ಕರ್ನಾಟಕ

karnataka

ETV Bharat / bharat

ಅಂತರ್ಜಾಲ ಸೇವೆಗಳ ಸ್ಥಗಿತ... ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ - “Freedom of speech and freedom of expression

ಆಗಸ್ಟ್ 19, 2019ರಂದು ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರ ರಾಜ್ಯದಲ್ಲಿ ದೂರಸಂಪರ್ಕ ಜಾಲ ಮತ್ತು ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿತ್ತು. ಸುಮಾರು ಒಂದು ಕೋಟಿಯಷ್ಟು ನಾಗರಿಕರಿಗೆ ಹಠಾತ್ತನೆ ಆನ್​ಲೈನ್​ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮತ್ತು ಸಂಘಟಿತರಾಗುವ ಮೂಲಭೂತ ಸ್ವಾತಂತ್ರ್ಯವನ್ನೂ ಕಿತ್ತುಕೊಳ್ಳಲಾಗಿತ್ತು.

the-shutdown-of-internet services and repression of freedom of expression by central govt
ಅಂತರ್ಜಾಲ ಸೇವೆಗಳ ಸ್ಥಗಿತ...ಅಭಿವ್ಯಕ್ತಿ ಸ್ವಾತಂತ್ರದ ದಮನ

By

Published : Feb 6, 2020, 5:15 PM IST

ಆಗಸ್ಟ್ 19, 2019ರಂದು ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರ ರಾಜ್ಯದಲ್ಲಿ ದೂರಸಂಪರ್ಕ ಜಾಲ ಮತ್ತು ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿತ್ತು. ಸುಮಾರು ಒಂದು ಕೋಟಿಯಷ್ಟು ನಾಗರಿಕರಿಗೆ ಹಠಾತ್ತನೇ ಆನ್​ಲೈನ್​ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮತ್ತು ಸಂಘಟಿತರಾಗುವ ಮೂಲಭೂತ ಸ್ವಾತಂತ್ರ್ಯವನ್ನೂ ಕಿತ್ತುಕೊಳ್ಳಲಾಯಿತು. ಸಾಫ್ಟ್​ವೇರ್​ ಫ್ರೀಡಂ ಲಾ ಸೆಂಟರ್ ನ ಅಂತರ್ಜಾಲ ಟ್ರ್ಯಾಕರ್ ನೀಡಿದ ಮಾಹಿತಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರವು ಕಳೆದ 7 ವರ್ಷಗಳಲ್ಲಿ 180 ಸಲ ಭಾಗಶಃ ಅಥವಾ ಸಂಪೂರ್ಣ ಅಂತರ್ಜಾಲ ಸ್ಥಗಿತ ಕ್ರಮಗಳನ್ನು ಅನುಭವಿಸಿದೆ. ಆಘಾತ ತರಿಸುವ ಈ ಅಂಕಿ ಅಂಶ ತಿಳಿಸುವುದೇನೆಂದರೆ ಜಮ್ಮುಕಾಶ್ಮೀರದಲ್ಲಿ ದೂರಸಂಪರ್ಕ ಜಾಲದ ಮೇಲೆ ಹೇರುವ ನಿರ್ಬಂಧ ಸಾಮಾನ್ಯವಾಗಿಬಿಟ್ಟಿದೆ. ಆದರೆ ಪ್ರಜಾಪ್ರಭುತ್ವ ದೇಶವೊಂದು ಇಷ್ಟು ಸುದೀರ್ಘ ಅವಧಿಯ ಅಂತರ್ಜಾಲ ನಿರ್ಬಂಧ ಹೇರಬಹುದು ಎಂಬುದನ್ನು ಮಾತ್ರ ಅವರು ನಿರೀಕ್ಷಿಸಿರಲಿಲ್ಲ.

