ಹೈದರಾಬಾದ್: ಪರಿಸರದ ಮಹಾಶತ್ರು ಪ್ಲಾಸ್ಟಿಕ್ ವಿರುದ್ಧ 'ಪ್ಲಾಂಟ್ ಫಾರ್ ಪ್ಲಾಸ್ಟಿಕ್' ಎಂಬ ವಿಶಿಷ್ಟ ಕಾರ್ಯಕ್ರಮ ಮತ್ತು 'ಟಿಫಿನ್ ಬಾಕ್ಸ್ ಚಾಲೆಂಜ್' ಎಂಬ ಸವಾಲು ಆರಂಭಿಸಿದ್ದಾರೆ ಹೈದರಾಬಾದ್ನ ಸಾಫ್ಟ್ವೇರ್ ಇಂಜಿನಿಯರ್ ದೋಸಪಾಟಿ ರಾಮು. ಸದ್ಯಕ್ಕೆ ರಾಮು ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಅನ್ನು ಬಳಸದಿರಲು ಮತ್ತು ನಿಷೇಧಿಸಲು ದೇಶಾದ್ಯಂತ ಜಾಗೃತಿ, ಅಭಿಯಾನಗಳು ಇಂದಿಗೂ ನಡೆಯುತ್ತಲೇ ಇವೆ. ಆದರೆ, ಕೆಲವರು ಎಲೆಮರಿಕಾಯಿಯಂತೆ ಸದ್ದಿಲ್ಲದೆ ಈ ಮಹಾಮಾರಿ ಪ್ಲಾಸ್ಟಿಕ್ ವಿರುದ್ಧ ಹೋರಾಡುತ್ತಾ, ಅದನ್ನು ಬಳಸದಂತೆ ಜಾಗೃತಿ ಮೂಡಿಸುತ್ತಿದ್ದಾರೆೆ. ಹೈದರಾಬಾದ್ನ ಸಾಫ್ಟ್ವೇರ್ ಇಂಜಿನಿಯರ್ ದೋಸಪಾಟಿ ರಾಮು ಈ ಕೆಲಸ ಮಾಡುತ್ತಿರುವ ವ್ಯಕ್ತಿ. ರಾಮು ಮಹಾಮಾರಿ ಪ್ಲಾಸ್ಟಿಕ್ ವಿರುದ್ಧ 'ಪ್ಲಾಂಟ್ ಫಾರ್ ಪ್ಲಾಸ್ಟಿಕ್' ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆರಂಭಿಸುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ, 'ಟಿಫಿನ್ ಬಾಕ್ಸ್ ಚಾಲೆಂಜ್' ಎಂಬ ಸವಾಲನ್ನೂ ಕೈಗೆತ್ತಿಕೊಂಡಿದ್ದಾರೆ.
ಏಕ ಬಳಕೆ ಪ್ಲಾಸ್ಟಿಕ್ನಿಂದ ನಗರವನ್ನು ಮುಕ್ತವಾಗಿಸಬೇಕೆಂಬ ಪಣ ತೊಟ್ಟಿರುವ ರಾಮು ಅವರು, ಪರಿಸರ ರಕ್ಷಣೆಗೆ ಸಸಿ ವಿತರಿಸುತ್ತಿದ್ದಾರೆ. ಯಾವುದೇ ಸಣ್ಣ ಪ್ರಮಾಣದ ಪ್ಲಾಸ್ಟಿಕ್ ತರುವವರಿಗೆ ಮಾತ್ರ ಸಸಿ ನೀಡುತ್ತಿದ್ದಾರೆ. 'ಪ್ಲಾಂಟ್ ಫಾರ್ ಪ್ಲಾಸ್ಟಿಕ್' ಎಂಬ ಈ ಕಾರ್ಯಕ್ರಮಕ್ಕಾಗಿ ಪೂರ್ವ ಗೋದಾವರಿ ಕಡಿಯಾದಿಂದ ಸಾವಿರಾರು ಸಸ್ಯಗಳನ್ನು ಕೊಂಡುತಂದಿದ್ದಾರೆ. ಯಾವುದೇ ನಿರ್ದಿಷ್ಟ ಪ್ರಮಾಣದ ಪ್ಲಾಸ್ಟಿಕ್ ತರಬೇಕೆಂದು ನಿರ್ಧರಿಸಿಲ್ಲ. ಚಿಪ್ಸ್ ಪ್ಯಾಕೆಟ್ ತಂದರೂ ಸಹ ಅದಕ್ಕೆ ಪ್ರತಿಯಾಗಿ ಸಸಿಗಳನ್ನು ಒದಗಿಸುತ್ತಿದ್ದಾರೆ. ಸಂಗ್ರಹಿಸಿದ ಪ್ಲಾಸ್ಟಿಕ್ ಅನ್ನು ಮರುಬಳಕೆ ಮತ್ತು ಹೆಚ್ಚಿನ ಸಂಸ್ಕರಣೆಗಾಗಿ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್(ಜಿಹೆಚ್ಎಂಸಿ)ಗೆ ಉಚಿತವಾಗಿ ತಲುಪಿಸುತ್ತಿದ್ದಾರೆ.