ಪೂರ್ಣಿಯಾ(ಬಿಹಾರ):ಬಿಹಾರದಲ್ಲಿ ನಾಡಿದ್ದು ಕೊನೆ ಹಂತದ ಚುನಾವಣೆ ನಡೆಯಲಿದ್ದು, ಇದರ ಮಧ್ಯೆ ನಿತೀಶ್ ಕುಮಾರ್ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ.
ಇದು ನನ್ನ ಕೊನೆ ಚುನಾವಣೆ: ಪ್ರಚಾರದ ವೇಳೆ ಘೋಷಣೆ ಮಾಡಿದ ಬಿಹಾರ ಸಿಎಂ! - ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಬಿಹಾರದಲ್ಲಿ ಕೊನೆ ಹಂತದ ವೋಟಿಂಗ್ ನವೆಂಬರ್ 7ರಂದು ನಡೆಯಲಿದ್ದು, ಬಹಿರಂಗ ಪ್ರಚಾರ ಇಂದು ಸಂಜೆ ಅಂತ್ಯವಾಗಲಿದೆ. ಇದರ ಮಧ್ಯೆ ಸಿಎಂ ನಿತೀಶ್ ಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ.
ಬಿಹಾರದ ಪೂರ್ಣಿಯಾದಲ್ಲಿ ಆಯೋಜನೆಗೊಂಡಿದ್ದ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ವೇಳೆ ಇದು ತಮ್ಮ ಕೊನೆಯ ಚುನಾವಣೆ ಎಂದು ಘೋಷಣೆ ಮಾಡಿದ್ದಾರೆ. ಮುಂದಿನ ಸಾರ್ವಜನಿಕ ಚುನಾವಣೆ ಹಾಗೂ ಬೇರೆ ಯಾವುದೇ ಚುನಾವಣೆಯಲ್ಲಿ ತಾವೂ ಸ್ಪರ್ಧೆ ಮಾಡಲ್ಲ ಎಂದು ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ಜೀವನಕ್ಕೆ ವಿರಾಮ ಇಡುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿ(ಯು) ಮುಖ್ಯಸ್ಥರಾಗಿರುವ ನಿತೀಶ್ ಕುಮಾರ್ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಚುನಾವಣೆ ಕಣಕ್ಕಿಳಿದಿದ್ದು, ಎರಡನೇ ಅವಧಿಗೆ ಮೈತ್ರಿ ಸರ್ಕಾರದೊಂದಿಗೆ ಅಧಿಕಾರ ರಚನೆ ಮಾಡುವ ಇರಾದೆ ಹೊಂದಿದ್ದಾರೆ. ಬಿಹಾರದಲ್ಲಿ 243 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಈಗಾಗಲೇ ಎರಡು ಹಂತದಲ್ಲಿ ವೋಟಿಂಗ್ ಮುಕ್ತಾಯಗೊಂಡಿದ್ದು, ನವೆಂಬರ್ 10ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ.