ಪೂರ್ವ ಗೋದಾವರಿ(ಆಂಧ್ರ ಪ್ರದೇಶ): ಕಳ್ಳನೊಬ್ಬ ಭರ್ಜರಿ ದರೋಡೆಯ ಸ್ಕೆಚ್ ಹಾಕಿಕೊಂಡು ವ್ಯಾಪಾರಿಯೊಬ್ಬರ ಮನೆಗೆ ಕಳ್ಳತನಕ್ಕೆಂದು ನುಗ್ಗಿದ್ದ. ಆದ್ರೆ ನಿದ್ದೆಯ ಅಮಲು ಆತನನ್ನು ಕೃಷ್ಣನ ಜನ್ಮಸ್ಥಳಕ್ಕೆ ಕರೆದುಕೊಂಡು ಹೋಗಿದೆ.
ದರೋಡೆಗೆ ಬಂದ ಕಳ್ಳನಿಗೆ ಮಂಚದಡಿ ಕುಂಭಕರ್ಣನ ನಿದ್ದೆ; ಆಮೇಲೇನಾಯ್ತು ನೋಡಿ...
ವ್ಯಾಪಾರಿಯೊಬ್ಬನ ಮನೆಗೆ ಕಳ್ಳತನಕ್ಕೆ ನುಗ್ಗಿ ಕಳ್ಳನೊಬ್ಬ ಫಜೀತಿಗೊಳಗಾಗಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಈ ವಿಚಿತ್ರ ಘಟನೆ ನಡೆದಿದ್ದು, ಆಂಧ್ರ ಪ್ರದೇಶದ ಪೂರ್ವ ಗೋಧಾವರಿ ಜಿಲ್ಲೆಯ ಗೋಕಾವರಂನಲ್ಲಿ. ಕಳ್ಳ ಚೌಟುಪಲ್ಲಿ ಸುರೇಶ್, ರಾತ್ರಿ ವೇಳೆ ನೇರವಾಗಿ ವ್ಯಾಪಾರಿಯೊಬ್ಬರ ಮನೆಗೆ ನುಗ್ಗಿದ್ದಾನೆ. ಮನೆಯೊಡೆಯನನ್ನು ನೋಡಿದ ಕಳ್ಳ ಸದ್ಯ ಅಡಗಿ ಕುಳಿತು, ಯಜಮಾನ ಮಲಗಿದ ಬಳಿಕ ಕಳ್ಳತನಕ್ಕೆ ಇಳಿಯಬೇಕೆಂದು ಪ್ಲಾನ್ ಮಾಡಿದ್ದಾನೆ. ಅಂತೆಯೇ ಯಜಮಾನ ಮಲಗುವ ಮಂಚದಡಿ ಅಡಗಿ ಕುಳಿತಿದ್ದಾನೆ. ಆದ್ರೆ, ಪಾಪ ಕಳ್ಳ. ಅವತ್ತು ಯಾರ ಮುಖ ನೋಡಿ ಎದ್ದಿದ್ದನೋ ಏನೋ. ಮಂಚದಡಿ ಅಡಗಿ ಕುಳಿತಿದ್ದವನ ಮೈಮೇಲೆ ಕುಂಭಕರ್ಣನೇ ಬಂದಿದ್ದ. ಗಟ್ಟಿ ನಿದ್ದೆಗೆ ಜಾರಿದ್ದ ಕಳ್ಳ ಮಂಚದಡಿಯಲ್ಲೇ ಗೊರಕೆ ಹೊಡೆಯುತ್ತಾ ಬೆಳಗ್ಗಿನವರೆಗೆ ಅಲ್ಲಿಯೇ ಬಾಕಿಯಾಗಿದ್ದಾನೆ. ನಿದ್ದೆಯ ಅಮಲು ಕಳ್ಳನ ಕಳ್ಳತನದ ಯೋಜನೆಯನ್ನು ಬುಡಮೇಲು ಮಾಡಿದೆ.
ಮುಂಜಾನೆ ವೇಳೆ ಎದ್ದ ಮನೆಯ ಯಜಮಾನನಿಗೆ ಮಂಚದಡಿಯಿಂದ ಗೊರಕೆ ಸದ್ದು ಕೇಳಿದೆ. ಒಂದು ಬಾರಿ ಆತಂಕಗೊಂಡ ಯಜಮಾನ, ರೂಂ ಬಾಗಿಲು ಹಾಕಿ ಪೊಲೀಸರಿಗೆ ಕರೆ ಮಾಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಗಾಢ ನಿದ್ದೆಯಲ್ಲಿದ್ದ ಕಳ್ಳನನ್ನು ಕಂಬಿ ಹಿಂದೆ ದೂಡಿದ್ದಾರೆ. ವ್ಯಾಪಾರಿ ಮನೆಗೆ ಕನ್ನಹಾಕಲು ಬಂದ ಕಳ್ಳ ಈಗ ಕೃಷ್ಣನ ಜನ್ಮ ಸ್ಥಳ ಸೇರಿದ್ದಾನೆ. ಕಳ್ಳತನ ಮಾಡಿ ಶ್ರೀಮಂತನಾಗೋ ಕನಸು ಕಂಡಿದ್ದ ಕಳ್ಳ, ತನಗೆಚ್ಚರ ಆಗುವ ವೇಳೆಗೆ ಕಂಬಿ ಹಿಂದೆ ಬಂಧಿಯಾಗಿದ್ದ.