ಎರಡನೇ ವಿಶ್ವ ಮಹಾಯುದ್ಧದ ಭೀಕರತೆಯಿಂದ ತತ್ತರಿಸಿ ಹೋಗಿದ್ದ ಜಗತ್ತು ವಿಶ್ವಶಾಂತಿಯನ್ನು ಸ್ಥಾಪಿಸುವ ಉದ್ದೇಶದಿಂದ ಮನುಕುಲದ ಪ್ರತಿನಿಧಿಯನ್ನಾಗಿ ವಿಶ್ವಸಂಸ್ಥೆಯನ್ನು ಹುಟ್ಟು ಹಾಕಿ 75 ಸಂವತ್ಸರಗಳು ಸಂದವು. ಈ ಚಾರಿತ್ರಿಕ ಘಟನೆಯ ಗೌರವಾರ್ಥವಾಗಿ ಆಚರಿಸುವ ವಾರ್ಷಿಕ ಸಮಾರಂಭದಲ್ಲಿ ಆಂತರಿಕ ‘ಸುಧಾರಣೆಗಳು’ ಎಂಬ ಬೇಡಿಕೆ ಜೋರಾಗಿ ಕೇಳಿ ಬಂದಿದೆ. ಇಪ್ಪತ್ತೈದು ವರ್ಷದ ಹಿಂದೆ ವಿಶ್ವಸಂಸ್ಥೆ ಸ್ಥಾಪನೆಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಅಂದಿನ ಅಧ್ಯಕ್ಷರಾಗಿದ್ದ ಪ್ರಿಟಸ್ ಡು ಅಮಾರಾಲ್ ಅವರು ಸಹ ಇದೇ ವಿಷಯವನ್ನು ಚರ್ಚೆಗೆ ತಂದಿದ್ದರು. ಐದು ವರ್ಷಗಳ ಹಿಂದೆ, ಎಪ್ಪತ್ತನೇ ವರ್ಷದ ಆಚರಣೆಯ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕೇವಲ ಐದು ಪ್ರಮುಖ ದೇಶಗಳು ‘ವಿಟೋ’ ಅಧಿಕಾರ ಹೊಂದಿರುವ ಔಚಿತ್ಯವೇನು ಎಂದು ಪ್ರಶ‍್ನಿಸಿ 104 ದೇಶಗಳು ಒಕ್ಕೊರಲಿನಿಂದ ನಿರ್ಣಯ ಹೊರಡಿಸಿದ್ದು ಒಂದು ಸಂಚಲನವನ್ನೇ ಉಂಟು ಮಾಡಿತ್ತು. ಇದೀಗ ವಿಶ್ವಸಂಸ್ಥೆ ಮತ್ತೊಂದು ಮೈಲುಗಲ್ಲು ತಲುಪಿರುವ ಸುಸಂದರ್ಭದಲ್ಲಿ ತನ್ನೊಳಗೆ ಸುಧಾರಣೆಗೆ ಮುಂದಾಗದೇ ಇರುವ ನಡವಳಿಕೆ ಸಂಸ್ಥೆಯ ವಿಶ‍್ವಾಸಾರ್ಹತೆಯನ್ನೇ ಪ್ರಶ‍್ನಿಸುವಂತೆ ಮಾಡುತ್ತಿದೆ ಎಂಬ ಪ್ರಧಾನಿ ಮೋದಿಯವರ ಟೀಕೆ ಅಕ್ಷರಶಃ ನಿಜವಾಗಿದೆ.
ವಿಶ್ವಸಂಸ್ಥೆ ಸ್ಥಾಪನೆಯಾದ ಸುದೀರ್ಘ ಅವಧಿಯನ್ನು ಕ್ರಮಿಸಿ ಹತ್ತು ಹಲವು ಮೈಲಿಗಲ್ಲುಗಳನ್ನು ಹಾದು ಬಂದ ನಂತರವೂ ಅದು ತನ್ನ ಮೂಲಭೂತ ಗುರಿಯನ್ನು ಸಾಧಿಸಲು ಸಾಧ್ಯವಾಗಿಲ್ಲ. ಇದು ಶೀಘ್ರವಾಗಿ ಸಂಸ್ಥೆಯೊಳಗೆ ಆಗಬೇಕಿರುವ ಆಂತರಿಕ ಸುಧಾರಣೆಯ ಅಗತ್ಯತೆಯನ್ನು ಒತ್ತಿ ಹೇಳುತ್ತದೆ. ಭದ್ರತಾ ಮಂಡಳಿಯನ್ನು ವಿಸ್ತರಿಸಲು ಕರಡು ಪ್ರಸ್ತಾವನೆಯನ್ನು ಸುವರ್ಣ ಮಹೋತ್ಸವದ ಸಭೆಗಳಲ್ಲಿ ಮಂಡಿಸಲು ಪ್ರಯತ್ನಗಳು ನಡೆದಿದ್ದವು. ಆದರೆ ಆ ಪ್ರಯತ್ನಗಳು ಸಫಲವಾಗಿರಲಿಲ್ಲ. ಇದೀಗ ಜಗತ್ತಿನ ಎರಡು ಪ್ರಬಲ ಆರ್ಥಿಕತೆಗಳ ನಡುವಿನ ಶೀತಲ ಸಮರವನ್ನು ಕೊನೆಗೊಳಿಸಬೇಕು ಎಂದು ವಿಶ್ವಸಂಸ್ಥೆಯು ಕರೆ ನೀಡಿದೆ. ತನ್ನ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರ ಭಾವನೆ ಮತ್ತು ಸ್ನೇಹಪೂರ್ವಕ ಬ್ರಾತೃತ್ವದ ಭಾವನೆಗಳನ್ನು ನೆಲೆಗೊಳಿಸಲು ನಡೆಸಿದ ಪ್ರಯತ್ನಗಳಲ್ಲಿ ವಿಶ್ವ ಸಂಸ್ಥೆ ಹೀನಾಯ ಸೋಲು ಕಂಡಿದೆ ಎನ್ನಲು ಇದಕ್ಕಿಂದ ಹೆಚ್ಚಿನ ಪುರಾವೆ ಬೇಕಾಗಿಲ್ಲ. ಇಂದಿನ ಬದಲಾವಣೆ ಸನ್ನಿವೇಶಕ್ಕೆ ತಕ್ಕಂತೆ ಭದ್ರತಾ ಮಂಡಳಿಯನ್ನು ಪ್ರಜಾತಾಂತ್ರಿಕಗೊಳಿಸಿ, ಸಾರ್ವತ್ರಿಕಗೊಳಿಸದಿದ್ದರೆ ವಿಶ್ವಸಂಸ್ಥೆಯ ಅಸ್ತಿತ್ವಕ್ಕೆ ಅರ್ಥ ಉಳಿಯುವುದಾದರೂ ಎಂತು?