ತಿರುವನಂತಪುರಂ (ಕೇರಳ): ಕೊರೊನಾ ವೈರಸ್ ಆವರಿಸಿಕೊಂಡ ಬಳಿಕ ಕಳೆದ ಮಾರ್ಚ್ನಿಂದ ಬಾಗಿಲು ಮುಚ್ಚಿದ್ದ ಪ್ರಸಿದ್ದ ಅನಂತಪದ್ಮನಾಭ ದೇವಸ್ಥಾನ ಇಂದಿನಿಂದ ಭಕ್ತರ ಭೇಟಿಗೆ ಮುಕ್ತವಾಗಲಿದೆ.
ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಬೇಕಾದ ಸಮಯ ಮತ್ತು ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಆಡಳಿತ ಮಂಡಳಿ ಈಗಾಗಲೇ ತಿಳಿಸಿದೆ. ಭಕ್ತರು ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಮತ್ತು ಸಂಜೆ 5 ಗಂಟೆಯಿಂದ ದೇವಸ್ಥಾನದ ಬಾಗಿಲು ಮುಚ್ಚುವವರೆಗೆ ದೇವರ ದರ್ಶನ ಪಡೆಯಬಹುದು ಎಂದು ಆಡಳಿತ ಮಂಡಳಿ ಹೇಳಿದೆ.
ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಒಂದು ದಿನ ಮೊದಲೇ ಆನ್ಲೈನ್ನಲ್ಲಿ ನೋಂದಣಿ ಮಾಡಬೇಕು ಮತ್ತು ದೇವಸ್ಥಾನ ಭೇಟಿ ವೇಳೆ ನೋಂದಣಿ ಪ್ರತಿ ಮತ್ತು ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು. ಒಂದು ಸಲ ಕೇವಲ 35 ಜನರಿಗೆ ಮಾತ್ರ ದೇವಸ್ಥಾನದ ಒಳ ಪ್ರವೇಶಿಸಲು ಅವಕಾಶವಿದೆ ಮತ್ತು ಒಂದು ದಿನಕ್ಕೆ 665 ಜನ ದೇವರ ದರ್ಶನ ಪಡೆಯಬಹುದು. ಸರ್ಕಾರದ ಮಾರ್ಗಸೂಚಿ ಪ್ರಕಾರ 10 ವರ್ಷಕ್ಕಿಂತ ಕೆಳಗಿನವರು ಮತ್ತು 65 ವರ್ಷಕ್ಕಿಂತ ಮೇಲಿನವರಿಗೆ ದೇವಸ್ಥಾನ ಪ್ರವೇಶ ನಿರ್ಬಂಧಿಸಲಾಗಿದೆ.
ಜೂನ್ 30 ರಿಂದ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿತ್ತು.