ನವದೆಹಲಿ:ಹರಿಯಾಣದ ಕುಮಾರಸ್ವಾಮಿ ಆಗಲು ಕಸರತ್ತು ನಡೆಸುತ್ತಿರುವ ಜನನಾಯಕ ಜನತಾ ಪಕ್ಷದ ದುಷ್ಯಂತ್ ಚೌಟಾಲ ತಮ್ಮ ಅಜೆಂಡಾಗಳಿಗೆ ಬೆಂಬಲ ಸೂಚಿಸುವವರಿಗೆ ತಾವು ಸಪೋರ್ಟ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇಲ್ಲಿಯವರೆಗೂ ಬಿಜೆಪಿ ಹಾಗೂ ಕಾಂಗ್ರೆಸ್ ಜತೆ ಯಾವುದೇ ರೀತಿಯ ಚರ್ಚೆ ನಡೆಸಿಲ್ಲ. ಹರಿಯಾಣದ ಅಭಿವೃದ್ಧಿಗಾಗಿ ನಮ್ಮೊಂದಿಗೆ ಕೈ ಜೋಡಿಸಿ, ನಮಗೆ ಬೆಂಬಲ ಸೂಚಿಸುವ ಪಕ್ಷಕ್ಕೆ ನಾವು ಸಪೋರ್ಟ್ ಮಾಡುತ್ತೇವೆ ಎಂದು ಇಂದು ಸುದ್ದಿಗೋಷ್ಠಿ ನಡೆಸಿ ಪ್ರಕಟಿಸಿದ್ದಾರೆ.
90 ವಿಧಾನಸಭಾ ಕ್ಷೇತ್ರಗಳ ಪೈಕಿ ಆಡಳಿತ ಪಕ್ಷ 40 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿದರೆ, ಕಾಂಗ್ರೆಸ್ 31 ಕ್ಷೇತ್ರ, ದುಷ್ಯಂತ್ ಚೌಟಾಲ ನೇತೃತ್ವದ ಜೆಜೆಪಿ ಪಕ್ಷ 10 ಸ್ಥಾನಗಳಲ್ಲಿ ಗೆಲುವು ದಾಖಲು ಮಾಡಿದೆ. ವಿಶೇಷ ಎಂದರೆ ಹೊಸದಾಗಿ ಪಕ್ಷ ಸ್ಥಾಪನೆ ಮಾಡಿ ಒಂದೇ ವರ್ಷದಲ್ಲಿ ಇಷ್ಟೊಂದು ಸೀಟು ಗೆದ್ದಿರುವ ದುಷ್ಯಂತ್ ಇದೀಗ ಅಲ್ಲಿನ ಆಡಳಿತ ಪಕ್ಷದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲು ಪ್ಲಾನ್ ಹಾಕಿಕೊಳ್ಳುತ್ತಿದ್ದಾರೆ.
ರಾಜ್ಯದಲ್ಲಿ ಶೇ 75 ರಷ್ಟು ಕೆಲಸ ಸ್ಥಳೀಯರಿಗೆ ಹಾಗೂ ವಯೋವೃದ್ಧರಿಗೆ ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ. ಇದರ ಜತೆಗೆ ಇಂದು ಶಾಸಕಾಂಗ ಪಕ್ಷದ ಸಭೆ ನಡೆಸಲು ಅವರು ನಿರ್ಧಾರ ಮಾಡಿದ್ದಾರೆ. ಇದರ ಮಧ್ಯೆ ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡಲು ಮನೋಹರ್ಲಾಲ್ ಕಟ್ಟರ್ ನೇತೃತ್ವದ ಬಿಜೆಪಿ ಈಗಾಗಲೇ ಕಸರತ್ತು ನಡೆಸುತ್ತಿದ್ದು, ಇಂದು ರಾಜ್ಯಪಾರನ್ನು ಭೇಟಿ ಮಾಡಿ ಸರ್ಕಾರ ರಚನೆ ಮಾಡಲು ಕಾಲಾವಕಾಶ ಸಹ ಕೇಳುವ ಸಾಧ್ಯತೆ ಇದೆ.