ತೂತುಕುಡಿ: ತಮಿಳುನಾಡು ಶಾಂತಕುಲಂನಲ್ಲಿ ತಂದೆ, ಮಗನ ಲಾಕ್ಅಪ್ ಡೆತ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಾದ ಮೂವರು ಪೊಲೀಸ್ ಸಿಬ್ಬಂದಿಯನ್ನ ಕೇಂದ್ರ ಅಪರಾಧ ತನಿಖಾ ವಿಭಾಗ (ಸಿಬಿ-ಸಿಐಡಿ) ಗುರುವಾರ ಬಂಧಿಸಿದೆ.
ಸಬ್ ಇನ್ಸ್‌ಪೆಕ್ಟರ್ ಬಾಲಕೃಷ್ಣನ್, ಕಾನ್‌ಸ್ಟೇಬಲ್‌ಗಳಾದ ಮುತ್ತುರಾಜ್ ಮತ್ತು ಮುರುಗನ್ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಒಟ್ಟು ಆರು ಜನ ಪೊಲೀಸ್ ಸಿಬ್ಬಂದಿಯನ್ನು ಆರೋಪಿಗಳೆಂದು ಪರಿಗಣಿಸಲಾಗಿದ್ದು, ಈ ಮೊದಲು ಅಮಾನತುಗೊಂಡಿರುವ ಸಬ್ ಇನ್ಸ್‌ಪೆಕ್ಟರ್ ರಘು ಗಣೇಶ್ ಎಂಬಾತನನ್ನು ಬಂಧಿಸಲಾಗಿದೆ.
ಮದ್ರಾಸ್ ಹೈಕೋರ್ಟ್ ನಿರ್ದೇಶನದ ಮೇರೆಗೆ ತನಿಖೆ ಕೈಗೆತ್ತಿಕೊಂಡ ಕೆಲವೇ ಗಂಟೆಗಳಲ್ಲಿ ವಿಶೇಷ ತನಿಖಾ ಸಂಸ್ಥೆ ಎಸ್‌ಐಗಳಾದ ರಘು ಗಣೇಶ್ ಮತ್ತು ಬಾಲಕೃಷ್ಣನ್ ವಿರುದ್ಧ ಕೊಲೆ ಆರೋಪದಡಿ ಎಫ್ಐಆರ್ ದಾಖಲಿಸಿದೆ. ಅಲ್ಲದೇ ಇವರ ಜೊತೆ ಕೈ ಜೋಡಿಸಿದ ಇತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದೆ.
ಅಪ್ಪ, ಮಗನ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸುವಲ್ಲಿ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯ ಕಾನೂನು ಸಚಿವ ಸಿ.ವಿ ಷಣ್ಮುಗಮ್ ಭರವಸೆ ನೀಡಿದ ಬೆನ್ನಲ್ಲೇ ಬುಧವಾರ ತಡರಾತ್ರಿ ರಘು ಗಣೇಶ್ ಬಂಧನವಾಗಿದೆ.
ಆರೋಪಿಗಳನ್ನು ಬಂಧಿಸಿದ ವಿಶೇಷ ತನಿಖಾ ದಳದ ಅಧಿಕಾರಿಗಳು ನ್ಯಾಯಾಲಯಕ್ಕೆ ಕರೆದುಕೊಂಡು ಬಂದಾಗ ಕೋರ್ಟ್ ಹೊರಗಡೆ ಮತ್ತು ಒಳಗಡೆ ಕೆಲವೊಂದು ನಾಟಕೀಯ ಬೆಳವಣಿಗೆಗಳು ನಡೆದವು. ಇನ್ನು, ಆರೋಪಿ ಪೊಲೀಸರು ಅಪ್ಪ, ಮಗನನ್ನು ರಾತ್ರಿಯಿಡೀ ಠಾಣೆಯಲ್ಲಿ ಥಳಿಸಿದ್ದಾರೆ ಎಂದು ಮ್ಯಾಜಿಸ್ಟೀರಿಯಲ್ ತನಿಖೆ ವೇಳೆ ಮಹಿಳಾ ಕಾನ್ಸ್ಟೇಬಲ್ ಒಬ್ಬರು ಸಾಕ್ಷಿ ಹೇಳಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಅಂಗಡಿ ತೆರೆದಿದ್ದರೂ ಎಂಬ ಕಾರಣಕ್ಕೆ ಪಿ. ಜಯರಾಜ್ ಮತ್ತು ಅವರ ಮಗ ಬೆನಿಕ್ಸ್ ಎಂಬುವರನ್ನು ಜೂನ್ 23 ರಂದು ಬಂಧಿಸಿ ಠಾಣೆಗೆ ಕರೆದೊಯ್ದ ಪೊಲೀಸರು ಎರಡು ದಿನಗಳ ಕಾಲ ಥಳಿಸಿ, ಚಿತ್ರಹಿಂಸೆ ನೀಡಿ ಸಾವಿಗೆ ಕಾರಣರಾಗಿದ್ದರು. ಈ ಪ್ರಕರಣ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ತಮಿಳುನಾಡಿನಲ್ಲಿ ಜನ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದರು, ಹಾಗೂ ದೇಶದ ಪ್ರಮುಖ ವ್ಯಕ್ತಿಗಳು ಘಟನೆಯನ್ನು ಖಂಡಿಸಿ ಧ್ವನಿಯೆತ್ತಿದ್ದರು.