನಿ ಶಕ್ತಿಗಳು ಸಿಖ್ ಮತಬ್ಯಾಂಕನ್ನು ನಿಯಂತ್ರಿಸುತ್ತಿವೆ. ಆ ಮತಬ್ಯಾಂಕನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಟ್ರುಡೊ ಎಲ್ಲ ರೀತಿಯಲ್ಲಿ ಶ್ರಮಿಸುತ್ತಿದ್ದಾರೆ. ಕೆನಡಾದ ಸಿರಿವಂತ ಗುರುದ್ವಾರಗಳ ಮೇಲೆ ಆರ್ಥಿಕ ಮತ್ತು ಆಡಳಿತಾತ್ಮಕ ನಿಯಂತ್ರಣ ಸಾಧಿಸಿರುವ ಈ ಶಕ್ತಿಗಳು ತಮ್ಮ ಪ್ರತ್ಯೇಕತಾವಾದಿ ಕಾರ್ಯಸೂಚಿಯನ್ನು ವಿಸ್ತರಿಸಲು ಈ ಸಂಪನ್ಮೂಲವನ್ನು ಯಾವುದೇ ಮುಜುಗರ ಇಲ್ಲದೇ ಬಳಸುತ್ತಿವೆ. ಕೆನಡಾ ಆಡಳಿತ ತನ್ನ ಅನುಕೂಲಕ್ಕಾಗಿ ಬೇರೆಯದೇ ಹಾದಿಯ ನಿರೀಕ್ಷೆಯಲ್ಲಿದೆ.