ನವದೆಹಲಿ:ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿನ ಮಹಾಮಳೆಯಿಂದ ಪ್ರವಾಹ ಉಂಟಾಗಿದೆ. ಕಳೆದ ಒಂದು ವಾರದಲ್ಲಿ ದೇಶಾದ್ಯಂತ ನಡೆದ ಮಳೆ ಸಂಬಂಧಿ ಅವಘಡಗಳಿಂದ ಇದುವರೆಗೂ 157 ಜನರು ಮೃತಪಟ್ಟಿದ್ದಾರೆ.
ಪ್ರವಾಹ ಮತ್ತು ಭೂ ಕುಸಿತದಿಂದ ಕೇರಳದಲ್ಲಿ ಅತ್ಯಧಿಕ 60 ಜನ ಸಾವನ್ನಪ್ಪಿದ್ದರೆ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಒಟ್ಟು 97 ಜನ ಬಲಿಯಾಗಿದ್ದಾರೆ.
ತುಂಗಾಭದ್ರ ಜಲಾಶಯದಿಂದ ಭಾನುವಾರ 1.70 ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ಯುನೆಸ್ಕೋ ಪಟ್ಟಿಯಲ್ಲಿರುವ ಹಂಪಿಯಲ್ಲಿ ಪ್ರವಾಸಿಗರು ಪ್ರವಾಹದಲ್ಲಿ ಸಿಲುಕಿದ್ದರು. ಎನ್ಡಿಆರ್ಎಫ್ ತಂಡದಿಂದ ಪ್ರವಾಸಿಗರನ್ನು ರಕ್ಷಿಸಲಾಗಿದೆ.
ಕೇರಳದಲ್ಲಿ ಪ್ರವಾಹಕ್ಕೆ 2.27 ಲಕ್ಷ ಜನರು ತತ್ತರಿಸಿದ್ದು, 1,551 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎರಡು ದಿನಗಳ ಬಳಿಕ ಭಾನುವಾರ ಮಧ್ಯಾಹ್ನದಿಂದ ಕಾರ್ಯಾಚರಣೆ ಆರಂಭ ಮಾಡಿದೆ. ಕಣ್ಣೂರು, ಕಾಸರಗೂಡು ಮತ್ತು ವಯನಾಡ್ನಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭೂಸೇನೆ, ವಾಯುಪಡೆ, ಕರಾವಳಿ ಪಡೆ, ಎಡಿಆರ್ಎಫ್, ಪೊಲೀಸ್ ಪಡೆ, ಸ್ವಯಂ ಸೇವಕರು ಮತ್ತು ಮೀನುಗಾರರರು ಪ್ರವಾಹಕ್ಕೆ ಸಿಲುಕಿರುವ ಜನರ ರಕ್ಷಣೆಯಲ್ಲಿ ನಿರತರಾಗಿದ್ದಾರೆ.