ಅಂತರ್ಜಾಲವು ಪ್ರಜಾತಾಂತ್ರಿಕ ಪಾಲ್ಗೊಳ್ಳುವಿಕೆಗೆ ಅತ್ಯಂತ ಅವಶ್ಯಕವಾದ ಅಂಶವೆನ್ನುವುದು ರಹಸ್ಯವೇನೂ ಅಲ್ಲ. ಜಾಲಸಂಪರ್ಕ ಇಲ್ಲದಂತಾದಾಗ ಸಾಮಾಜಿಕ ಮತ್ತು ಆರ್ಥಿಕ ನಷ್ಟವುಂಟಾಗುತ್ತದೆ. ವಿದ್ಯಾರ್ಥಿಗಳಿಗೆ ಅತ್ಯಗತ್ಯ ಶೈಕ್ಷಣಿಕ ಸಾಮಗ್ರಿಗಳಿಗಾಗಿ ಪರದಾಡುವಂತಾಗುತ್ತದೆ. ಆಸ್ಪತ್ರೆಗಳು ಮತ್ತು ತುರ್ತುಸೇವೆಗಳು ಆಡಳಿತಾತ್ಮಕವಾಗಿ ನಿರ್ಬಂಧಕ್ಕೊಳಗಾಗುತ್ತವೆ. ಸ್ಥಳೀಯ ಉದ್ಯಮವೂ ನಷ್ಟವನ್ನನುಭವಿಸುತ್ತದೆ. ವಿದ್ವಾಂಸರಾದ ಜಾನ್ ರೈಡ್ಜಾಕ್ ಅವರು ಇತ್ತೀಚೆಗೆ ಬರೆದಿರುವ ಕೃತಿಯಲ್ಲಿ ತಿಳಿಸುವಂತೆ, ಅಂತರ್ಜಾಲ ಸಂಪರ್ಕದ ಮೇಲೆ ನಿರ್ಬಂಧ ಹೇರುವುದರಿಂದ ಸರ್ಕಾರ ಹೇಳುವಂತೆ ಶಾಂತಿ ಸುವ್ಯವಸ್ಥೆ ಪಾಲನೆಯಾಗುತ್ತದೆ ಎಂಬ ಖಾತ್ರಿಯೇನೂ ಇರುವುದಿಲ್ಲ. ಅಂತರ್ಜಾಲದ ಸಹಾಯದಿಂದ ಒಂದು ಶಾಂತಿಯುತವಾದ ಪ್ರತಿಭಟನೆಗೆ ಬೇಕಾದಂತಹ ವ್ಯಾಪಕ ಸಂವಹನ, ಸಂಯೋಜನೆ ಸಾಧ್ಯವಾಗುತ್ತದೆ. ಆದರೆ ಅಂತರ್ಜಾಲದ ಮೇಲಿನ ನಿರ್ಬಂಧವು ಪ್ರತಿಭಟನೆಗಳನ್ನು ದಮನಿಸಲು ಸಾಧ್ಯವಾಗುವುದಕ್ಕಿಂತ ಪ್ರತಿಭಟನೆಗಳು ಮತ್ತಷ್ಟು ಹಿಂಸಾತ್ಮಕವಾಗಲು ಸಹಕರಿಸುತ್ತವೆ ಎನ್ನುವುದು ರೈಡ್ಜಾಕ್ ಅವರ ವಾದ.

