ನವದೆಹಲಿ: ಟ್ರಿಪಲ್ ತಲಾಖ್ನ ಅರ್ಜಿದಾರರಲ್ಲಿ ಪ್ರಮುಖರಾದ ಇಶ್ರತ್ ಜಹಾನ್ ಗುರುವಾರದಂದು ರಕ್ಷಾ ಬಂಧನದ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಗೆ ರಾಖಿ ಕಟ್ಟಿ ಸಂಭ್ರಮಿಸಿದರು.
2014ರಲ್ಲಿ ಇಶ್ರತ್ ಜಹಾನ್ನ ಪತಿ ದುಬಾಯಿನಿಂದಲೇ ಫೋನ್ ಕಾಲ್ ಮೂಲಕ ಮೂರು ಬಾರಿ ತಲಾಖ್ ಹೇಳಿದ್ದು, ಈ ವಿರುಧ್ಧ ಜಹಾನ್ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು. ಇತ್ತೀಚೆಗೆ, ತ್ವರಿತ ಟ್ರಿಪಲ್ ತಲಾಖ್ ನೀಡುವ ಪತಿಗೆ ಆಗಸ್ಟ್ 1ರಿಂದ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಗುವ ವಿವಾಹದ ಹಕ್ಕುಗಳ ರಕ್ಷಣೆ ಮಸೂದೆಗೆ ಸಂಸತ್ತು 2019 ಜುಲೈ 30ರಂದು ಅನುಮೋದನೆ ನೀಡಿದೆ.
ಪಾಕಿಸ್ತಾನದಿಂದ ಆಗಮಿಸಿದ ಇನ್ನೋರ್ವ ರಾಖಿ ಸಹೋದರಿ ಖಮರ್ ಮೊಹಸಿನ್ ಶೈಕ್ ಕೂಡಾ ಪ್ರಧಾನಿಗೆ ರಾಖಿ ಕಟ್ಟಿ ಅವರ ಉತ್ತಮ ಆರೋಗ್ಯಕ್ಕೆ ಪ್ರಾರ್ಥಿಸಿದ್ದಾರೆ. ಪ್ರತಿ ವರ್ಷ ರಾಖಿ ಕಟ್ಟುವ ಅವಕಾಶ ಸಿಗುವುದು ಸಂತಸದ ವಿಷಯ, ಮುಂಬರುವ 5 ವರ್ಷಗಳಲ್ಲಿ ಪ್ರಧಾನಿಯ ಕಾರ್ಯ ಜೊತೆಗೆ ಅವರು ತೆಗೆದುಕೊಳ್ಳುವ ನಿರ್ಧಾರವನ್ನು ಗುರುತಿಸುವಂತಾಗಲಿ ಎಂದು ಪ್ರಾರ್ಥಿಸಿದರು. ಜೊತೆಗೆ, ಮುಸ್ಲಿಂ ಮಹಿಳೆಯರ ಹಿತದೃಷ್ಟಿಯಿಂದ ಪ್ರಧಾನಿ ಟ್ರಿಪಲ್ ತಲಾಖ್ ವಿರುದ್ಧ ಉತ್ತಮ ನಿರ್ಧಾರ ಕೈಗೊಂಡಿದ್ದಾರೆಂದು ಶ್ಲಾಘಿಸಿದರು.
ಅಷ್ಟೇ ಅಲ್ಲದೇ, ಮಹಿಳೆಯರು ಮತ್ತ ವಿವಿಧ ಕೌಶಲ್ಯವುಳ್ಳ ಮಕ್ಕಳು ಪ್ರಧಾನಿಯೊಂದಿಗೆ ಸಂವಹನ ನಡೆಸಿ, ಅವರ ರಕ್ಷಣೆಗೆಂದು ಪವಿತ್ರ ದಾರವನ್ನು ಕಟ್ಟಿದ್ದಾರೆ.
ರಕ್ಷಾ ಬಂಧನ ಒಡಹುಟ್ಟಿದವರ ನಡುವಿನ ಬಾಂಧವ್ಯವನ್ನು ಆಚರಿಸುವ ಹಬ್ಬವಾಗಿದ್ದು, ದೇಶದಾದ್ಯಂತ ಪ್ರೀತಿ ಉತ್ಸಾಹದಿಂದ ಆಚರಿಸಲಾಯಿತು. ಸಾಂಪ್ರದಾಯಿಕವಾಗಿ ಈ ದಿನದಂದು, ಸಹೋದರಿಯರು ಸಹೋದರನ ಕೈಗೆ ರಾಖಿ ಕಟ್ಟುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.