ಕರ್ನಾಟಕ

karnataka

ETV Bharat / bharat

ಶಾಸಕರೂ ನಾಚುವಂತಿದೆ ಈ ಮೂವರು ಮಹಿಳಾ ಸರ್​ಪಂಚ್​​ಗಳ ಸಾಧನೆ:  ಬೆನ್ನು ತಟ್ಟಿದ ಮೋದಿ - ರಾಷ್ಟ್ರೀಯ ಪಂಚಾಯತ್​ ರಾಜ್ ದಿನಾಚರಣೆ

ಮೂವರು ಮಹಿಳಾ ಸರ್​ಪಂಚ್​ಗಳು ತಮ್ಮ ಗ್ರಾಮಗಳಲ್ಲಿ ಕ್ರಾಂತಿಕಾರಿ ಕೆಲಸ ಮಾಡಿದ್ದು, ಅವರು ಗ್ರಾಮ ಮಟ್ಟದಲ್ಲಿ ಮಾಡಿದ ಕಾರ್ಯಗಳ ಬಗ್ಗೆ ಕೇಳಿದ ಪ್ರಧಾನಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಮೂವರು ಮಹಿಳಾ ಸರ್​ಪಂಚ್​ಗಳು ಮಾಡಿದ ಕಾರ್ಯಚಟುವಟಿಕೆಗಳ ಬಗ್ಗೆ ಅವರೇ ಪ್ರಧಾನಿ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

These 'Sitas' draw 'laxmanrekha' to ensure proper implementation of lockdown
These 'Sitas' draw 'laxmanrekha' to ensure proper implementation of lockdown

By

Published : Apr 28, 2020, 2:58 PM IST

ಹೈದರಾಬಾದ್ : ರಾಷ್ಟ್ರೀಯ ಪಂಚಾಯತ್​ ರಾಜ್ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ದೇಶದ ಆಯ್ದ ಸರ್​ಪಂಚ್ (ಗ್ರಾಮ ಪಂಚಾಯಿತಿ​ ಅಧ್ಯಕ್ಷರ) ಗಳ ಜೊತೆ ಸಂವಾದ ನಡೆಸಿದರು. ಈ ಪೈಕಿ, ಮೂವರು ಮಹಿಳಾ ಸರ್​ಪಂಚ್​ಗಳು ತಮ್ಮ ಗ್ರಾಮಗಳಲ್ಲಿ ಕೊರೊನಾ ತಡೆಗಟ್ಟಲು ಕ್ರಾಂತಿಕಾರಿ ಕೆಲಸ ಮಾಡಿದ್ದು, ಅವರು ಗ್ರಾಮ ಮಟ್ಟದಲ್ಲಿ ಮಾಡಿದ ಕಾರ್ಯಗಳ ಬಗ್ಗೆ ಕೇಳಿದ ಪ್ರಧಾನಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಮೂವರು ಮಹಿಳಾ ಸರ್​ಪಂಚ್​ಗಳು ಮಾಡಿದ ಕಾರ್ಯಚಟುವಟಿಕೆಗಳ ಬಗ್ಗೆ ಅವರೇ ಪ್ರಧಾನಿ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ದಾಸ್ ಮೆಡಂಕರ್ :

ಮಹಾರಾಷ್ಟ್ರದ ಪುಣೆಯ ಮೆಡಂಕರ್‌ವಾಡಿಯ ಸರ್ಪಂಚ್ ಆಗಿರುವ ಪ್ರಿಯಾಂಕಾ ದಾಸ್, ಕೊರೊನಾ ವೈರಸ್​ ಹರಡಲು ಪ್ರಾರಂಭವಾದಾಗಿನಿಂದ ಗ್ರಾಮದಲ್ಲಿ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದ್ದು, ಮೊದಲನೆಯದ್ದಾಗಿ ಯಾವುದೇ ವೈರಸ್​ ಅಥವಾ ಬ್ಯಾಕ್ಟೀರಿಯ ಹರಡದಂತೆ ಗ್ರಾಮದಲ್ಲಿ ಸೋಡಿಯಂ ಹೈಪೋಕ್ಲೋರೈಟ್ ಸಿಂಪಡೆಣೆ ಮಾಡಿಸಿದ್ದಾರೆ.