ಸರ್ಕಾರವು ಇನ್ನಿತರ ಕ್ರಮಗಳೊಂದಿಗೆ ಅಂತರ್ಜಾಲವನ್ನು ಸ್ಥಗಿತಗೊಳಿಸಿದಾಗ ಅದನ್ನು ಕಾಶ್ಮೀರಿ ಟೈಮ್ಸ್ ಪತ್ರಿಕೆಯ ಸಂಪಾದಕರಾದ ಅನುರಾಧಾ ಭಾಸಿನ್ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಸುಪ್ರೀಂ ಕೋರ್ಟ್​ ಇಂತಹ ನಿರ್ಬಂಧಗಳ ಕಾನೂನಾತ್ಮಕತೆಯ ಕುರಿತು ನಿರ್ಣಯಿಸುವಾಗ ಈ ಅಂಶಗಳನ್ನು ಪರಿಗಣಿಸುವ ಅವಕಾಶವಾಗಲಿಲ್ಲ. ಈ ನಿರ್ದಿಷ್ಟ ಸಂದರ್ಭದಲ್ಲಿ ನಾಗರಿಕ ಸಮಾಜದ ಕಾಳಜಿಗಳು ತೀವ್ರವಾಗಿದ್ದವು. ಯಾಕೆಂದರೆ ಸರ್ಕಾರ ವಿಫಲಗೊಂಡಿತ್ತು, ಕಾನೂನಿಗೆ ಸಂಪೂರ್ಣ ಅಗೌರವ ತೋರಿಸಿತ್ತು, ಅಂತರ್ಜಾಲ ಸ್ಥಗಿತಗೊಳಿಸಲು ಹೊರಡಿಸಿದ್ದ ಆದೇಶವನ್ನು ನ್ಯಾಯಾಲಯದ ಎದುರು ಹಾಜರುಪಡಿಸಲು ವಿಫಲವಾಗಿತ್ತು.

ಈ ವರ್ಷದ ಜನವರಿ 10ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಅದು ಸಂವಿಧಾನದ ಮೂಲತತ್ವಗಳನ್ನು ಎತ್ತಿಹಿಡಿಯಿತಲ್ಲದೇ ಮುಂದಿನ ಪ್ರಕರಣಗಳಿಗೆ ಒಂದು ಪ್ರಗತಿಪರವಾದ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದೆ ಎನ್ನಬಹುದು. ಮೊಟ್ಟ ಮೊದಲನೆಯದಾಗಿ ನ್ಯಾಯಾಲಯವು ದೃಢೀಕರಿಸಿದ್ದೇನೆಂದರೆ, ಸಂವಿಧಾನದ 19ನೇ ವಿಧಿಯ ಮೂಲಕ ಸಂವಿಧಾನವು “ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯ ಮತ್ತು ಅಂತರ್ಜಾಲದ ಮಾಧ್ಯಮದ ಮೂಲಕ ಯಾವುದೇ ವೃತ್ತಿಯನ್ನು ಕೈಗೊಳ್ಳುವ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ” ಎರಡನೇಯದಾಗಿ, ಅಂತರ್ಜಾಲದ ಮೇಲೆ ಅನಿರ್ದಿಷ್ಟ ಕಾಲಾವಧಿಯ ನಿರ್ಬಂಧಗಳನ್ನು ಹೇರಲು ಬರುವುದಿಲ್ಲ, ಪ್ರತಿವಾರವೂ ಅಧಿಕಾರಿಗಳು ಪರಿಸ್ಥಿತಿಯನ್ನು ಪರಾಮರ್ಶಿಸಬೇಕಲ್ಲದೇ ಈ ಕುರಿತು ನೀಡಲಾದ ಆದೇಶಗಳು ನ್ಯಾಯಿಕ ವಿಮರ್ಶೆಗೆ ಒಳಪಟ್ಟಿರುತ್ತವೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್​ ಮುಂದಿನ ದಿನಗಳಲ್ಲಿ ಅಂತರ್ಜಾಲದ ಮೇಲಿನ ನಿರ್ಬಂಧಗಳನ್ನು ಪ್ರಶ್ನಿಸಲು ಬಲವನ್ನು ಗಳಿಸಿಕೊಂಡಿದೆ. ಆದರೆ ಕೆಲವು ಅತ್ಯವಶ್ಯಕ ಸೇವೆಗಳನ್ನು ಪುನಾರಂಭಿಸಲು ಅದೇಶ ನೀಡಿದ್ದನ್ನು ಬಿಟ್ಟರೆ ಕಾಶ್ಮೀರಿ ನಾಗರಿಕರಿಗೆ ಸೂಕ್ತ ನ್ಯಾಯ ದೊರಕಿಸುವಲ್ಲಿ ನ್ಯಾಯಾಲಯ ಹಿಂದೆ ಬಿದ್ದಿದೆ ಎಂಬುದು ಹಲವಾರು ವಿದ್ವಾಂಸರ ಅಭಿಪ್ರಾಯವಾಗಿದೆ.

