ಕೊಯಮತ್ತೂರು (ತಮಿಳುನಾಡು):ಬ್ಯಾಂಕ್ನಲ್ಲಿದ್ದ ಸುಮಾರು 20 ಲಕ್ಷ ರೂ. ನಗದು ಮತ್ತು ಅಡವಿಟ್ಟ ಆಭರಣಗಳನ್ನು ಕಳ್ಳರು ಲೂಟಿ ಮಾಡಿದ ಘಟನೆ ತಿರುಪುರ್ ಜಿಲ್ಲೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ನಡೆದಿದೆ.
ಇಂದು ಬೆಳಗ್ಗೆ ಶಾಖೆಯ ಸಿಬ್ಬಂದಿ ಲಾಕರ್ ತೆರೆದಾಗ ದರೋಡೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂದಾಜು 20 ಲಕ್ಷ ರೂ. ನಗದು ಮತ್ತು ಅಡವಿಟ್ಟ ಚಿನ್ನದ ಆಭರಣಗಳು ಕಳ್ಳತನ ವಾಗಿವೆ ಎಂದು ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಿಟಕಿಯ ಗ್ರಿಲ್ ತೆಗೆದು ದರೋಡೆಕೋರರು ಬ್ಯಾಂಕ್‌ನ ಒಳಗೆ ಬಂದಿದ್ದಾರೆ. ನಗದು, ಆಭರಣ ಜೊತೆಯಲ್ಲಿ ಸಿಸಿಟಿವಿ ಕ್ಯಾಮರಾವನ್ನು ಕಳ್ಳರು ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾಂಕಿಗೆ ಯಾವುದೇ ಭದ್ರತಾ ಸಿಬ್ಬಂದಿ ಅಥವಾ ಸೈರನ್ ವ್ಯವಸ್ಥೆ ಇರಲಿಲ್ಲ. ತಿರುಪುರ ಪೊಲೀಸ್ ವರಿಷ್ಠಾಧಿಕಾರಿ ಅವರು ಸ್ನಿಫರ್ ನಾಯಿ ಮತ್ತು ಬೆರಳಚ್ಚು ತಜ್ಞರೊಂದಿಗೆ ಅಪರಾಧ ನಡೆದ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಅಪರಾಧಿಗಳನ್ನು ಹಿಡಿಯಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದೆ.