ನವದೆಹಲಿ:ಒಂದು ವರ್ಷದಿಂದ ಕೊರೊನಾ ವಿರುದ್ಧ ಹೋರಾಡುತ್ತಿರುವ ಭಾರತ ಜಯ ಗಳಿಸುವಲ್ಲಿ ಯಶಸ್ವಿಯಾಗುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರು, ಮೃತರು ಹಾಗೂ ಆ್ಯಕ್ಟಿವ್ ಕೇಸ್ಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಲಸಿಕೆ ಲಭ್ಯವಾಗಿರುವುದು ಜನರಲ್ಲಿ ಧೈರ್ಯ ಮತ್ತು ಆಶಾಭಾವನೆ ಮೂಡಿಸಿದೆ.
ಕಳೆದ 24 ಗಂಟೆಗಳಲ್ಲಿ 11,427 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 118 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 1,07,57,610 ಹಾಗೂ ಮೃತರ ಸಂಖ್ಯೆ 1,54,392ಕ್ಕೆ ಏರಿಕೆಯಾಗಿದೆ. ಆದರೆ ಒಟ್ಟು ಸೋಂಕಿತರ 1,04,34,983 ಮಂದಿ ಗುಣಮುಖರಾಗಿದ್ದು, 1,68,235 ಕೇಸ್ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಆರೋಗ್ಯ ಇಲಾಖೆ ಶೇರ್ ಮಾಡಿದ ವಿಡಿಯೋ ಜನವರಿ 16ರಿಂದ ಭಾರತದಲ್ಲಿ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನ ಆರಂಭಗೊಂಡಿದ್ದು, 37 ಲಕ್ಷಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಲಸಿಕೆ ಹಾಕಿಸಿಕೊಂಡವರಿಗೆ ಜ್ವರ, ತಲೆಸುತ್ತುವಿಕೆ, ಅಲರ್ಜಿ, ತಲೆನೋವಿನಂತಹ ಸಣ್ಣಪುಟ್ಟ ವ್ಯತ್ಯಾಸಗಳು ಕಂಡುಬರುವುದು ಸಹಜ. ಯಾವುದೇ ಲಸಿಕೆ ಪಡೆದರೂ ಅಡ್ಡ ಪರಿಣಾಮಗಳು ಇದ್ದೇ ಇರುತ್ತವೆ. ನಮ್ಮ ಲಸಿಕೆಗಳು ಸುರಕ್ಷಿತ ಹಾಗೂ ಪರಿಣಾಮಕಾರಿ ಎಂದು ಆರೋಗ್ಯ ಇಲಾಖೆ ಹೇಳುತ್ತಲೇ ಬಂದಿದೆ.
ಕೋವಿಡ್ ಟೆಸ್ಟಿಂಗ್ ಅಪ್ಡೇಟ್ಸ್ ಜನವರಿ 31ರ ವರೆಗೆ 19,70,92,635 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 5,04,263 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.