ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಇದೀಗ ಒಂದು ವರ್ಷ. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ, ಭಾರತದ ಇತರ ರಾಜ್ಯಗಳೊಂದಿಗೆ, ಈ ಗಡಿ ರಾಜ್ಯ ಇನ್ನಷ್ಟು ಒಂದುಗೂಡಿಸುವ ಭಾಗವಾಗಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆಗಸ್ಟ್ 5, 2019ರಂದು ತೆಗೆದುಕೊಂಡ ಈ ನಿರ್ಧಾರ, ವಿಶ್ವವನ್ನು ಆಶ್ಚರ್ಯಕ್ಕೆ ತಳ್ಳಿತು. ಪಾಕಿಸ್ತಾನ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಈ ವಿಷಯ ಪ್ರಸ್ತಾಪಿಸಿ, ಭಾರತವನ್ನು ಏಕಾಂಗಿಯಾಗಿಸಲು ಯತ್ನಿಸಿತಾದರೂ ಅದರಲ್ಲಿ ಅದು ಯಶಸ್ವಿಯಾಗಲಿಲ್ಲ.
ಮುಖ್ಯವಾಗಿ ವಿಶ್ವಸಂಸ್ಥೆಯಲ್ಲಿ 2019 ಸೆಪ್ಟೆಂಬರ್ನಲ್ಲಿ ಈ ವಿಷಯ ಪ್ರಸ್ತಾಪಿಸಿ, ಭಾರತಕ್ಕೆ ಮುಖಭಂಗ ಉಂಟು ಮಾಡಲು ಪಾಕಿಸ್ತಾನ ಪ್ರಯತ್ನಿಸಿತು. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಅತಿ ಕಡಿಮೆ ಬೆಂಬಲ ದೊರೆಯಿತು. ಕೇವಲ ಟರ್ಕಿ ಹಾಗೂ ಮಲೇಷ್ಯಾ ಮಾತ್ರ ಪಾಕಿಸ್ತಾನದ ಪರ ನಿಂತವು. ಪಶ್ಚಿಮ ಏಷ್ಯಾ ಭಾಗದ ಸೌದಿ ಅರೇಬಿಯಾ, ಇರಾನ್ ಹಾಗೂ ಇನ್ನಿತರ ಪ್ರಮುಖ ಇಸ್ಲಾಮಿಕ್ ರಾಷ್ಟ್ರಗಳಿಗೆ ಹಾಗೂ ಇಸ್ಲಾಮಿಕ್ ರಾಷ್ಟ್ರಗಳ ಸಹಕಾರ ಸಂಘಟನೆ (ಒಐಸಿ)ಗೆ ಮನವಿ ಮಾಡಿದರೂ, ಪಾಕಿಸ್ತಾನದ ಬೆಂಬಲಕ್ಕೆ ಇವಾವ ದೇಶಗಳೂ ಮುಂದು ಬರಲಿಲ್ಲ. ಇದಾದ ಬಳಿಕ ಕೋವಿಡ್ 19 ಸಾಂಕ್ರಾಮಿಕ ರೋಗ ಮುನ್ನಲೆಗೆ ಬಂದಿತು ಹಾಗೂ ಕಾಶ್ಮೀರ ವಿವಾದ ಪತ್ರಿಕೆಗಳ ಮುಖಪುಟದಿಂದ ಕಣ್ಮರೆಯಾಯಿತು. ಜೊತೆಗೆ ಕೋವಿಡ್ 19 ಕಾರಣಕ್ಕಾಗಿ, ಪಾಕಿಸ್ತಾನದ ಪ್ರಮುಖ ಬೆಂಬಲಿಗ ರಾಷ್ಟ್ರ ಚೀನಾ ಅಂತಾರಾಷ್ಟ್ರೀಯ ಟೀಕೆಗೆ ಗುರಿಯಾಗಿದ್ದು, ಅದೂ ಕೂಡಾ ಪಾಕಿಸ್ತಾನದ ಬೆನ್ನಿಗೆ ಈಗ ನಿಂತಿಲ್ಲ.
ರಾಯಭಾರಿ ಅನಿಲ್ ತ್ರಿಗುಣಾಯತ್, ಭಾರತದ ರಾಯಭಾರಿಯಾಗಿ ಲಿಬಿಯಾ ಹಾಗೂ ಜೋರ್ಡಾನ್‍ಗಳಲ್ಲಿ ಸೇವೆ ಸಲ್ಲಿಸಿದ್ದರು. ಅವರು ಪಶ್ಚಿಮ ಏಷ್ಯಾ ಹಾಗೂ ಉತ್ತರ ಆಫ್ರಿಕಾ ಖಂಡಗಳನ್ನು ಚೆನ್ನಾಗಿ ಬಲ್ಲರು. ಅವರ ಪ್ರಕಾರ 370ನೇ ವಿಧಿ ರದ್ದತಿ, ಈ ಭಾಗದ ದೇಶಗಳ ಜೊತೆಗೆ ಭಾರತದ ಸಂಬಂಧಕ್ಕೆ ಏನೂ ಪೆಟ್ಟು ನೀಡಿಲ್ಲ. ಅವರ ಪ್ರಕಾರ ಜಮ್ಮು-ಕಾಶ್ಮೀರ ವಿವಾದ ಈಗ ಈ ದೇಶಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿಲ್ಲ. ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಈ ನಿರ್ಧಾರ ಭಾರತಕ್ಕೆ ಯಾವುದೇ ತೊಂದರೆ ಉಂಟುಮಾಡಿಲ್ಲ. ಜೊತೆಗೆ ಈಗ ಇದರ ಬಗ್ಗೆ ಮಾತನಾಡುವ ದೇಶಗಳಾವುದೂ ಇಲ್ಲ. ಇವೆಲ್ಲದರ ಜೊತೆಗೆ ಮಧ್ಯಪ್ರಾಚ್ಯ ರಾಷ್ಟ್ರಗಳಾದ ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ ಹಾಗೂ ಕತಾರ್ ಭಾರತದಲ್ಲಿ ತಮ್ಮ ಹೂಡಿಕೆಯ ಪ್ರಮಾಣ ಹೆಚ್ಚಿಸುತ್ತಿವೆ.
ಈ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಈಟಿವಿ ಭಾರತ: ಪಶ್ಚಿಮ ಏಷ್ಯಾ ದೇಶಗಳು ಭಾರತದ ವಿದೇಶಾಂಗ ನೀತಿಯ ಕೇಂದ್ರ ಸ್ಥಾನವಾಗಿದೆ. ಏಕೆಂದರೆ, ಈ ದೇಶಗಳು ಭಾರತೀಯ ಸಂಸ್ಥೆಗಳಿಗೆ ಅತಿ ದೊಡ್ಡ ಮಾರುಕಟ್ಟೆಯಾಗಿದ್ದು, ಜೊತೆಗೆ ಭಾರತ ಇಂಧನಕ್ಕಾಗಿ ಈ ದೇಶಗಳನ್ನು ಅವಲಂಬಿಸಿದೆ. ಜೊತೆಗೆ ಅತಿ ಹೆಚ್ಚಿನ ಸಂಖ್ಯೆಯ ಅನಿವಾಸಿ ಭಾರತೀಯರು ಇಲ್ಲಿದ್ದಾರೆ. ಈಗಿನ ಕೋವಿಡ್ 19 ಸಾಂಕ್ರಾಮಿಕ ರೋಗದ ಅಲೆ ಈ ಸಂಬಂಧದ ಮೇಲೆ ಯಾವ ತೆರನಾದ ಪರಿಣಾಮ ಬೀರಿದೆ? ಅದರಲ್ಲೂ ಮುಖ್ಯವಾಗಿ ಗಲ್ಫ್ ರಾಷ್ಟ್ರಗಳ ಮೇಲೆ? ಅಂತಾರಾಷ್ಟ್ರೀಯ ರಾಜತಾಂತ್ರಿಕ ಸಂಬಂಧ ಬದಲಾಗುತ್ತಿರುವ ಈ ದಿನಗಳಲ್ಲಿ ಉಭಯ ದೇಶಗಳ ನಡುವಣ ಸಂಬಂಧ ಹೇಗಿದೆ?
ಎಎಂಬಿ ತ್ರಿಗುಣಾಯತ್:ನನ್ನ ಪ್ರಕಾರ, ಪಶ್ಚಿಮ ಏಷ್ಯಾ, ನಮ್ಮ ನೆರೆಹೊರೆಯ ದೇಶಗಳಂತಿದೆ. ಈ ದೇಶಗಳು ನಮಗೆ ಆಯಕಟ್ಟಿನ ಹಾಗೂ ಪ್ರಮುಖ ದೇಶಗಳಾಗಿವೆ. ಅನಿವಾಸಿ ಭಾರತೀಯರ ಕಲ್ಯಾಣದ ನಿಟ್ಟಿನಲ್ಲಿ, ವಾಣಿಜ್ಯ ಹಾಗೂ ವ್ಯವಹಾರ, ಹಡಗು ಮಾರ್ಗ, ಸುರಕ್ಷತೆ, ಇಂಧನ, ಆಹಾರ ಭದ್ರತೆ, ಹೀಗೆ ಎಲ್ಲ ಕ್ಷೇತ್ರಗಳು ಉಭಯ ದೇಶಗಳ ನಡುವಣ ಸಂಬಂಧ ಗಾಢವಾಗಿದೆ. ಇಂಧನ ಕ್ಷೇತ್ರದ ಸ್ಥಿರತೆಯ ದೃಷ್ಟಿಯಿಂದ, ಇದು ಭಾರತಕ್ಕೆ ಅತ್ಯಂತ ಪ್ರಮುಖವಾದ ದೇಶವಾಗಿದೆ.
ಈ ಭಾಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾರತದ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಗಲ್ಫ್ ಸಹಕಾರಿ ದೇಶಗಳು (ಜಿಸಿಸಿ) ಮುಖ್ಯವಾಗಿ ಸೌದಿ ಅರೇಬಿಯಾ, ಯುಎಇ, ಹಾಗೂ ಕತಾರ್ಗಳು ಭಾರತದಲ್ಲಿ ತಮ್ಮ ಹೂಡಿಕೆಯನ್ನು ಹೆಚ್ಚು ಮಾಡುತ್ತಿವೆ. ಅವುಗಳ ಭವಿಷ್ಯದ ಆರ್ಥಿಕ ಕಾರ್ಯತಂತ್ರದ ಭಾಗವಾಗಿ ಈ ಹೂಡಿಕೆ ಮಾಡಲಾಗುತ್ತಿದೆ. ಏಕೆಂದರೆ, ಭಾರತದ ಅಭಿವೃದ್ಧಿ ಶಕೆಯಲ್ಲಿ ಅವುಗಳು ಭಾಗಿಯಾಗಲು ನಿರ್ಧರಿಸಿವೆ. ಸೌದಿ ಅರೇಬಿಯಾ ತೀರಾ ಇತ್ತೀಚೆಗೆ ಜಿಯೋ ಕಂಪನಿಯಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡಿತು. ಜೊತೆಗೆ ರಿಲಯನ್ಸ್ ಕೈಗಾರಿಕೆಯಲ್ಲಿ ಅದು, 20 ಬಿಲಿಯನ್ ಅಮೇರಿಕನ್ ಡಾಲರ್ಗಳಷ್ಟು ಹೂಡಿಕೆ ಮಾಡಲು ನಿರ್ಧರಿಸಿದೆ. ಯುಎಇ, 75 ಬಿಲಿಯನ್ ಅಮೆರಿಕನ್ ಡಾಲರ್ನಷ್ಟು ಮೊತ್ತವನ್ನು ನಾನಾ ಕ್ಷೇತ್ರಗಳಲ್ಲಿ ತೊಡಗಿಸಲು ಯೋಚಿಸಿದೆ. ಕೋವಿಡ್ 19 ಸಾಂಕ್ರಾಮಿಕ ರೋಗದ ನಡುವೆಯೂ, ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಈ ಭಾಗದ ತಮ್ಮ ಸಹವರ್ತಿಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಜೊತೆಗೆ ಈ ಭಾಗಕ್ಕೆ ವೈದ್ಯಕೀಯ ನೆರವು ನೀಡಿದ್ದಾರೆ. ಈ ಪೈಕಿ ಕ್ಷಿಪ್ರ ಕಾರ್ಯಾಚರಣೆ ತಂಡಗಳ ನಿಯೋಜನೆ ಕೂಡಾ ಸೇರಿದೆ.
ಸುಮಾರು ನಾಲ್ಕು ಲಕ್ಷ ಭಾರತೀಯರು, ವಂದೇ ಭಾರತ್ ವಿಮಾನಯಾನ ಸೇವೆ ಮೂಲಕ ಮಧ್ಯಪ್ರಾಚ್ಯದಿಂದ ಭಾರತಕ್ಕೆ ಹಿಂತಿರುಗಿದ್ದಾರೆ. ಇದಕ್ಕೆ ಮಧ್ಯಪ್ರಾಚ್ಯ ದೇಶಗಳ ಸಹಕಾರ ಒಕ್ಕೂಟ ನೆರವು ನೀಡಿತು. ಇದರ ಜೊತೆಗೆ, ಭಾರತದ ಡಿಜಿಟಲ್ ಡಿಪ್ಲೊಮೆಸಿ ಕೂಡಾ ಫಲ ನೀಡಿತು. ಭಾರತದ ಪ್ರಧಾನಿ ನರೇಂದ್ರ ಮೋದಿ, ಸೌದಿ ಅರೇಬಿಯಾದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಜೊತೆಗೆ ನಡೆಸಿದ ಮಾತುಕತೆ ಫಲ ನೀಡಿದೆ. ಅಂತಾರಾಷ್ಟ್ರೀಯ ಸವಾಲುಗಳ ಬಗ್ಗೆ ಚರ್ಚಿಸಲು ವರ್ಚುವಲ್ ಜಿ20 ಶೃಂಗಸಭೆ ಆಯೋಜನೆ ಬಗ್ಗೆ ನಿರ್ಧರಿಸಲಾಗಿದೆ. ಈ ಶೃಂಗಸಭೆಯಲ್ಲಿ ಕೋವಿಡ್ 19 ವಿರುದ್ಧದ ಹೋರಾಟಕ್ಕೆ ಅಂತಾರಾಷ್ಟ್ರೀಯ ಸಹಕಾರ, ವಿಶ್ವ ಆರ್ಥಿಕತೆಯ ಮೇಲೆ ಕೋವಿಡ್19 ದುಷ್ಟರಿಣಾಮ ತಗ್ಗಿಸಲು ಸಹಕಾರ ಹೀಗೆ ನಾನಾ ವಿಷಯಗಳ ಬಗ್ಗೆ ಚರ್ಚಿಸಲು ನಿರ್ಧರಿಸಲಾಗಿದೆ.