ನವದೆಹಲಿ:ಅಪ್ಪಟ ಹಿಂದುತ್ವವಾದಿ, ಹಿಂದೂಗಳಿಗೆ ಅನ್ಯಾಯವಾದಾಗ ಅದರ ವಿರುದ್ಧ ದನಿಯೆತ್ತಿ ಹೋರಾಡುವಲ್ಲಿ ಮೊದಲಿಗರಾಗಿದ್ದ ಹಾಗೂ ಶಿವಸೇನಾ ಪಕ್ಷದ ಸ್ಥಾಪಕ ದಿ.ಬಾಳ್ ಠಾಕ್ರೆ ಅವರ 94ನೇ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.
ಬಾಳ್ ಠಾಕ್ರೆ ಅವರು ಅತ್ಯಂತ ಧೈರ್ಯಶಾಲಿ ಮತ್ತು ಅದಮ್ಯ ಚೇತನ. ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಲು ಅವರು ಎಂದಿಗೂ ಹಿಂಜರಿಯುತ್ತಿರಲಿಲ್ಲ. ಅವರ ಸಿದ್ಧಾಂತ ಮತ್ತು ಮೌಲ್ಯಗಳು ಇಂದಿಗೂ ಪ್ರಸ್ತುತ. ಲಕ್ಷಾಂತರ ಮಂದಿಗೆ ಪ್ರೇರಣೆಯಾಗಿದ್ದಾರೆ ಎಂದು ಮೋದಿ ಟ್ವೀಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಲೇಖಕ ಕೇಶವ ಸೀತಾರಾಂ ಠಾಕ್ರೆ ಅವರ ನಾಲ್ವರು ಮಕ್ಕಳಲ್ಲಿ 2ನೇ ಮಗನಾಗಿಬಾಳ್ ಠಾಕ್ರೆ 1926ರ 23ರಂದು ಜನಿಸಿದರು. ಬಾಳ್ ಕೇಶವ್ ಠಾಕ್ರೆ ಅವರ ಪೂರ್ಣ ಹೆಸರು. ವ್ಯಂಗ್ಯ ಚಿತ್ರಕಾರನಾಗಿ ವೃತ್ತಿ ಜೀವನ ಆರಂಭಿಸಿದ ಅವರು 'ದಿ ಫ್ರೀ ಪ್ರೆಸ್ ಜರ್ನಲ್' ಎಂಬ ಆಂಗ್ಲ ದಿನಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು.
ಆದರೆ, 1960ರಲ್ಲಿ ಈ ವೃತ್ತಿ ತೊರೆದು ತಮ್ಮದೇ ಆದ ಮಾರ್ಮಿಕ್ ಎಂಬ ವ್ಯಂಗ್ಯ ಚಿತ್ರ ಮಾಸಿಕ ಪತ್ರಿಕೆ ಆರಂಭಿಸಿ ಹೊಸ ದಾರಿ ಕಂಡುಕೊಂಡರು. ಬಳಿಕ 1966ರ ಜೂನ್ 19ರಂದು ಠಾಕ್ರೆ ಅವರು ಶಿವಸೇನಾ ಪಕ್ಷವನ್ನು ಸ್ಥಾಪಿಸಿದರು.2012ರ ನವೆಂಬರ್ 17 ರಂದು ಅವರು ನಿಧನರಾದರು. ಉದ್ದವ್ ಠಾಕ್ರೆ (ಪ್ರಸ್ತುತ ಮಹಾರಾಷ್ಟ್ರದ ಮುಖ್ಯಮಂತ್ರಿ), ಜಯದೇವ್ ಠಾಕ್ರೆ, ಬಿಂದು ಮಾದವ್ ಠಾಕ್ರೆ ಅವರು ಠಾಕ್ರೆ ಮಕ್ಕಳು.