ಕೇರಳ/ಮಹಾರಾಷ್ಟ್ರ/ರಾಜಸ್ಥಾನ:ಇಂದು ಕೇರಳದಲ್ಲಿ ಎಂಟು, ಪುಣೆಯಲ್ಲಿ ಮತ್ತೆ ಮೂರು ಹಾಗೂ ಜೈಪುರದಲ್ಲಿ ಮತ್ತೊಂದು ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಭಾರತದಲ್ಲಿ ಸೋಂಕಿತರ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.
ಪುಣೆಯಲ್ಲಿ ಇಂದು ಮೂವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಐದಕ್ಕೆ ಏರಿದೆ ಎಂದು ಪುಣೆ ಜಿಲ್ಲಾಧಿಕಾರಿ ನವಲ್ ಕಿಶೋರ್ ರಾಮ್ ತಿಳಿಸಿದ್ದಾರೆ.
ಹಾಗೆಯೇ ಕೇರಳದಲ್ಲಿ ಒಂದೇ ದಿನ ಎಂಟು ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ದೃಢಪಡಿಸಿದ್ದಾರೆ. ಈ ಹಿಂದೆ ಸೋಂಕಿನಿಂದ ಬಳಲುತ್ತಿರುವ ಮೂರು ವರ್ಷದ ಮಗುವಿನ ಪೋಷಕರಿಗೆ ಕೂಡ ಸೋಂಕು ತಗುಲಿರುವುದು ಖಚಿತವಾಗಿದೆ. ಇವರು ಇಟಲಿಯಿಂದ ಭಾರತಕ್ಕೆ ಹಿಂದಿರುಗಿದ್ದರು.
ಇನ್ನು ರಾಜಸ್ಥಾನದ ಜೈಪುರದಲ್ಲಿ ಕೂಡ ಇನ್ನೊಬ್ಬ ವ್ಯಕ್ತಿಗೆ ಸೋಂಕು ತಗುಲಿರುವುದು ವರದಿಯಾಗಿದ್ದು, ಭಾರತದಲ್ಲಿ ಈವರೆಗೆ ಒಟ್ಟು 54 ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿವೆ.