ಹೈದರಾಬಾದ್: ಪಾಕಿಸ್ತಾನದ ಕರಾಚಿಯಲ್ಲಿ ಶುಕ್ರವಾರ ಏರ್ ಬಸ್ ಎ320 ವಿಮಾನ ಪತನಗೊಂಡು ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿ 97 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಮಾನ ಲ್ಯಾಂಡಿಂಗ್ ಆಗಲು ಕೆಲ ನಿಮಿಷ ಉಳಿದಿತ್ತು. ಆದರೆ ತಾಂತ್ರಿಕ ದೋಷ ಉಂಟಾಗಿ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಮಾಡೆಲ್ ಕಾಲೋನಿಯಲ್ಲಿ ಬಿದ್ದಿದೆ.
ವಸತಿ ಪ್ರದೇಶಗಳಲ್ಲಿ ವಿಮಾನ ಪತನ ವಿಮಾನ ಅಪಘಾತದ ಕೆಲ ಘಟನೆಗಳ ಹಿನ್ನೋಟ:
ನವೆಂಬರ್ 24, 2019: ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ನ ಕಾಂಗೋದ ಗೋಮಾದಲ್ಲಿ ವಿಮಾನ ಅವಘಡ ಸಂಭವಿಸಿ ಸುಮಾರು 27 ಮಂದಿ ಸಾವನ್ನಪ್ಪಿದ್ದರು.
ಜುಲೈ 30, 2019: ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಸಂಭವಿಸಿದ ವಿಮಾನ ಅವಘಡದಲ್ಲಿ ಸುಮಾರು 18 ಮಂದಿ ಅಸುನೀಗಿದ್ದರು.
ಜನವರಿ 16, 2017:ಟರ್ಕಿಶ್ ಕಾರ್ಗೋ ವಿಮಾನ ಪತನಗೊಂಡು 13 ಮಕ್ಕಳು ಸೇರಿ 38 ಮಂದಿ ಸಾವನ್ನಪ್ಪಿದ್ದರು. ಈ ಘಟನೆ ಕಿರ್ಗಿಸ್ತಾನದ ಏರ್ಪೋರ್ಟ್ ಬಳಿ ನಡೆದಿತ್ತು.
ಜೂನ್ 30, 2015: ಇಂಡೋನೇಷ್ಯಾದ ಮಿಲಿಟರಿ ವಿಮಾನ ಟೇಕಾಫ್ ಆದ ಕೆಲವೇ ಕ್ಷಣದಲ್ಲಿ ಸುಮತ್ರಾ ಐಲ್ಯಾಂಡ್ನ ಮೇದಾನ್ ಏರಿಯಾದಲ್ಲಿ ಪತನಗೊಂಡಿತ್ತು. ಈ ಅವಘಡದಲ್ಲಿ ಸುಮಾರು 122 ಪ್ರಯಾಣಿಕರು ಹಾಗೂ 20 ಮಂದಿ ಸ್ಥಳೀಯರು ಸಾವನ್ನಪ್ಪಿದ್ದರು.
ನವೆಂಬರ್ 30, 2012: ರಿಪಬ್ಲಿಕ್ ಆಫ್ ಕಾಂಗೋದ ಬ್ರಾಝವಿಲ್ಲೆಯ ಏರ್ಪೋರ್ಟ್ ಬಳಿ ವಿಮಾನ ರನ್ ವೇಯಲ್ಲಿ ಸ್ಕಿಡ್ ಆಗಿ ಅಪಘಾತ ಸಂಭವಿಸಿತ್ತು. ಈ ಘಟನೆಯಲ್ಲಿ 7 ಮಂದಿ ಪ್ರಯಾಣಿಕರು ಅಸುನೀಗಿದ್ದು, ಅನೇಕ ಮನೆಗಳು ಧ್ವಂಸವಾಗಿದ್ದವು.
ಜೂನ್ 3, 2012: ನೈಜೀರಿಯಾದ ಅತಿದೊಡ್ಡ ನಗರವಾದ ಲಾಗೋಸ್‌ನಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ 6 ಸ್ಥಳೀಯರು ಸೇರಿದಂತೆ 159 ಮಂದಿ ಸಾವನ್ನಪ್ಪಿದ್ದರು. ವಿಮಾನದ ಎರಡೂ ಇಂಜಿನ್ಗಳು ಕೆಟ್ಟು ಹೋಗಿದ್ದರಿಂದ ಘಟನೆ ಸಂಭವಿಸಿತ್ತು.
ಮಾರ್ಚ್ 21, 2011: ರಿಪಬ್ಲಿಕ್ ಆಫ್ ಕಾಂಗೋದ ಆರ್ಥಿಕ ರಾಜಧಾನಿಯಾಗಿರುವ ಪೊಯಿಂಟೆ-ನೊಯ್ರೆ ವಸತಿ ಪ್ರದೇಶದಲ್ಲಿ ವಿಮಾನ ಪತನಗೊಂಡಿತ್ತು. ಇದರಲ್ಲಿ 14 ಮಂದಿ ಸ್ಥಳೀಯರು ಸೇರಿದಂತೆ 23 ಜನರು ಸಾವನ್ನಪ್ಪಿದ್ದಾರೆ.
ಸೆಪ್ಟೆಂಬರ್ 5, 2005: ಮಂಡಲ ಏರ್‌ಲೈನ್ಸ್ ಫ್ಲೈಟ್ 91 ವಿಮಾನವು ಇಂಡೋನೇಷ್ಯಾದ ಮೆಡಾನ್‌ನ ಪೊಲೊನಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಕಾರ್ತಾದ ಸೂಕರ್ನೊ-ಹಟ್ಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿತ್ತು. ಆದರೆ ಮೆಡಾನ್‌ನಲ್ಲಿ ಟೇಕಾಫ್ ಆದ ಕೆಲವೇ ಸೆಕೆಂಡುಗಳಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ವಸತಿ ಪ್ರದೇಶಕ್ಕೆ ಅಪ್ಪಳಿಸಿತ್ತು. ಈ ಘಟನೆಯಲ್ಲಿ ಸುಮಾರು 149 ಮಂದಿ ಅಸುನೀಗಿದ್ದರು.
ನವೆಂಬರ್ 12, 2001: ಡೊಮಿನಿಕನ್ ರಿಪಬ್ಲಿಕ್ಗೆ ತೆರಳಿದ್ದ ಅಮೆರಿಕನ್ ಏರ್‌ಲೈನ್ಸ್ ಎ -300 ನ್ಯೂಯಾರ್ಕ್ನ ಕ್ವೀನ್ಸ್ ಪ್ರಾಂತ್ಯದ ವಸತಿ ಪ್ರದೇಶದಲ್ಲಿ ಪತನಗೊಂಡಿತ್ತು. ಈ ಘಟನೆಯಲ್ಲಿ ವಿಮಾನದಲ್ಲಿದ್ದ 260 ಜನರು ಮತ್ತು 5 ಮಂದಿ ಸ್ಥಳೀಯರು ಸಾವನ್ನಪ್ಪಿದ್ದರು.