ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಸತ್ಯಜೀತ್ ಬಿಸ್ವಾಸ್ ಅವರನ್ನ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಇಂದು ಸಂಜೆ ನಡೆದಿದೆ.
37 ವರ್ಷದ ಶಾಸಕ ಸತ್ಯಜೀತ್ ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಈ ಘಟನೆ ನಡೆದಿದ್ದು, ಈ ವೇಳೆ ರಾಜ್ಯ ಸಚಿವ ರತ್ನಾ ಗೋಸಾ ಹಾಗೂ ತೃಣಮೂಲ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಗೌರಿಶಂಕರ್ ದತ್ತಾ ಭಾಗಿಯಾಗಿದ್ದರು.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮ್ಯಾರೇಜ್ ಆಗಿದ್ದ ಸತ್ಯಜೀತ್, ಹಿಂದುಳಿದ ವರ್ಗದ ಪ್ರಬಲ ಮುಖಂಡರಾಗಿದ್ದರು. ಪೂಜಾ ಕಾರ್ಯಕ್ರಮ ಮುಗಿಸಿ ಬರುತ್ತಿದ್ದಾಗ ಇವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆದಿದೆ. ಹತ್ತಿರದಿಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣ ಅವರನ್ನ ಆಸ್ಪತ್ರೆಗೆ ದಾಖಲು ಮಾಡಿದ್ರೂ ಪ್ರಯೋಜನವಾಗಿಲ್ಲ. ಇನ್ನು ಶಾಸಕನ ಮೇಲೆ ಗುಂಡಿನ ದಾಳಿ ನಡೆದು ಸಾವನ್ನಪ್ಪುತ್ತಿದ್ದಂತೆ ತೃಣಮೂಲ ಕಾಂಗ್ರೆಸ್ ಬಿಜೆಪಿ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮರ್ಡರ್ ಹಿಂದೆ ಅದರ ಕೈವಾಡವಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಸತ್ಯಜೀತ್ ಶಾಸಕರಾಗಿ ಆಯ್ಕೆಯಾದಾಗ ಅದನ್ನ ವಿರೋಧಿಸಿ ಬಿಜೆಪಿಯ ಮುಕುಲ್ ರಾಯ್ ಪ್ರತಿಭಟನೆ ಸಹ ನಡೆಸಿದರು. ಅದೇ ಆಕ್ರೋಶದಲ್ಲಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.