ಸುಪ್ರೀಂ ಕೋರ್ಟ್​ ಈ ತೀರ್ಪು ನೀಡುತ್ತಿದ್ದಂತೆ ಜಮ್ಮು ಕಾಶ್ಮೀರ ಸರ್ಕಾರವು 2ಜಿ ಅಂತರ್ಜಾಲ ಸೇವೆಗಳಿಗೆ ಅವಕಾಶ ನೀಡಿತಲ್ಲದೆ ಕೇವಲ 301 ಜಾಲತಾಣಗಳಿಗೆ ಪ್ರವೇಶಾವಕಾಶ ಒದಗಿಸಿತು. ಆನ್ಲೈನ್ ಮೂಲಕ ಸೇವೆ ನೀಡುವ ಅವಕಾಶವನ್ನು ಮನಬಂದವರಿಗೆ ನೀಡಲಾಯಿತು. ಅನೇಕ ಅತಿಮುಖ್ಯ ಸಂಪರ್ಕ ಸೇವೆಗಳು ‘ಶ್ವೇತಪಟ್ಟಿ’ಯಲ್ಲಿದ್ದ ಕಾರಣ ಜನರಿಗೆ ಲಭ್ಯವಾಗಲೇ ಇಲ್ಲ. ಈ ‘ಅಂತರ್ಜಾಲದ ಮೇಲಿನ ಈ ನಿಯಂತ್ರಣವು’ ತೀರಾ ಅನರ್ಥಕಾರಿ ಎಂಬ ಮಾತುಗಳು ಕೇಳಿಬರುತ್ತಿವೆ.

ತಾಂತ್ರಿಕವಾಗಿ ಹೇಳುವುದಾದರೆ, ಈ ನಿಯಂತ್ರಣವು ಆಧುನಿಕವಾದ ಸಂಪರ್ಕ ಜಾಲವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡಿದೆ. ಯಾರಾದರು ಒಂದು ಜಾಲತಾಣಕ್ಕೆ ಸಂಪರ್ಕ ಪಡೆದರೆ ಆ ಜಾಲತಾಣವು ಇತರೆ ಸರ್ವರ್​​ಗಳಿಂದ ಅತ್ಯಗತ್ಯ ಸಂಪನ್ಮೂಲಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕಿರುತ್ತದೆ. ಕೆಲವೇ ಜಾಲತಾಣಗಳಿಗೆ ಪ್ರವೇಶಾವಕಾಶ ನೀಡಿದಾಗ ಇನ್ನಿತರ ನಿರ್ಬಂಧಿತ ಜಾಲತಾಣಗಳಿಂದ ಆ ತಾಣಕ್ಕೆ ಲಭ್ಯವಾಗಬೇಕಾದ ಮಾಹಿತಿಯೂ ನಿರ್ಬಂಧಗೊಂಡಿರುತ್ತದೆ. ರೋಹಿಣಿ ಲಕ್ಷಾನೆ ಮತ್ತು ಪ್ರತೀಕ್ ವಾಗ್ರೆ ನಡೆಸಿದ ಇತ್ತೀಚಿನ ಪ್ರಯೋಗವೊಂದು ಇದನ್ನು ಪ್ರಾಯೋಗಿಕವಾಗಿ ನಿರೂಪಿಸಿ ದೃಢಪಡಿಸಿದೆ. ಈಗ ಅವಕಾಶ ಪಡೆದಿರುವ 301 ಜಾಲತಾಣಗಳ ಪೈಕಿ ಕೇವಲ 126 ಜಾಲತಾಣಗಳಿಗಷ್ಟೇ ಯಾವುದೋ ರೀತಿಯಲ್ಲಿ ಪ್ರವೇಶ ಪಡೆದು ಬಳಸಬಹುದಾಗಿದೆ.

