ಮುಂಬೈ:ತಮಗೆ ಬೇಕಾದ ರೀತಿಯಲ್ಲಿ ಸುದ್ದಿ ವಾಹಿನಿಗಳ ಟಿಆರ್ಪಿ ಬದಲಾಯಿಸುವ ಜಾಲವನ್ನು ಇದೀಗ ಮುಂಬೈ ಪೊಲೀಸರು ಭೇದಿಸಿದ್ದು, ಕೆಲವು ಚಾನೆಲ್ಗಳು ಜನರಿಗೆ ಹಣ ನೀಡಿ ತಮ್ಮ ಚಾನೆಲ್ ವೀಕ್ಷಿಸುವಂತೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಎರಡು ಚಾನೆಲ್ಗಳ ಮುಖ್ಯಸ್ಥರನ್ನು ಬಂಧಿಸಿದ್ದು, ಪ್ರಕರಣವನ್ನು ಆಳವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಹಗರಣದಲ್ಲಿ ಪ್ರಮುಖ ಚಾನೆಲ್ ಸೇರಿ ಮೂರು ಚಾನೆಲ್ಗಳು ಭಾಗಿಯಾಗಿವೆ ಎಂದು ಮುಂಬೈ ಪೊಲೀಸ್ ಆಯುಕ್ತ ಪರಮ್ವೀರ್ ಸಿಂಗ್ ಹೇಳಿದ್ದಾರೆ.
ಟಿಆರ್ಪಿ ಹಗರಣದಲ್ಲಿ ಭಾಗಿಯಾಗಿರುವ ಚಾನೆಲ್ಗಳ ಸಿಬ್ಬಂದಿಯ ತನಿಖೆ ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ. ತಪ್ಪಿತಸ್ಥರೆಂದು ಕಂಡುಬಂದಲ್ಲಿ ಆಯಾ ಚಾನೆಲ್ಗಳ ಬ್ಯಾಂಕ್ ಖಾತೆ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಸುದ್ದಿ ವಾಹಿನಿಗಳ ಪರವಾಗಿ ಪಕ್ಷದ ಕೆಲವು ಕಾರ್ಯಕರ್ತರು, ಕೆಲವೊಂದು ಕುಟುಂಬಗಳಿಗೆ ಮಾಸಿಕ ಆಧಾರದ ಮೇಲೆ ಹಣ ನೀಡುತ್ತಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯ ಬಂಧನ ಮಾಡಲಾಗಿದ್ದು, ಆತನ ಖಾತೆಯಿಂದ 20 ಲಕ್ಷ ರೂ. ಹಾಗೂ ಲಾಕರ್ನಿಂದ 8.5 ಲಕ್ಷ ರೂ ಜಪ್ತಿ ಮಾಡಲಾಗಿದೆ. ಇದರಲ್ಲಿ ಮೂರು ಚಾನೆಲ್ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ.