ನವದೆಹಲಿ: ಆರ್ಥಿಕ ಅಪರಾಧ ಎಸಗಿದ ನಂತರ ದೇಶದಿಂದ ಪರಾರಿಯಾದ ಒಟ್ಟು 51 ಜನರು 17,900 ಕೋಟಿ ರೂಪಾಯಿಗಳ ವಂಚನೆ ಮಾಡಿದ್ದಾರೆ ಎಂದು ಸರ್ಕಾರ ಮಂಗಳವಾರ ಸಂಸತ್ತಿಗೆ ತಿಳಿಸಿದೆ.
ರಾಜ್ಯಸಭೆಯಲ್ಲಿ 'ಪರಾರಿಯಾದ ಆರ್ಥಿಕ ಅಪರಾಧಿಗಳ’ ಕುರಿತ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರಿಸಿರುವ ರಾಜ್ಯ ಹಣಕಾಸು ಸಚಿವ ಅನುರಾಗ್ ಸಿಂಗ್ ಠಾಕೂರ್ ತಮ್ಮ ಉತ್ತರದ ವರದಿಯಲ್ಲಿ ಈ ಮಾಹಿತಿ ನೀಡಿದ್ದಾರೆ.
ಒಟ್ಟು 66 ಪ್ರಕರಣಗಳಲ್ಲಿ ಈ ವರೆಗೂ 51 ಮಂದಿ ಪರಾರಿಯಾಗಿದ್ದಾರೆ. ಇನ್ನೂ ಅಪರಾಧಿಗಳೆಂದು ಘೋಷಿಸಲ್ಪಟ್ಟವರು ಇತರ ದೇಶಗಳಿಗೆ ಪಲಾಯನ ಮಾಡಿದ್ದಾರೆ ಎಂದು ಕೇಂದ್ರ ತನಿಖಾ ದಳ(ಸಿಬಿಐ) ವರದಿ ಮಾಡಿದೆ ಎಂದು ಸಚಿವರು ಹೇಳಿದರು.
ಈ ಪ್ರಕರಣಗಳಲ್ಲಿ ಆರೋಪಿಗಳು ಒಟ್ಟು 17,947.11 ಕೋಟಿ ರೂಪಾಯಿ ಅಂದರೆ 18 ಸಾವಿರ ಕೋಟಿಯ ಆಸುಪಾಸು ವಂಚನೆ ಮಾಡಿದ್ದಾರೆ ಎಂದು ಸಿಬಿಐ ವರದಿ ಮಾಡಿದೆ ಎಂದು ಠಾಕೂರ್ ಹೇಳಿದರು.