ಸ್ಕಿಲ್ ಇಂಡಿಯಾ ಕಾರ್ಯಕ್ರಮದಡಿ ಕೆಲ ಮಹಿಳಾ ಸ್ವಯಂಸೇವಕರನ್ನು ಆಯ್ಕೆ ಮಾಡಿ ಅವರಿಗೆ ಮಾಸ್ಕ್​ ತಯಾರಿಸಲು ತರಬೇತಿ ನೀಡಿ, ಬಳಿಕ ಸ್ವಯಂ ಸೇವಕರು ಹೊಲಿದ ಮಾಸ್ಕ್​ಗಳನ್ನು ಉಚಿತವಾಗಿ ಗ್ರಾಮಸ್ಥರಿಗೆ ವಿತರಿಸಿದ್ದಾರೆ. ಅಲ್ಲದೆ ಕೊರೊನಾ ಮುಂಜಾಗೃತ ಕ್ರಮವಾಗಿ ಗ್ರಾಮದಲ್ಲಿ ಕ್ವಾರಂಟೈನ್ ಕೇಂದ್ರ ತೆರೆದಿದ್ದಾರೆ. ಸ್ವಯಂ ಸೇವಕರ ತಂಡ ಕಟ್ಟಿಕೊಂಡು ಗ್ರಾಮದ ಮನೆ ಮನೆಗೆ ತೆರಳಿ ಹೊರಗಡೆ ಓಡಾಡದೆ ಮನೆಯಲ್ಲೇ ಇರುವಂತೆ ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ, ಜನರಿಗೆ ಬೇಕಾದ ದಿನಸಿ, ತರಕಾರಿ ಮತ್ತು ಅಗತ್ಯ ವಸ್ತುಗಳನ್ನು ಸ್ವಯಂ ಸೇವಕರ ಮೂಲಕ ಮನೆ ಬಾಗಿಲಿಗೆ ತಲುಪಿಸಿದ್ದಾರೆ.

ಇದರ ಜೊತೆಗೆ ಪ್ರಿಯಾಂಕ ದಾಸ್​ ಮಾಡಿದ ಮತ್ತೊಂದು ಉತ್ತಮ ಕಾರ್ಯ ಎಂದರೆ, ಗ್ರಾಮದ ಮಹಿಳೆಯರಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್​ ವಿತರಣೆ ಮಾಡಿದ್ದಾರೆ. ಪ್ರಿಯಾಂಕ ಮಾಡಿದ ಕೆಲಸದ ಬಗ್ಗೆ ಕೇಳಿದ ಪ್ರಧಾನಿ ಸಂತಸ ವ್ಯಕ್ತಪಡಿಸಿದ್ದು, ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ-ನಾಮ್) ತಂತ್ರಜ್ಞಾನದ ಮೂಲಕ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗುವಂತೆ ಮಾಡಲು ಸಲಹೆ ನೀಡಿದ್ದಾರೆ.

ವರ್ಷಾ ಸಿಂಗ್ :

ಉತ್ತರ ಪ್ರದೇಶದ ನಾಕ್ತಿ ಡೀ ಬುಜುರ್ಗ್ ಗ್ರಾಮ ಲಾಕ್ ಡೌನ್​ ನಿಯಮಗಳನ್ನು ಸಮರ್ಪಕವಾಗಿ ಪಾಲಿಸುತ್ತಿರುವ ಗ್ರಾಮಗಳಲ್ಲಿ ಒಂದು. ಇಲ್ಲಿನ ಸರ್​ಪಂಚ್​ ಆಗಿರುವ ವರ್ಷಾ ಸಿಂಗ್​ ಇದಕ್ಕೆಲ್ಲ ಕಾರಣ.

ಕೊರೊನಾ ಹರಡಲು ಪ್ರಾರಂಭವಾದಗಿನಿಂದ ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಕರು ಮತ್ತು ಕಾರ್ಮಿಕರನ್ನು ಸರಿಯಾಗಿ ಬಳಸಿಕೊಂಡ ವರ್ಷಾ ಸಿಂಗ್ ,ವೈರಸ್​ ಹರಡುವುದನ್ನು ತಡೆಗಟ್ಟಲು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನುಕೈಗೊಂಡಿದ್ದಾರೆ. ಮೊದಲನೆಯದಾಗಿ ಗ್ರಾಮದ ಮನೆ ಮನೆಗೆ ತೆರಳಿ ಜನರಲ್ಲಿ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ, ತಾನು ವೈಯಕ್ತಿಕವಾಗಿ ಮತ್ತು ಇತರರಿಂದ ಮಾಸ್ಕ್​ ಹೊಲಿಸಿ ಗ್ರಾಮದ ಜನರಿಗೆ ಹಂಚಿದ್ದಾರೆ.

ಅಲ್ಲದೆ, ದಾನಿಗಳ ಸಹಾಯದಿಂದ ಬಡವರಿಗೆ ಮತ್ತು ಭಿಕ್ಷುಕರಿಗೆ ಆಹಾರವನ್ನು ಒದಗಿಸಿದ್ದಾರೆ. ಸಂವಾದದ ವೇಳೆ ಪ್ರಧಾನಿ ನರೇಂದ್ರ ಮೋದಿ ವರ್ಷಾ ಸಿಂಗ್ ಜೊತೆ ಪಿಎಂ ಗರೀಬ್ ಕಲ್ಯಾಣ್ ಯೋಜನೆ, ಪಿಎಂ ಕಿಸಾನ್ ಸಮ್ಮಾನ್ ಮತ್ತು ಜನಧನ್​ ಯೋಜನೆಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕೇಳಿದ್ದು, ಪ್ರಧಾನಿಯವರ ಪ್ರಶ್ನೆಗೆ ಅಂಕಿ ಅಂಶಗಳ ಮೂಲಕ ಉತ್ತರ ನೀಡಿದ ವರ್ಷಾ ಸಿಂಗ್ ಶ್ಲಾಘನೆಗೆ ಪಾತ್ರವಾಗಿದ್ದಾರೆ.

ಪಲ್ಲವಿ ಠಾಕೂರ್ :

ಇಂಡೋ-ಪಾಕ್ ಗಡಿಯಲ್ಲಿರುವ ಪಂಜಾಬ್‌ನ ಪಠಾಣ್‌ಕೋಟ್‌ನ ಹರಾ ಗ್ರಾಮದ ಸರ್ಪಂಚ್ ಆಗಿರುವ ಪಲ್ಲವಿ ಠಾಕೂರ್, ಲಾಕ್ ಡೌನ್ ಪ್ರಾರಂಭವಾದಾಗಿನಿಂದ ಗ್ರಾಮದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದಾರೆ. ಯುವಕರ ತಂಡ ಕಟ್ಟಿಕೊಂಡು ಗ್ರಾಮದ ಮನೆ ಮನೆಗೆ ಹೋಗಿ ಕೊರೊನಾ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದ್ದಾರೆ. ಅಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮತ್ತು ಗ್ರಾಮಕ್ಕೆ ಹೊರಗಿನಿಂದ ಯಾರೂ ಬರದಂತೆ ನೋಡಿಕೊಂಡಿದ್ದಾರೆ.

ಇದು ಪಂಜಾಬ್ ರಾಜ್ಯದಲ್ಲಿ ಕೊಯ್ಲು ಅವಧಿಯಾಗಿದ್ದರಿಂದ ರೈತರು ತಮ್ಮ ಬೆಳೆಗಳನ್ನು ಮಾರಾಟ ಮಾಡಲು ಬಹಳ ಕಷ್ಟಪಡುತ್ತಿದ್ದರು. ಈ ಸಮಸ್ಯೆಯನ್ನು ಪರಿಹರಿಸಲು ಠಾಕೂರ್ ನೆರೆಯ ಹಳ್ಳಿಗಳ ಸರ್​ಪಂಚ್​ಗಳ ಜೊತೆ ಚರ್ಚೆ ನಡೆಸಿ, ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಟೋಕನ್ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ರೈತರಿಗೆ ದೊಟ್ಟಮಟ್ಟದ ಸಹಾಯವಾಗಿದೆ. ಪಲ್ಲವಿ ಠಾಕೂರ್ ಮಾಡಿದ ಈ ಐಡಿಯಾದ ಬಗ್ಗೆ ಪ್ರಧಾನಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details