ಕರ್ನಾಟಕ

karnataka

ETV Bharat / bharat

ವಿಶೇಷ ಅಂಕಣ: ದ್ವಿಚಕ್ರದ ಮೇಲೆ ಜಗತ್ತು? - ವಿಶೇಷ ಅಂಕಣ: ದ್ವಿಚಕ್ರಗಳ ಮೇಲೆ ಜಗತ್ತು?

ದೊಡ್ಡ ಪ್ರಮಾಣದ ಪರಿಸರ ಹಾಗೂ ಆರ್ಥಿಕ ಲಾಭಗಳನ್ನು ಹೊಂದಿರುವ ಸೈಕಲ್‌ ಬಳಕೆ ಅತ್ಯಂತ ಸುಸ್ಥಿರ ಸಾರಿಗೆ ಮಾದರಿಗಳಲ್ಲಿ ಒಂದು ಎಂಬುದರಲ್ಲಿ ಸಂಶಯವಿಲ್ಲ. ಈ ಹಿಂದೆ ಕೂಡಾ ಮಾರಕ ವಾಯುಮಾಲಿನ್ಯವನ್ನು ಎದುರಿಸುವಲ್ಲಿ ಸೈಕಲ್‌ ಬಳಕೆಗೆ ಪ್ರೋತ್ಸಾಹ ದೊರೆತಿತ್ತು. ಅದಾಗ್ಯೂ ಜನರು ಪ್ರಯಾಣಕ್ಕೆ ಮಾಡುವ ವೆಚ್ಚ ಹಾಗೂ ಪರಸ್ಪರ ಸುರಕ್ಷಿತ ದೈಹಿಕ ಅಂತರವನ್ನು ಕಾಯ್ದುಕೊಳ್ಳದಿರುವುದನ್ನು ನೋಡಿದಾಗ ಪ್ರಯಾಣದ ಗತಿ ಇನ್ಮುಂದೆ ಸ್ವಲ್ಪ ಮಟ್ಟಿಗಾದರೂ ಬದಲಾಗಬಹುದು ಅನಿಸುತ್ತದೆ.

ದ್ವಿಚಕ್ರಗಳ ಮೇಲೆ ಜಗತ್ತು
The world on cycles

By

Published : Jul 15, 2020, 12:14 PM IST

ಈ ವರ್ಷದ ಮೇ ತಿಂಗಳ ಪ್ರಾರಂಭದಲ್ಲಿ ಇಂಗ್ಲಂಡ್‌ನ ಸಂಸತ್ತಿನಲ್ಲಿ ಮಾತನಾಡಿದ್ದ ಬ್ರಿಟಿಷ್‌ ಪ್ರಧಾನಮಂತ್ರಿ ಬೊರಿಸ್‌ ಜಾನ್ಸನ್‌ ಅವರು, ಬರಲಿರುವ ಸನಿಹದ ದಿನಗಳು "ಸೈಕಲ್‌ಗೆ ಹೊಸ ಸುವರ್ಣ ಯುಗವಾಗಲಿದೆ" ಎಂದಿದ್ದರು. ಎರಡು ವರ್ಷಗಳ ಹಿಂದೆ ಬಂದಿದ್ದ ಹೀರೊ ಸೈಕಲ್‌ ಕಂಪನಿಯ ಜನಪ್ರಿಯ ಪ್ರಚಾರ ಘೋಷಣೆ ನೆನಪಿದೆಯೆ "ರೋಡ್‌ ಪೆ ದಿಖೇಗಿ ತಭಿ ತೊ ಚಲೇಗಿ"(ರಸ್ತೆಯಲ್ಲಿ ಕಾಣಿಸಿಕೊಂಡಾಗ ತಾನೆ ಚಲಿಸೋದು) ಎಂಬ ಆ ಘೋಷವಾಕ್ಯವು ಸೈಕಲ್‌ಗಳನ್ನು ಮತ್ತೆ ರಸ್ತೆಗೆ ಇಳಿಸುವ ಗುರಿ ಹೊಂದಿತ್ತು. ಅಷ್ಟೇ ಅಲ್ಲ ಸೈಕಲ್‌ಗಳಿಗಾಗಿ ಪ್ರತ್ಯೇಕ ಪಥದ ಅವಶ್ಯಕತೆಯನ್ನು ಬಿಂಬಿಸಿತ್ತು.

