ಕರ್ನಾಟಕ

karnataka

ETV Bharat / bharat

ಸಹೃದಯಿಗಳ ನೆರವಿಗಾಗಿ ಮೊರೆಯಿಟ್ಟ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ - rural bodybuilder from Guntur need Financial help

ಈತ ಅಪ್ಪಟ ಹಳ್ಳಿ ಪ್ರತಿಭೆ. ಈತನ ಜಿಮ್​ ಬಾಡಿ ನೋಡಿದ್ರೆ, ಬಿಸಿ ರಕ್ತದ ಯುವಕರೆಲ್ಲಾ ನನಗೂ ಇಂತಹದ್ದೇ ಕಟ್ಟುಮಸ್ತಾದ ದೇಹ ಇರಬಾರದಿತ್ತಾ ಅಂತಾ ಹೊಟ್ಟೆಕಿಚ್ಚು ಪಡ್ತಾರೆ. ಇವರ ಮನೆಯಲ್ಲಿ ಇವರು ಗೆದ್ದಿರೋ ಕಪ್​, ಮೆಡಲ್​ಗಳು ಅಸಂಖ್ಯಾತ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನಗೆದ್ದ ಈ ಗ್ರಾಮೀಣ ಪ್ರತಿಭೆಯೀಗ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ.

'ನಾಟಿ ಬಾಡಿಬಿಲ್ಡರ್'​ಗೆ ಬೇಕಿದೆ ಆರ್ಥಿಕ ನೆರವು

By

Published : Oct 20, 2019, 7:55 PM IST

ಗುಂಟೂರು(ಆಂಧ್ರಪ್ರದೇಶ): ಈ ಪ್ರತಿಭೆಗೆ ಬಡತನ ಅಡ್ಡಿ ಬಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನಗೆದ್ದ ಗ್ರಾಮೀಣ ಭಾಗದ ಬಾಡಿ ಬಿಲ್ಡರ್​ ತನ್ನ ಮುಂದಿನ ಹೆಜ್ಜೆಯನ್ನು ಧೈರ್ಯವಾಗಿಡಲು ದಾನಿಗಳ ನೆರವು ಕೇಳುತ್ತಿದ್ದಾರೆ.

ಹೌದು, ಇವರ ಹೆಸರು ನಿಶ್ಶಂಕರರಾವ್​ ರವಿಕುಮಾರ್​. ನೆರೆಯ ಆಂಧ್ರಪ್ರದೇಶದ ಗುಂಟೂರಿನ ಎಟುಕೂರ್ ಗ್ರಾಮದ ಬಾಡಿ ಬಿಲ್ಡರ್​. ಅಪ್ಪಟ ನಾಟಿ ಪ್ರತಿಭೆಯಾದರೂ ಬಾಡಿ ಬಿಲ್ಡಿಂಗ್​ ಕ್ಷೇತ್ರದಲ್ಲಿ ಈತನ ಸಾಧನೆ ಅಷ್ಟಿಷ್ಟೇನಲ್ಲ. ಈ ವರ್ಷ ಇಂಡೋನೇಷ್ಯಾದಲ್ಲಿ ನಡೆದ ಮಿಸ್ಟರ್​ ಏಷಿಯಾ ಬಾಡಿ ಬಿಲ್ಡಿಂಗ್​ ಸ್ಪರ್ಧೆಯಲ್ಲಿ ಭಾಗವಹಿಸಿ ಈತ ಬಂಗಾರ ಗೆದ್ದಿದ್ದಾರೆ. ಕಳೆದ ವರ್ಷ ಇದೇ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದ ರವಿಕುಮಾರ್​, ಸತತ ಅಭ್ಯಾಸ ಹಾಗೂ ನಿರಂತರ ಪ್ರಯತ್ನದಿಂದ ಈ ಬಾರಿ ಬಂಗಾರಕ್ಕೆ ಮುತ್ತಿಟ್ಟಿದ್ದಾರೆ. ಈವರೆಗೂ ಹಲವಾರು ರಾಷ್ಟ್ರ ಹಾಗೂ ಅಂತಾರಾಷ್ಟ್ರಿಯ ಪದಕಗಳನ್ನು ಗೆದ್ದಿರುವ ರವಿಕುಮಾರ್​ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ.

ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಸ್ಫೂರ್ತಿ...

ಇನ್ನು ರವಿಕುಮಾರ್​ ಅವರ ಈ ಸಾಧನೆಗೆ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಸ್ಫೂರ್ತಿಯಂತೆ. ಅರ್ನಾಲ್ಡ್ ಶ್ವಾರ್ಜಿನೆಗ್ಗರ್, ಓರ್ವ ವೃತ್ತಿಪರ ಬಾಡಿಬಿಲ್ಡರ್​. ಮಾತ್ರವಲ್ಲ ಖ್ಯಾತ ರಾಜಕಾರಣಿ, ನಟ, ಲೇಖಕ ಎಲ್ಲವೂ ಹೌದು. ಸಾಮಾನ್ಯ ಟ್ರಕ್​ ಡ್ರೈವರ್​ ಆಗಿದ್ದ ಇವರ ಜೀವನದ ಯಶೋಗಾಥೆಯನ್ನೇ ಸ್ಫೂರ್ತಿಯನ್ನಾಗಿ ಮಾಡಿಕೊಂಡ ರವಿ ಈ ಸಾಧನೆ ಮಾಡಿದ್ದಾರೆ. ಪ್ರತಿಭೆಗೆ ಬಡತನ ಅಡ್ಡಿಯಾಗಲ್ಲ. ಆದರೆ ಅದೇ ಪ್ರತಿಭೆ ಬೆಳೆಯಲು ಆರ್ಥಿಕ ಸಹಾಯ ಬೇಕು ಎನ್ನುತ್ತಾರೆ ರವಿಕುಮಾರ್​.

'ನಾಟಿ ಬಾಡಿಬಿಲ್ಡರ್'​ಗೆ ಬೇಕಿದೆ ಆರ್ಥಿಕ ನೆರವು

ಪ್ರತಿನಿತ್ಯ 8 ಗಂಟೆಗಳ ಕಾಲ ಇವರು ಜಿಮ್​ನಲ್ಲಿ ದೇಹದಂಡಿಸುತ್ತಾರೆ. ಇದಕ್ಕಾಗಿ ತಜ್ಞರೊಡನೆ ಚರ್ಚಿಸಿ ವಿಭಿನ್ನ ಆಹಾರ ಕ್ರಮವನ್ನೂ ಅನುಸರಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಗೆ ಆಯ್ಕೆಯಾಗಲು ಸತತ ಕಷ್ಟಪಟ್ಟು ಅಭ್ಯಾಸ ಮಾಡಿದ್ದಾರೆ ರವಿಕುಮಾರ್​.

ಮುಂದಿನ ತಿಂಗಳಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ದೇಹದಾರ್ಢ್ಯ ಸ್ಪರ್ಧೆಗೆ ರವಿಕುಮಾರ್​ ಆಯ್ಕೆಯಾಗಿದ್ದಾರೆ. ಆದರೆ ಬಡತನ ಈ ಪ್ರತಿಭೆಯನ್ನು ಕಾಡುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದರೂ ಇದುವರೆಗೂ ಯಾವೊಬ್ಬ ಸರ್ಕಾರದ ಪ್ರತಿನಿಧಿಯೂ ಬಂದು ಸಹಾಯ ಮಾಡಿಲ್ಲವಂತೆ. ಹೀಗಾಗಿ ಹಣಕಾಸಿನ ಸಂಕಷ್ಟದಿಂದಾಗಿ ರವಿಕುಮಾರ್​ಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಗುತ್ತಿಲ್ಲವಂತೆ. ಹೀಗಾಗಿ ರವಿಕುಮಾರ್​ ಸರ್ಕಾರ ಮತ್ತು ದಾನಿಗಳ ಮೊರೆ ಹೋಗಿದ್ದಾರೆ.

ಈ ಮೂಲಕವಾದರೂ ಈ ಗ್ರಾಮೀಣ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ.

For All Latest Updates

TAGGED:

ABOUT THE AUTHOR

...view details