ನವದೆಹಲಿ: ನೂತನ ಮೋಟಾರು ವಾಹನ ಕಾಯ್ದೆ ಜಾರಿ ವಿರೋಧಿಸಿ ಯುನೈಟೆಡ್ ಫ್ರಂಟ್ ಆಫ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಬಂದ್ಗೆ ಕರೆ ನೀಡಿದ್ದು, ವಾಹನ ಸಂಚಾರ ಸಂಪೂರ್ಣ ಸ್ತಬ್ಧವಾಗಿದೆ.
ಮೋಟಾರು ವಾಹನ ಕಾಯ್ದೆಗೆ ವಿರೋಧ: ಇಂದು ರಾಷ್ಟ್ರ ರಾಜಧಾನಿ ಸ್ತಬ್ಧ!
ಯುನೈಟೆಡ್ ಫ್ರಂಟ್ ಆಫ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ನೂತನ ಮೋಟಾರು ವಾಹನ ಕಾಯ್ದೆ ವಿರೋಧಿಸಿ ನವದೆಹಲಿಯಲ್ಲಿ ಬಂದ್ಗೆ ಕರೆ ನೀಡಿದೆ.
ಆಟೋ, ಬಸ್, ಶಾಲಾ ವಾಹನ, ಟೂರಿಸ್ಟ್ ಬಸ್, ಓಲಾ ಊಬರ್ ಸೇರಿದಂತೆ ಎಲ್ಲಾ ವಾಹನಗಳ ಚಾಲಕರು ಮತ್ತು ಮಾಲೀಕರು ಬಂದ್ಗೆ ಬೆಂಬಲ ಸೂಚಿಸಿದ್ದು, ಮುಂಜಾನೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ವಾಹನ ಸಂಚಾರ ಇರುವುದಿಲ್ಲ. ಇನ್ನು ವಾಹನ ಸಂಚಾರ ಬಂದ್ ಆಗಿರುವ ಕಾರಣ ಶಾಲಾ-ಕಾಲೇಜುಗಳು ಕೂಡ ಬಂದ್ ಆಗಿವೆ. ಸರ್ಕಾರ ಯಾವುದೇ ಸಲಹೆ ಅಥವಾ ಆದೇಶ ಹೊರಡಿಸಿಲ್ಲವಾದರೂ ಬಸ್‌ಗಳು ಲಭ್ಯವಿಲ್ಲದ ಕಾರಣ ಕೆಲ ಶಾಲೆಗಳು ರಜೆ ಘೋಷಣೆ ಮಾಡಿವೆ.
ಕಳೆದ 15 ದಿನಗಳಿಂದ ಕೇಂದ್ರ ಮತ್ತು ದೆಹಲಿ ಸರ್ಕಾರದಿಂದ ಹೊಸ ಮೋಟಾರು ವಾಹನ ಕಾಯ್ದೆಗೆ ಸಂಬಂಧಿಸಿದಂತೆ ನಮ್ಮ ಕುಂದುಕೊರತೆಗಳನ್ನು ಪರಿಹರಿಸುವಂತೆ ಕೇಳಿಕೊಂಡಿದ್ದೇವೆ. ಆದರೆ ಯಾವುದೇ ಪರಿಹಾರ ಸಿಗದ ಕಾರಣ ಒಂದು ದಿನದ ಮುಷ್ಕರಕ್ಕೆ ಮುಂದಾಗಿದ್ದೇವೆ ಎಂದು ಯುನೈಟೆಡ್ ಫ್ರಂಟ್ ಆಫ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶ್ಯಾಮ್ಲಾಲ್ ಗೋಲಾ ತಿಳಿಸಿದ್ದಾರೆ.