ಕೋವಿಡ್‌ ಯುಗದಲ್ಲಿ ಇಂತಹ ಯಾವುದೇ ಸಕ್ರಿಯ ಅಭಿಯಾನಗಳಿಲ್ಲದೇ "ದ್ವಿಚಕ್ರದ ಮೇಲೆ ಜಗತ್ತು" ಎಂಬುದರ ಲಕ್ಷಣಗಳು ಅತ್ಯಂತ ಸಹಜವಾಗಿ ಕಾಣಿಸಿಕೊಳ್ಳತೊಡಗಿವೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲೇಬೇಕಾಗಿರುವ ಈ ಕಾಲದಲ್ಲಿ ತಮ್ಮ ಕೆಲಸದ ಸ್ಥಳಗಳಿಗೆ ತೆರಳುವ ಜನರು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಿಂತ ತಮ್ಮ ಬೈಕ್‌ಗಳನ್ನು ಹೆಚ್ಚು ನೆಚ್ಚಿಕೊಳ್ಳುವುದರಲ್ಲಿ ಅಚ್ಚರಿಯೇನೂ ಇಲ್ಲ. ಉದಾಹರಣೆಗೆ ಹೇಳುವುದಾದರೆ ಉದ್ಯೋಗಿಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸುವುದನ್ನು ಕೈಬಿಡಬೇಕು ಎಂದು ಸೂಚನೆ ನೀಡಿದ್ದ ಯುರೋಪಿನ ಸಂಸತ್ತು ನಡಿಗೆ ಅಥವಾ ಬೈಕ್‌ ಅಥವಾ ಕೊನೆಯ ಪ್ರಯತ್ನವಾಗಿ ನಿಮ್ಮ ವೈಯಕ್ತಿಕ ಕಾರ್‌ ಬಳಸಿ ಎಂದು ಹೇಳಿತ್ತು. ವಿಶ್ವ ಆರೋಗ್ಯ ಸಂಸ್ಥೆ ಕೂಡ ದೈಹಿಕ ಸಾಮಿಪ್ಯ ತಪ್ಪಿಸಲು ಸೈಕಲ್‌ ಬಳಸುವುದರ ಪರ ವಕಾಲತ್ತು ವಹಿಸಿದೆ.

ದೊಡ್ಡ ಪ್ರಮಾಣದ ಪರಿಸರ ಹಾಗೂ ಆರ್ಥಿಕ ಲಾಭಗಳನ್ನು ಹೊಂದಿರುವ ಸೈಕಲ್‌ ಬಳಕೆ ಅತ್ಯಂತ ಸುಸ್ಥಿರ ಸಾರಿಗೆ ಮಾದರಿಗಳಲ್ಲಿ ಒಂದು ಎಂಬುದರಲ್ಲಿ ಸಂಶಯವಿಲ್ಲ. ಈ ಹಿಂದೆ ಕೂಡಾ ಮಾರಕ ವಾಯುಮಾಲಿನ್ಯವನ್ನು ಎದುರಿಸುವಲ್ಲಿ ಸೈಕಲ್‌ ಬಳಕೆಗೆ ಪ್ರೋತ್ಸಾಹ ದೊರೆತಿತ್ತು. ಅದಾಗ್ಯೂ ಜನರು ಪ್ರಯಾಣಕ್ಕೆ ಮಾಡುವ ವೆಚ್ಚ ಹಾಗೂ ಪರಸ್ಪರ ಸುರಕ್ಷಿತ ದೈಹಿಕ ಅಂತರವನ್ನು ಕಾಯ್ದುಕೊಳ್ಳದಿರುವುದನ್ನು ನೋಡಿದಾಗ ಪ್ರಯಾಣದ ಗತಿ ಇನ್ಮುಂದೆ ಸ್ವಲ್ಪ ಮಟ್ಟಿಗಾದರೂ ಬದಲಾಗಬಹುದು ಅನಿಸುತ್ತದೆ. ಸಾಂಕ್ರಾಮಿಕ ನಂತರದ ಯುಗದಲ್ಲಿ ಸಾಕಷ್ಟು ಪ್ರಮಾಣದ ದೈಹಿಕ ಅಂತರವನ್ನು ಕಾಪಾಡಿಕೊಳ್ಳಬೇಕೆಂದರೆ ದೆಹಲಿ ಮೆಟ್ರೊ ತನ್ನ ಸೇವೆಗಳಲ್ಲಿ ಕನಿಷ್ಟ 6 ಪಟ್ಟು ಹಾಗೂ ಮುಂಬೈ ನಗರ ರೈಲ್ವೆ 14-16 ಪಟ್ಟು ವಿಸ್ತರಣೆ ಮಾಡಿಕೊಳ್ಳಬೇಕಾಗುತ್ತದೆ. ಇನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಹೆಚ್ಚುವರಿಯಾಗಿ 24,000 ಬಸ್‌ಗಳನ್ನು ಹೊಂದಬೇಕಾಗುತ್ತದೆ. ಸಾರ್ವಜನಿಕ ಸಾರಿಗೆ ಸಾಮರ್ಥ್ಯ ಕಡಿಮೆ ಆಗಿರುವಾಗ ಮುಖ್ಯವಾಗಿ ದೊಡ್ಡ ನಗರಗಳ ರಸ್ತೆಗಳು, ಸೂಕ್ತ ಪರ್ಯಾಯ ವ್ಯವಸ್ಥೆಯನ್ನು ಹೊಂದಬೇಕಾದ ಅವಶ್ಯಕತೆ ಇದೆ. ಮತ್ತು ಈ ಪರಿಸ್ಥಿತಿಯಲ್ಲಿ ಸೈಕಲ್‌ ತುಳಿಯುವಿಕೆಯೊಂದೆ ಸೂಕ್ತ ಪರ್ಯಾಯ ಪರಿಹಾರ ಕ್ರಮವಾಗಿ ಉದ್ಭವವಾಗುವ ಸಾಧ್ಯತೆಗಳು ಎದ್ದು ಕಾಣಿಸುತ್ತಿವೆ.

ಇದು ಸೂಕ್ತ ಪರಿಹಾರವಾಗಿದ್ದರೂ ಸುಲಭವಂತೂ ಅಲ್ಲ. ಮೋಟಾರ್‌ ವಾಹನಗಳ ಸಂಚಾರ ವ್ಯವಸ್ಥೆ ಹೊರತುಪಡಿಸಿದ ಅತ್ಯಂತ ವಿಸ್ತೃತವಾದ ದ್ವಿಚಕ್ರ ವಾಹನ ಪಥಗಳ ಜಾಲವನ್ನು ನಾವು ನಿರ್ಮಿಸಬೇಕಾಗುತ್ತದೆ. ಸುರಕ್ಷಿತ ಮತ್ತು ಸುಗಮ ಪ್ರಯಾಣಕ್ಕಾಗಿ ಸೈಕಲ್‌ಗಳಿಗಾಗಿಯೇ ಪ್ರತ್ಯೇಕವಾದ ಮಾರ್ಗ ಅಥವಾ ಪಾದಚಾರಿಗಳೊಂದಿಗೆ ಹಂಚಿಕೊಳ್ಳುವ ಪಥಗಳನ್ನು ನಿರ್ಮಿಸುವ ಅವಶ್ಯಕತೆ ಹೆಚ್ಚಿದೆ. ಡೆನ್ಮಾರ್ಕ್‌ ಮತ್ತು ನೆದರ್‌ಲ್ಯಾಂಡ್‌ನಂತಹ ದೇಶಗಳಲ್ಲಿ ನಗರಗಳ ಮಧ್ಯೆ ವಿಸ್ತೃತವಾದ ಸೈಕಲ್‌ ಪಥಗಳ ವ್ಯಾಪಕ ಜಾಲವೇ ಇದೆ. ತಾರ್ಕಿಕವಾಗಿ ಹೇಳುವುದಾದರೆ ಫೀಟ್‌ಸ್ಪಾತ್‌ ಅಥವಾ ಸೈಕಲ್‌ ಪಥಗಳನ್ನು ನೆದರ್‌ಲ್ಯಾಂಡ್‌ನ ಅಂಗಡಿಗಳು, ಮನೆಗಳು, ನಿಲ್ದಾಣಗಳು, ಶಾಲೆಗಳು, ಕೆಲಸದ ಸ್ಥಳಗಳೆಲ್ಲವುಗಳಲ್ಲಿ ಅಕ್ಷರಶಃ ನಿತ್ಯದ ಸೈಕಲ್‌ ಬಳಕೆಗೆ ಅನುವಾಗುವಂತೆ ನಿರ್ಮಿಸಲಾಗಿದೆ.

ಇದ್ದರೆ ತಾನೆ ಚಲಿಸುವುದು ಎಂಬ ಪರಿಕಲ್ಪನೆಯನ್ನು ಈಗ ಕೋವಿಡ್‌ ಜಗತ್ತಿನಾದ್ಯಂತ ಅಕ್ಷರಶಃ ಪ್ರಚೋದಿಸಿ ಬಿಟ್ಟಿದೆ. ನ್ಯೂಯಾರ್ಕ್‌ ನಗರ 40 ಮೈಲು ಉದ್ದದ ಸೈಕಲ್‌ ಪಥಗಳನ್ನು ನಿರ್ಮಿಸಿದ್ದರೆ, ಬೊಗೊಟಾ ನಗರ ರಾತ್ರಿ ಕಳೆಯುವುದರೊಳಗೆ 76 ಕಿಮೀ ಸೈಕಲ್‌ ಪಥವನ್ನು ನಿರ್ಮಿಸಿದೆ. 17 ಕಿಮೀ ಉದ್ದದ ತಾತ್ಕಾಲಿಕ ಸೈಕಲ್‌-ಪಥಗಳ ನಿರ್ಮಾಣಕ್ಕಾಗಿ ಆಕ್ಲಂಡ್‌ ನಗರ ರಸ್ತೆಯಲ್ಲಿಯ ಕಾರುಗಳ ನಿಲುಗಡೆಯನ್ನು ತೆಗೆದುಹಾಕಿದೆ. ಪಾದಚರಿಗಳು ಹಾಗೂ ಸೈಕಲ್‌ಗಳ ಓಡಾಟಕ್ಕಾಗಿ 35 ಕಿಮೀ ಉದ್ದದ ಓಣಿಗಳನ್ನು ಬದಲಿಸುವ ಪ್ರಕ್ರಿಯೆ ಮಿಲಾನ್‌ ನಗರದಲ್ಲಿ ನಡೆಯುತ್ತಿದೆ. ಪ್ಯಾರಿಸ್‌ ನಗರ 650 ಕಿಮೀ ಉದ್ದದ ದಿಢೀರ್‌ ಸೈಕಲ್‌ ಪಥಗಳನ್ನು ನಿರ್ಮಿಸುತ್ತಿದ್ದರೆ. ಸೈಕಲ್‌ ಮತ್ತು ಕಾಲ್ನಡಿಗೆಗಾಗಿ ಬ್ರಿಟನ್‌ 2 ಬಿಲಿಯನ್‌ ಪೌಂಡ್‌ ಅನುದಾನ ವೆಚ್ಚ ಮಾಡಲು ನಿರ್ಧರಿಸಿದೆ. ಹೀಗೆ ಜಗತ್ತಿನ ಹಲವಾರು ನಗರಗಳು ಸೈಕಲ್‌ ಪಥಗಳನ್ನು ತಾತ್ಕಾಲಿಕವಾಗಿ ಅಥವಾ ಈಗಿರುವ ಪಥಗಳನ್ನು ವಿಸ್ತರಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿವೆ.

ಭಾರತದಲ್ಲಿ ಅದರಲ್ಲಿಯೂ ಬೆಂಗಳೂರು, ತಿರುವನಂತಪುರಂ, ಚೆನ್ನೈ ಮತ್ತು ನವದೆಹಲಿಯಂತಹ ನಗರಗಳಲ್ಲಿ ಕೂಡಾ ಇಂತಹ ಸಂಚಲನೆ ಪ್ರಾರಂಭವಾಗಿದೆ. ಮೋಟಾರ್‌ ವಾಹನಗಳಿಲ್ಲ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸುವಂತಹ ವಿಸ್ತೃತ ಯೋಜನೆಗಳ ಜಾರಿಗೆ ನೀಲನಕ್ಷೆಗಳು ಸಿದ್ಧವಾಗುತ್ತಿವೆ. "ಇಂಡಿಯಾ ಸೈಕಲ್ಸ್‌ ಫಾರ್‌ ಚೇಂಜ್‌ ಚಾಲೆಂಜ್‌ "(ಭಾರತದಲ್ಲಿ ಬದಲಾವಣೆಗಾಗಿ ಸೈಕಲ್‌ಗಳು ಸವಾಲು) ಅಭಿಯಾನವನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಾರಂಭಿಸಿದ್ದು, ಕೋವಿಡ್​ಗೆ ಪ್ರತಿಕ್ರಿಯೆಯಾಗಿ ಸ್ಮಾರ್ಟ್‌ ಸಿಟಿಗಳಲ್ಲಿ ಸೈಕಲ್‌ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಲು ಹೊರಟಿದೆ. ಇದರ ಅಂಗವಾಗಿ ಮೊದಲ ಹಂತದಲ್ಲಿ 10 ನಗರಗಳಲ್ಲಿ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ.

ಜಗತ್ತಿನಾದ್ಯಂತ ಸೈಕಲ್‌ ಜಾಗೃತಿ ಹೆಚ್ಚಳದ ನಡುವೆ, ದೊಡ್ಡ ನಗರಗಳಲ್ಲಿ ಬೇಡಿಕೆಯೂ ದೊಡ್ಡ ಮಟ್ಟದಲ್ಲಿಯೇ ಹೆಚ್ಚುತ್ತಿದೆ ಎಂಬುದನ್ನು ಸಾರ್ವಜನಿಕ ಸೈಕಲ್‌ ಹಂಚಿಕೆ ಕಂಪನಿಗಳು ವರದಿ ಮಾಡಿವೆ. ಹಲವಾರು ಸೈಕಲ್‌ ಉತ್ಪಾದಕರು ತಮ್ಮ ಮಾರಾಟದಲ್ಲಿ ದೊಡ್ಡ ಪ್ರಮಾಣದ ಏರಿಕೆಯನ್ನು ಕಂಡುಕೊಳ್ಳುತ್ತಿದ್ದಾರೆ. ಈ ಪೈಕಿ ಕೆಲವು ಸೈಕಲ್‌ ಉತ್ಪಾದಕರು, ಸಾಂಕ್ರಾಮಿಕ ಪ್ರಾರಂಭವಾದ ನಂತರ, ಅಕ್ಷರಶಃ ಮಿತಿಯಿಲ್ಲದ ಬೇಡಿಕೆಯನ್ನು ಕಾಣುತ್ತಿದ್ದಾರೆ. ಹಲವಾರು ಸರ್ಕಾರಗಳು ಕೂಡಾ ಸೈಕಲ್‌ ಖರೀದಿಯನ್ನು ಪ್ರೋತ್ಸಾಹಿಸತೊಡಗಿವೆ. ಉದಾಹರಣೆಗೆ ಇಟಲಿ ದೇಶದಲ್ಲಿ ಸಾಂಕ್ರಾಮಿಕ ನಂತರದ ಉತ್ತೇಜನಾ ಕ್ರಮವಾಗಿ 50,000 ಕ್ಕಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ನಗರ ಪ್ರದೇಶದ ನಿವಾಸಿಗಳಿಗೆ ಸೈಕಲ್‌ನ ಒಟ್ಟು ವೆಚ್ಚದ ಶೇಕಡಾ 60 ರವರೆಗೆ 500 ಯುರೊ ಮೊತ್ತದ 'ಬೈಕಿ ಬೋನಸ್‌' ರಿಯಾಯಿತಿಯನ್ನು ಘೋಷಿಸಲಾಗಿದೆ. ಸೈಕಲ್‌ಗಳ ದುರಸ್ತಿಗಾಗಿ ಫ್ರೆಂಚ್‌ ಸರಕಾರ €50 ಯುರೊ ಮೊತ್ತದ ವೋಚರ್‌ಗಳನ್ನು ನೀಡುತ್ತಿದೆ. ಇಂಥವೇ ಉತ್ತೇಜಕ ಕ್ರಮಗಳನ್ನು ಹಲವಾರು ಸ್ಥಳೀಯ ಪ್ರಾಧಿಕಾರಗಳು ಕೂಡಾ ನೀಡತೊಡಗಿವೆ. ಉದಾಹರಣೆಗೆ ಫ್ರಾನ್ಸ್‌ನ ಲ್ಯೊನ್‌ ಮೆಟ್ರೊಪಾಲಿಟನ್‌ ಪ್ರದೇಶವು ವಿದ್ಯುತ್‌ಚಾಲಿತ ಸೈಕಲ್‌, ಮಡಿಚಬಹುದಾದ ಸೈಕಲ್‌ ಅಥವಾ ಸರಕು ಸಾಗಾಟ ಸೈಕಲ್‌ಗಳನ್ನು ಖರೀದಿಸುವವರಿಗೆ €500 ಯುರೊ ರಿಯಾಯಿತಿಯನ್ನು ನೀಡುವ ಯೋಜನೆ ಹಾಕಿಕೊಂಡಿದೆ. ಹೊಸ ಸೈಕಲ್‌ಗಳ ಖರೀದಿಗೆ ನಗದು ಪ್ರೋತ್ಸಾಹ ನೀಡಲು ಪೋರ್ಚುಗಲ್‌ ರಾಜಧಾನಿ ಲಿಸ್ಬನ್‌ ಯೋಜನೆ ಹೊಂದಿದೆ.

ಸಮ್ಮಿಶ್ರ ಚಾಲನಾ ಪಥಗಳ ಬಳಕೆ ಹಾಗೂ ನಗರ ಭಾರತವು 5 ಕಿಮೀಗಿಂತಲೂ ಕಡಿಮೆ ಇರುವ ಶೇಕಡಾ ೬೦ರಷ್ಟು ಪ್ರಯಾಣ ಅಂತರವನ್ನು ಹೊಂದಿರುವುದರಿಂದ ಭಾರತದ ನಗರಗಳಲ್ಲಿ ಸಹ ಸೈಕಲ್‌ಗಳ ಬಳಕೆಗೆ ವಿಪುಲ ಅವಕಾಶಗಳಿವೆ. ಹೀಗಿದ್ದರೂ, ದೇಶದ ಪ್ರತಿಯೊಂದು ನಗರದಲ್ಲಿ ಸೈಕಲ್‌ ಕ್ರಾಂತಿ ಅಷ್ಟು ಸುಲಭ ಸಾಧ್ಯವಲ್ಲ. ಭಾರತದಲ್ಲಿ, 20 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ನಗರಗಳಲ್ಲಿ ಸೈಕಲ್‌ಗಳ ಬಳಕೆ ಹೆಚ್ಚಿದೆ. ಆದರೆ, ಜನಸಂಖ್ಯೆ ಹೆಚ್ಚಿದಂತೆ, ಸೈಕಲ್‌ ಬಳಕೆ ಅವಧಿಯೂ ಕಡಿಮೆಯಾಗುತ್ತ ಹೋಗುತ್ತದೆ. ಉದಾಹರಣೆಗೆ ಕೊಲ್ಕೊತಾದಂತಹ ದಟ್ಟಣೆ ಹೆಚ್ಚಿರುವ ನಗರದಲ್ಲಿ ರಸ್ತೆಗಳಿಗೆ ಶೇಕಡಾ 7 ಕ್ಕಿಂತ ಸ್ವಲ್ಪ ಹೆಚ್ಚು ಲಭ್ಯತೆಯಷ್ಟೇ ಇದ್ದು, ಪ್ರತ್ಯೇಕ ಸೈಕಲ್‌ ಪಥ ಹೊಂದುವುದು ಅತ್ಯಂತ ಕಷ್ಟಕರ. ಅಲ್ಲದೇ ಈ ನಗರಗಳ ರಸ್ತೆಗಳಲ್ಲಿ ಸಂಚರಿಸುವ ಬಹುತೇಕ ಸೈಕಲ್‌ ಬಳಕೆದಾರರಿಗೆ ಸಂಚಾರದ ಸರಳ ನಿಯಮಗಳು ಸಹ ಅರ್ಥವಾಗುವುದಿಲ್ಲ ಅಥವಾ ಸಂಚಾರದ ಈ ನಿಯಮಗಳು ತಮಗೆ ಅನ್ವಯವಾಗುವುದಿಲ್ಲ ಎಂದು ಅವರು ಭಾವಿಸಿಕೊಂಡಿದ್ದಾರೆ ಎಂಬ ಸಾಧ್ಯತೆಯನ್ನೂ ನಿರಾಕರಿಸುವಂತಿಲ್ಲ.

