ಅದ್ಭುತ ವಾಣಿಜ್ಯಿಕ ಪರಿಕಲ್ಪನೆಗಳು ಮತ್ತು ನವೀನ ತಂತ್ರಜ್ಞಾನಗಳನ್ನು ಪ್ರೋತ್ಸಾಹಿಸುವ ದೇಶಗಳಲ್ಲಿ ಪ್ರಗತಿ ಅತ್ಯಂತ ವೇಗದಲ್ಲಿ ನಡೆಯುತ್ತಿದೆ. ಇದನ್ನು ಸಾಬೀತುಪಡಿಸುವ ಹಲವು ಪ್ರೋತ್ಸಾಹದಾಯಕ ಉದಾಹರಣೆಗಳೇ ಇವೆ. ಆದರೆ, ನಮ್ಮ ದೇಶದಲ್ಲಿ, ಶೈಕ್ಷಣಿಕ ಮಾನದಂಡಗಳು ಕುಸಿತ ಕಂಡಿರುವುದರಿಂದ ಇಂಜಿನಿಯರಿಂಗ್ ಕಾಲೇಜುಗಳು ನಿರುದ್ಯೋಗಿ ಪದವೀಧರರನ್ನು ಉತ್ಪಾದಿಸುವ ಫ್ಯಾಕ್ಟರಿಗಳಾಗಿವೆ. ಈ ನಿಟ್ಟಿನಲ್ಲಿ, ತೆಲಂಗಾಣದ ಮಾಹಿತಿ ತಂತ್ರಜ್ಞಾನ ಸಚಿವ ಕೆಟಿಎಆರ್ ಸಲಹೆ ಮಾಡಿದಂತೆ, ಬಿಟೆಕ್ ವಿದ್ಯಾರ್ಥಿಗಳು ಮಾಡಿದ ಸಂಶೋಧನೆಗಳನ್ನು ಪ್ರೋತ್ಸಾಹಿಸುವುದು ಅತ್ಯಂತ ಅಗತ್ಯದ ಸಂಗತಿಯಾಗಿದೆ. ಕ್ರಿಯಾಶೀಲತೆ ಮತ್ತು ಹೊಸ ಪರಿಕಲ್ಪನೆಗಳನ್ನು ಪ್ರೋತ್ಸಾಹಿಸಿದರೆ, ಅದ್ಭುತ ಉದ್ಯಮಗಳನ್ನು ಅನಾವರಣಗೊಳಿಸಬಹುದು. ಈ ನಿಟ್ಟಿನಲ್ಲಿ ಮುಂದೆ ಹೆಜ್ಜೆ ಇಡಲು ಪ್ರತಿ ರಾಜ್ಯವೂ ಕ್ರಮ ಕೈಗೊಳ್ಳಬೇಕಿದೆ.
ಪ್ರಧಾನಿ ನರೇಂದ್ರ ಮೋದಿ ಕನಸಿನ ಆತ್ಮ ನಿರ್ಭರ ಭಾರತ್ ಅನ್ನು ಸಾಧಿಸಬೇಕಾದರೆ ಸರ್ಕಾರದ ಕಡೆಯಿಂದ ಮಾಡಬೇಕಿರುವ ಹಲವು ಸಂಗತಿಗಳಿವೆ. ಇಂದಿನ ಸ್ಟಾರ್ಟಪ್‌ಗಳನ್ನು ನಾಳಿನ ಮಲ್ಟಿನ್ಯಾಷನಲ್ ಕಂಪನಿಗಳನ್ನಾಗಿ ರೂಪಿಸುವುದಕ್ಕಾಗಿ ಪ್ರಧಾನ ಮಂತ್ರಿಯ ಕನಸನ್ನು ನನಸು ಮಾಡಲು ತುಂಬಾ ಕೆಲಸ ಬಾಕಿ ಇದೆ. ಹೈದರಾಬಾದ್‌ನಲ್ಲಿ ನಡೆದ ಉದ್ಯಮಶೀಲತೆ ಮತ್ತು ಔದ್ಯಮಿಕ ಸಮ್ಮೇಳನದಲ್ಲಿ ತಿಳಿದು ಬಂದಂತೆ, ಅದ್ಭುತವನ್ನು ಸಾಧಿಸಲು ವಿಶ್ವಾಸ, ಪ್ರೋತ್ಸಾಹ ಮತ್ತು ಹೂಡಿಕೆ ಅತ್ಯಂತ ಪ್ರಮುಖ ಸಂಗತಿಯಾಗಿದೆ. ಸಾಂಸ್ಥಿಕ ಪ್ರೋತ್ಸಾಹವಿದ್ದಲ್ಲಿ ಯಾವುದೇ ಸವಾಲನ್ನೂ ಸುಲಭವಾಗಿ ಎದುರಿಸಬಹುದು ಮತ್ತು ಹೊಸ ಪರಿಕಲ್ಪನೆಗಳು ಮತ್ತು ಹಣಕಾಸು ನೆರವನ್ನೂ ಉದ್ಯಮಿಗಳಿಗೆ ಒದಗಿಸುವುದು ಅತ್ಯಂತ ಅಗತ್ಯದ್ದಾಗಿದೆ.
ನಮ್ಮ ದೇಶದಲ್ಲಿ ಹಲವು ಸ್ಟಾರ್ಟಪ್‌ಗಳ ಕನಸನ್ನು ಕೋವಿಡ್ -19 ನುಚ್ಚು ನೂರು ಮಾಡಿದ್ದರೆ, ಇನ್ನೊಂದೆಡೆ ಇದೇ ಅವಧಿಯಲ್ಲಿ ನಮ್ಮ ನೆರೆ ದೇಶ ಚೀನಾ, ವಿಶ್ವದ ಉತ್ಪಾದನೆ ಉದ್ಯಮಗಳ ಕೇಂದ್ರವಾಗಿ ಬೆಳೆದಿದೆ. ಕಾಲಕಾಲಕ್ಕೆ ಉದ್ಭವಿಸುವ ತಾಂತ್ರಿಕ ಅವಕಾಶಗಳನ್ನೂ ಚೀನಾ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಿದೆ. ಉದ್ಯೋಗವನ್ನು ಬಯಸುವವರಿಗಿಂತ ಹೆಚ್ಚಾಗಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ವ್ಯಕ್ತಿಗಳನ್ನು ರೂಪಿಸಲು ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ ಎಂದು ನಮ್ಮ ಸರ್ಕಾರಗಳು ಹೇಳಿಕೊಳ್ಳುತ್ತಿವೆ. ಹೊಸ ಪರಿಕಲ್ಪನೆಗಳನ್ನು ಪ್ರೋತ್ಸಾಹಿಸುವ ತಂತ್ರಗಳು ಮತ್ತು ಯೋಜನೆಗಳಿಗೆ ನಮ್ಮ ಸರ್ಕಾರಗಳು ಆದ್ಯತೆ ನೀಡಿದರೆ ಮಾತ್ರ ದೇಶದಲ್ಲಿನ ಪರಿಸ್ಥಿತಿ ಸುಧಾರಿಸಬಲ್ಲದು.