ಕೋಲ್ಕತ್ತಾ(ಪಶ್ಚಿಮ ಬಂಗಾಳ):ಚಲಿಸುವ ಕಾರಿನಲ್ಲಿ ಕಿರುಕುಳಕ್ಕೆ ಒಳಗಾಗುತ್ತಿದ್ದ ಮಹಿಳೆಯನ್ನು ತನ್ನ ಪ್ರಾಣವನ್ನೂ ಪಣಕ್ಕಿಟ್ಟು ಕಾಪಾಡಿದ ಮಹಿಳೆಯ ಕಾರ್ಯಕ್ಕೆ ಕೋಲ್ಕತ್ತಾ ಪೊಲೀಸ್ ಆಯುಕ್ತ ಅನುಜ್ ಶರ್ಮ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಆಕೆ ಚಿಕಿತ್ಸಾ ವೆಚ್ಚವನ್ನ ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಶನಿವಾರ ರಾತ್ರಿ ಮಹಿಳೆಯೋರ್ವಳು ದುಷ್ಕರ್ಮಿಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗುವುದನ್ನು ನೀಲಾಂಜನ ಚಟರ್ಜಿ ಎಂಬ ಧೈರ್ಯವಂತ ಮಹಿಳೆ ತಡೆದಿದ್ದಳು. ಇದೇ ವೇಳೆ ದುಷ್ಕರ್ಮಿ ನೀಲಾಂಜನ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದ.
ಈಗ ಸದ್ಯಕ್ಕೆ ನೀಲಾಂಜನ ಚಟರ್ಜಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಹಿಳೆಯ ಕಾರ್ಯಕ್ಕೆ ಎಲ್ಲರಿಂದ ಶ್ಲಾಘನೆ ವ್ಯಕ್ತವಾಗಿದೆ. ಸಿಎಂ ಮಮತಾ ಬ್ಯಾನರ್ಜಿ ಪರವಾಗಿ ಮುಂಬೈ ಪೊಲೀಸ್ ಆಯುಕ್ತರು ನೀಲಾಂಜನ ಚಟರ್ಜಿ ಶೀಘ್ರವಾಗಿ ಗುಣಮುಖರಾಗಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕೋಲ್ಕತ್ತಾ ಪೊಲೀಸರು, ಆಕೆಯ ಧೈರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೀಲಾಂಜನ ಚಟರ್ಜಿ, ಪೊಲೀಸರು ಹಾಗೂ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ ಎಂದು ಆಕೆಯ ಪತಿ ಸ್ಪಷ್ಟನೆ ನೀಡಿದ್ದಾರೆ.
ಈ ಘಟನೆ ಶನಿವಾರ ರಾತ್ರಿ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.