ಇವೆಲ್ಲದರ ಹೊರತಾಗಿ ಸೈಕಲ್‌ ಬಳಕೆಯ ಸಾಧ್ಯ ಸಾಧ್ಯತೆಯಲ್ಲಿಯೂ ಸಾಕಷ್ಟು ಮಿತಿಗಳಿವೆ. ನನ್ನ ಬ್ರಿಟಿಷ್‌ ಮಿತ್ರರಲ್ಲಿ ಒಬ್ಬರಾದ ವಾರ್‌ವಿಕ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ತಮ್ಮ ಮನೆಯಿಂದ ರೈಲ್ವೆ ನಿಲ್ದಾಣದವರೆಗಿನ ಕೆಲವು ಮೈಲುಗಳ ಅಂತರವನ್ನು ನಿತ್ಯ ಸೈಕಲ್‌ ಮೂಲಕ ಕ್ರಮಿಸುತ್ತಾರೆ. ನಂತರ ಸೈಕಲ್‌ ಅನ್ನು ರೈಲಿನೊಳಗೆ ಇಟ್ಟುಕೊಂಡು ಕ್ಯಾಂಪಸ್‌ನಿಂದ ಅಂದಾಜು ನಾಲ್ಕು ಮೈಲು ದೂರವಿರುವ ಕೊವೆಂಟ್ರಿ ರೈಲ್ವೆ ನಿಲ್ದಾಣದವರೆಗೆ ಪ್ರಯಾಣಿಸುತ್ತಾರೆ. ನಂತರ ಕೊವೆಂಟ್ರಿ ನಿಲ್ದಾಣದಿಂದ ವಿಶ್ವವಿದ್ಯಾಲಯದ ಕ್ಯಾಂಪಸ್‌ ತನಕ ಮತ್ತೆ ಸೈಕಲ್‌ನಲ್ಲಿ ಹೋಗುತ್ತಾರೆ. ಭಾರತದಲ್ಲಿ ನಾವು ಈ ರೀತಿ ರೈಲಿನೊಳಗೆ ಸೈಕಲ್‌ ಸಾಗಿಸುವುದು ಸಾಧ್ಯವಿದೆಯೆ?

ಅದೇನೇ ಇದ್ದರೂ ರಸ್ತೆಯಲ್ಲಿ ಕಾಣುವುದು (ರೋಡ್‌ ಪೆ ದಿಖೇಗಿ) ಎಂಬ ಘೋಷವಾಕ್ಯ ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಬೇಕಾದ ತುರ್ತು ಇರುವುದಂತೂ ಸತ್ಯ.

ಅತನು ಬಿಸ್ವಾಸ್‌

(ಸಂಖ್ಯಾಶಾಸ್ತ್ರ ಪ್ರಾಧ್ಯಾಪಕ, ಇಂಡಿಯನ್‌ ಸ್ಟ್ಯಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌, ಕೋಲ್ಕತ್ತಾ)

ABOUT THE AUTHOR

...view details