ಈ ಆದೇಶವು ಸುಪ್ರೀಂ ಕೋರ್ಟ್ ಆದೇಶದ ಪರಿಣಾಮವಾಗಿ ಬಂದಿರುವಂತೆ ತೋರುವಾಗಲೇ ಇದಕ್ಕೆ ಯಾವುದೇ ಕಾನೂನಾತ್ಮಕ ಆಧಾರವಿಲ್ಲವಾಗಿದೆ. ಈ ಆದೇಶವು ವಸಾಹತುಶಾಹಿ ಕಾಲದ ಇಂಡಿಯನ್ ಟೆಲಿಗ್ರಾಫ್ ಕಾಯ್ದೆಯಡಿಯಲ್ಲಿ 2017ರಲ್ಲಿ ಹೊರಡಿಸಿದ್ದ ದೂರಸಂಪರ್ಕ ಸೇವೆಗಳ ತಾತ್ಕಾಲಿಕ ಅಮಾನತು (ಸಾರ್ವಜನಿಕ ತುರ್ತುಸ್ಥಿತಿ ಅಥವಾ ಸಾರ್ವಜನಿಕ ಸುರಕ್ಷತೆ) ನಿಯಮಗಳನ್ನು ಆಧಾರವಾಗಿ ಉಲ್ಲೇಖಿಸುತ್ತದೆ. ಈ ನಿಯಮಗಳು ಸರ್ಕಾರವು ದೂರಸಂಪರ್ಕ ಮತ್ತು ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲು ಅವಕಾಶ ನೀಡುತ್ತವೆಯಾದರೂ ಈಗ ಮಾಡಲಾದಂತೆ “ಶ್ವೇತಪಟ್ಟಿ” ಮಾಡಿ ಆದೇಶಿಸುವ ಅವಕಾಶ ನೀಡುವುದಿಲ್ಲ.

ಮಾಹಿತಿ ತಂತ್ರಜ್ಞಾನ ಕಾಯ್ದೆಯು ತನ್ನ ಸೆಕ್ಷನ್​​ 69 Aಯ ಮೂಲಕ, ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯಗಳು ಕೆಲವು ಜಾಲತಾಣಗಳನ್ನು ನಿರ್ಬಂಧಿಸಲು ಆದೇಶಿಸುವ ಅವಕಾಶ ನೀಡುತ್ತದೆ. ಅಂತರ್ಜಾಲ ಸೇವೆಗಳನ್ನು ಒದಗಿಸುವವರು ಪಡೆದುಕೊಂಡ ಪರವಾನಗಿ ಒಪ್ಪಂದದಲ್ಲಿಯೂ ಸರ್ಕಾರವು ರಾಷ್ಟ್ರೀಯ ಭದ್ರತೆಯ ಆಧಾರದಲ್ಲಿ ಕೆಲವು ಸೇವೆಗಳನ್ನು ಸ್ಥಗಿತಗೊಳಿಸುವ ಅವಕಾಶವಿದೆ. ಹೀಗಾಗಿ “ಶ್ವೇತಪಟ್ಟಿ” ಮಾಡುವ ಆದೇಶಕ್ಕೆ ಯಾವುದೇ ಕಾನೂನಾತ್ಮಕ ಸಿಂಧುತ್ವ ಇರುವುದಿಲ್ಲ. ಯಾಕೆಂದರೆ ಇದು ಜಾಲತಾಣಗಳನ್ನು ಕೇವಲ ಬ್ಲಾಕ್ ಮಾಡುವ ತರ್ಕವನ್ನು ತಲೆಕೆಳಗಾಗಿಸುತ್ತದೆ. ಈಗ ಕಾಶ್ಮೀರಿಗರು ಕೆಲವು ಅಪ್ಲಿಕೇಶನ್ ಗಳ ಸಹಾಯದಿಂದ ವಿಪಿಎನ್​​​ಗಳ ಮುಖಾಂತರ ಈ ‘ಶ್ವೇತಪಟ್ಟಿ’ಯನ್ನು ತಪ್ಪಿಸಿಕೊಳ್ಳುವ ದಾರಿಗಳನ್ನು ಕಂಡುಕೊಂಡ ನಂತರ ಭದ್ರತಾ ಪಡೆಗಳು ಈ ಅಪ್ಲಿಕೇಶನ್​​​ಗಳನ್ನು ತೆಗೆದುಹಾಕಲು ಬಲವಂತಪಡಿಸತೊಡಗಿದರು ಎಂಬ ವರದಿಗಳು ಬಂದವು. ವಿಪಿನ್​​​ಗಳ ಬಳಕೆಯನ್ನು ತಡೆಯುವ ಯಾವುದೇ ಕಾನೂನು ಇಲ್ಲವಾದರೂ ಇದೆಲ್ಲಾ ನಡೆಯಿತು.

