ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಮತ್ತೊಂದು ಹಂತವನ್ನು ಯಶಸ್ವಿಯಾಗಿ ಪೂರೈಸಿದ್ದು, ಚಂದ್ರನಿಗೆ ಮತ್ತಷ್ಟು ಸನಿಹವಾಗಿದೆ.
ಚಂದ್ರನ ಕಕ್ಷೆಗೆ ಸೇರಿಸುವ ಮತ್ತೊಂದು ಹಂತದ ಪ್ರಕ್ರಿಯೆ ಇಂದು ಬೆಳಗ್ಗೆ 9.04 ನಿಮಿಷಕ್ಕೆ ನಡೆದಿದ್ದು, ಇಸ್ರೋ ವಿಜ್ಞಾನಿ ಈ ಕಾರ್ಯದಲ್ಲಿ ಸಫಲರಾಗಿದ್ದಾರೆ. ಸದ್ಯ ಚಂದ್ರಯಾನ-2 ನೌಕೆ ಚಂದ್ರನಿಂದ ಕೇವಲ 200 ಕಿ.ಮೀ ದೂರದಲ್ಲಿದೆ.
ಇಂದಿನ ಕಾರ್ಯ ಯಶಸ್ವಿಯಾಗಿರುವ ಬಗ್ಗೆ ಇಸ್ರೋ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಇನ್ನು ಕೇವಲ ಹನ್ನೊಂದು ದಿನಗಳಷ್ಟೇ ಬಾಕಿ ಇದೆ ಎಂದು ಇಸ್ರೋ ಟ್ವೀಟ್ ಮಾಡಿದೆ. ಆಗಸ್ಟ್ 30 ರಂದು ಅಂತಿಮ ಹಂತದ ಕಕ್ಷೆಗೆ ಸೇರಿಸುವ ಪ್ರಕ್ರಿಯೆ ಜರುಗಲಿದೆ. ಇದಾದ ಬಳಿಕ ಈ ನೌಕೆ ಚಂದ್ರನಿಂದ ನೂರು ಕಿ.ಮೀ ದೂರದಲ್ಲಿರಲಿದೆ.
ಸೆಪ್ಟೆಂಬರ್ 7ರ ತಡರಾತ್ರಿ ಚಂದ್ರಯಾನ-2 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಇಸ್ರೋ ಸುರಕ್ಷಿತ ಲ್ಯಾಂಡಿಂಗ್ಗೆ ಉದ್ದೇಶಿಸಿದ್ದು, ಈ ಐತಿಹಾಸಿಕ ಕ್ಷಣದಲ್ಲಿ ಭಾಗಿಯಾಗುವಂತೆ ಇಸ್ರೋ, ಪ್ರಧಾನಿ ಮೋದಿಗೆ ಆಹ್ವಾನ ನೀಡಿದೆ. ಈ ವಿಷಯವನ್ನು ಇತ್ತೀಚೆಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕೆ ಸಿವನ್ ಅವರೇ ದೃಢಪಡಿಸಿದ್ದರು.