ಚೆನ್ನೈ(ತಮಿಳುನಾಡು): ಎರಡು ದಶಕಗಳಿಂದ ಫೋಟೋ ಜರ್ನಲಿಸ್ಟ್ ಆಗಿ ವೃತ್ತಿ ನಿರ್ವಹಿಸಿದ ದಿಲೀಪ್ ಕುಮಾರ್ (39), ಈಗ ಚೆನ್ನೈನಲ್ಲಿ ಆಟೋರಿಕ್ಷಾ ಚಾಲನೆ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ, ಅವರು ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಮತ್ತು ಪ್ರಯಾಣಿಕರ ವಿಭಾಗವನ್ನು ಕಾಪಾಡುವ ರಕ್ಷಣಾತ್ಮಕ ಪಾರದರ್ಶಕ ಪ್ಲಾಸ್ಟಿಕ್ ಪರದೆಯೊಂದಿಗೆ ತಮ್ಮ ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣ ಕಲ್ಪಿಸುತ್ತಿದ್ದಾರೆ.
ಲಾಕ್ಡೌನ್ ವೇಳೆ ಆಟೋಡ್ರೈವರ್ ಆದ ಫೋಟೋ ಜರ್ನಲಿಸ್ಟ್, ಏಕೆ ಗೊತ್ತೇ? ಪ್ರಾದೇಶಿಕ ದಿನಪತ್ರಿಕೆಗಳು ಮತ್ತು ಮ್ಯಾಗಜಿನ್ಗಳಲ್ಲಿ ಕೆಲಸ ಮಾಡಿದ ದಿಲೀಪ್ ಕುಮಾರ್, ವಿದೇಶಿ ಮ್ಯಾಗಜಿನ್ಗಳಿಗೂ ತಮ್ಮ ಕೊಡುಗೆ ನೀಡಿದ್ದಾರೆ. ಇತ್ತೀಚೆಗೆ ಸಾಕ್ಷ್ಯಚಿತ್ರಗಳು ಮತ್ತು ಕಿರುಚಿತ್ರಗಳನ್ನು ನಿರ್ಮಿಸುವತ್ತ ಗಮನಹರಿಸಿರುವ ಇವರು ಇದೇ ಕಾರಣಕ್ಕೆ ಸದ್ಯ ಆಟೋರಿಕ್ಷಾ ಚಾಲಕನಾಗಿದ್ದಾರೆ.
ದೇಶದ ಆಟೋ ರಿಕ್ಷಾ ಚಾಲಕರ ಜೀವನವನ್ನು ದಾಖಲಿಸಲು ನಿರ್ಧರಿಸಿದ ದಿಲೀಪ್, ಆಟೋರಿಕ್ಷಾ ಚಾಲಕನಾಗಿ ದಕ್ಷಿಣ ಪಾಕೆಟ್ ವೆಲಾಚೇರಿಯಿಂದ ತಮ್ಮ ಜರ್ನಿ ಪ್ರಾರಂಭಿಸಿದರು. ಆಟೋರಿಕ್ಷಾ ಚಾಲಕರ ನೋವುಗಳನ್ನು ಹೊರತರುವುದು ಅವರ ಉದ್ದೇಶವಾಗಿತ್ತು. ಹೀಗಾಗಿ ಆಟೋರಿಕ್ಷಾವನ್ನು ಬಾಡಿಗೆಗೆ ಪಡೆದ ಅವರು ಮಾರ್ಚ್ 22,2020 ರಂದು ಕೋವಿಡ್-19 ಏಕಾಏಕಿ ಸಂಭವಿಸುವ ಎರಡು ದಿನಗಳ ಮುನ್ನ ತಮ್ಮ ಸಾಕ್ಷ್ಯಚಿತ್ರಕ್ಕಾಗಿ ತಮ್ಮ ನಿಜ ಜೀವನದ ಅನುಭವಗಳನ್ನು ಸಂಗ್ರಹಿಸುತ್ತಾ ನಗರದಲ್ಲಿ ಆಟೋ ಚಾಲನೆ ಮಾಡುತ್ತಿದ್ದಾರೆ.
"ಈ ಕೆಲಸಕ್ಕೆ ಮುಂದಾದ ನನಗೆ ಪ್ರಯಾಣಿಕರ ಸುರಕ್ಷತೆಯೇ ಪ್ರಾಥಮಿಕ ಆದ್ಯತೆಯಾಗಿತ್ತು. ಹೀಗಾಗಿ ಕೆಲಸದ ವೇಳೆ ಪಿಪಿಇ ಹಾಕಲು ನಾನು ನಿರ್ಧರಿಸಿದೆ. ಅಷ್ಟೇ ಅಲ್ಲ, ಗಾಡಿಯಲ್ಲಿ ಪ್ರಯಾಣಿಕರ ಮಧ್ಯೆ ಪರದೆಯನ್ನು ಅಳವಡಿಸಲಾಗಿದೆ. ಪ್ರತಿ ಸವಾರಿ ನಂತರ ಗಾಡಿಯನ್ನು ಸ್ವಚ್ಛಗೊಳಿಸುತ್ತೇನೆ" ಎನ್ನುತ್ತಾರೆ ದಿಲೀಪ್.