ಕಾಶ್ಮೀರದಲ್ಲಿ ಅಂತರ್ಜಾಲ ಮತ್ತು ದೂರಸಂಪರ್ಕ ಸೇವೆಗಳನ್ನು ನಿರ್ಬಂಧಿಸಿ ಏಳು ತಿಂಗಳಾದವು. ಕಾಶ್ಮೀರಿಗರ ಮೂಲಭೂತ ಹಕ್ಕುಗಳಿಂದ ಕಾಶ್ಮೀರಿಗಳನ್ನು ವಂಚಿಸಿದ ಈ ಘೋರವಾದ ತಪ್ಪನ್ನು ಭವಿಷ್ಯದಲ್ಲಿ ಮುಂದೆಂದೂ ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲ. ಸಂಪೂರ್ಣ ಸ್ಥಗಿತಗೊಳಿಸಿದ ತಿಂಗಳುಗಳ ನಂತರ ಸೀಮಿತ ಮತ್ತು ಭಾಗಶಃ ಸೇವೆಗಳನ್ನು ನೀಡುವ ಬದಲು ಉತ್ತಮ ಕ್ರಮಗಳನ್ನು ಸರ್ಕಾರ ಕೈಗೊಳ್ಳಬಹುದು. ಮುಂದಿನ ದಶಕಕ್ಕೆ ಕಾಲಿಡುತ್ತಿರುವಂತೆ ಇಡೀ ಜಗತ್ತು ನಮ್ಮತ್ತ ನೋಡುತ್ತಿದೆ. ‘ಸಾರ್ವಜನಿಕ ಸುವ್ಯವಸ್ಥೆ’ ಮತ್ತು ‘ರಾಷ್ಟ್ರೀಯ ಭದ್ರತೆ’ಗಳನ್ನು ಕಾಪಾಡುವ ಘೋಷಣೆಗಳನ್ನು ಹೊರಡಿಸುವ ಸಾಂಪ್ರದಾಯಿಕತೆ ಮೇಲಿನ ನಡೆಗಳನ್ನು ಅನುಸರಿಸುತ್ತಾ ನಾಗರಿಕ ಹಕ್ಕುಗಳನ್ನು ಹತ್ತಿಕ್ಕಿದವರನ್ನು ಚರಿತ್ರೆ ಕ್ಷಮಿಸುವುದಿಲ್ಲ.

ಲೇಖಕರು: ಗುರುಶಬದ್ ಗ್ರೋವರ್- ಸೆಂಟರ್ ಫಾರ್ ಇಂಟರ್​ನೆಟ್ ಆ್ಯಂಡ್ ಸೊಸೈಟಿ ಸಂಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ತಂಡದಲ್ಲಿ ಕಾನೂನು ಮತ್ತು ತಾಂತ್ರಿಕ ಸಂಶೋಧನೆಯ ನಿರ್ವಾಹಕರು (ಈ ಅಭಿಪ್ರಾಯಗಳು ವೈಯಕ್ತಿಕವಾದವು)

ABOUT THE AUTHOR

...view details