ನವದೆಹಲಿ: ಶುಲ್ಕ ಹೆಚ್ಚಳ ವಿರೋಧಿಸಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಡಿಸೆಂಬರ್ 12 ನಡೆಯುವ ಸೆಮಿಸ್ಟರ್ ಪರೀಕ್ಷೆಗಳನ್ನು ಬಹಿಷ್ಕರಿಸಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ.
ಜೆಎನ್‌ಯು ಈ ಸಂಬಂಧ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದು, ಯಾರು ಪರೀಕ್ಷೆಗಳಿಗೆ ಹಾಜರಾಗುವುದಿಲ್ಲವೋ ಅವರು ತಮ್ಮ ಮಾನ್ಯತೆ ಕಳೆದುಕೊಳ್ಳಲಿದ್ದಾರೆ ಹಾಗೂ ಮುಂದಿನ ಸೆಮಿಸ್ಟರ್ ಓದಲು ಅವರಿಗೆ ಅವಕಾಶ ಇಲ್ಲ ಎಂದು ಎಚ್ಚರಿಕೆ ನೀಡಿದೆ.
ವಿವಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಎಂ ಫಿಲ್ ವಿದ್ಯಾರ್ಥಿಗಳಿಗೂ ಕೂಡ ಎಚ್ಚರಿಕೆ ಸಂದೇಶ ರವಾನೆ ಮಾಡಲಾಗಿದ್ದು, 2 ನೇ ಸೆಮಿಸ್ಟರ್‌ನ ಕೋರ್ಸ್ ವರ್ಕ್ ನಂತರ 5.00 ಸಿಜಿಪಿಎ ಪಡೆಯಲು ವಿಫಲವಾದರೆ ಸ್ವಯಂಚಾಲಿತವಾಗಿ ವಿಶ್ವವಿದ್ಯಾಲಯದ ರೋಲ್ ಪಟ್ಟಿಯಿಂದ ವಿದ್ಯಾರ್ಥಿಗಳ ಹೆಸರನ್ನು ತೆಗೆದುಹಾಕಲಾಗುತ್ತದೆ ಎಂದು ಹೇಳಿದೆ. ಇನ್ನು ಎಂ.ಫಿಲ್, ಪ್ರೌಢ, ಪ್ರಬಂಧ, ಪಿಎಚ್‌ಡಿ ಪ್ರಬಂಧವನ್ನು ಸಲ್ಲಿಸಲು ಮತ್ತು ಮೌಲ್ಯಮಾಪನ ಶಾಖೆಗೆ ಕಳುಹಿಸಲು ಡಿಸೆಂಬರ್ 31 ಕೊನೆಯ ದಿನಾಂಕ ಎಂದು ವಿವಿ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.
ಇದಕ್ಕೆ ಹೆದರದ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆ ಮುಂದುವರೆಸಲು ನಿರ್ಧಾರ ಮಾಡಿದ್ದಾರೆ. ಈ ಪರೀಕ್ಷೆ ಬಹಿಷ್ಕಾರಕ್ಕೆ 17 ಶೈಕ್ಷಣಿಕ ವಿಭಾಗಗಳು ಬೆಂಬಲ ವ್ಯಕ್ತಪಡಿಸಿವೆ.