ಉತ್ತರಾಖಂಡ್(ಡೆಹ್ರಾಡೂನ್):ದೇಶ ಪ್ಲಾಸ್ಟಿಕ್ ಮುಕ್ತವಾಗಬೇಕೆಂಬುದು ಪ್ರತಿಯೊಬ್ಬರ ಇರಾದೆ. ಆದ್ರೆ ಅದಕ್ಕಾಗಿ ನಿರಂತರ ಪ್ರಯತ್ನಗಳು ನಡೆಯೋದು ತುಂಬಾ ಕಡಿಮೆ. ದೇಶದ ಪ್ರತಿ ಗಲ್ಲಿ ಗಲ್ಲಿಗಳಲ್ಲೂ ಸ್ವಚ್ಛತೆಯ ಪ್ರಯತ್ನವಿದ್ದರೆ, ಭಾರತ ನಿಸ್ಸಂಶಯವಾಗಿ ಸ್ವಚ್ಛ ಭಾರತವಾಗಬಹುದು. ಇದಕ್ಕೆ ಉತ್ತರಾಖಂಡ್ನ ಈ ಕಾಲೊನಿ ಸಾಕ್ಷಿಯಾಗಿದೆ. ಈ ಕುರಿತ ವಿಶೇಷ ವರದಿ ನೋಡಿ.
ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನದಿಂದ ಪ್ರಭಾವಿತರಾದ ಉತ್ತರಾಖಂಡ್ ರಾಜ್ಯದ ಡೆಹ್ರಾಡೂನ್ನ ಈ ಕಾಲೊನಿಯ ಜನರು ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಇಲ್ಲಿನ ನಿವಾಸಿಗಳು ಇಡೀ ಕಾಲೊನಿಯನ್ನು ಸ್ವಚ್ಛವಾಗಿಡಲು ತಮ್ಮದೇ ಆದ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಈ ಐಡಿಯಾ ಈಗ ರಾಷ್ಟ ಮಟ್ಟದಲ್ಲಿ ಗಮನ ಸೆಳೆದಿದೆ.
ಕೇವಲ್ ವಿಹಾರ್ ಕಾಲೊನಿ ಜನರಿಂದ ಸ್ವಚ್ಛತೆ ಪಾಠ
ಡೆಹ್ರಾಡೂನ್ನ ಕೇವಲ್ ವಿಹಾರ್ ಕಾಲೊನಿ ಸಮಗ್ರ ತ್ಯಾಜ್ಯ ವಿಂಗಡಣೆ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಪ್ರಯತ್ನ ಮಾಡುತ್ತಿದೆ. ಇಲ್ಲಿನ ಜನರು ಮಣ್ಣಿನಲ್ಲಿ ಕರಗದೆ ಸುತ್ತಲಿನ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಮುಕ್ತ ಕಾಲೊನಿ ನಿರ್ಮಿಸಲು ಪಣ ತೊಟ್ಟಿದ್ದಾರೆ. ಅದಕ್ಕೆ ತಕ್ಕಂತೆ ಪ್ರತಿ ಮನೆಯ ಸದಸ್ಯರೂ ಒಂದೇ ಮನಸ್ಥಿತಿಯೊಂದಿಗೆ ಕೈ ಜೋಡಿಸುತ್ತಿದ್ದಾರೆ. ಇಲ್ಲಿನ ಪ್ರತಿ ಮನೆಯ ಜನರೂ ಹಸಿ ಕಸ ಮತ್ತು ಒಣ ಕಸವೆಂದು, ಕಸವನ್ನು ಸಮಗ್ರವಾಗಿ ವಿಂಗಡಿಸುತ್ತಾರೆ. ಇದರಲ್ಲಿ ಹಸಿಕಸವನ್ನು ಒಟ್ಟು ಸೇರಿಸಿ ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತದೆ.
ಹಸಿ ಕಸವನ್ನೇನೋ ಕಾಂಪೋಸ್ಟ್ ಮೂಲಕ ಗೊಬ್ಬರವಾಗಿ ಸದ್ಬಳಕೆ ಮಾಡಲಾಗುತ್ತದೆ. ಆದ್ರೆ, ಒಣ ಕಸಕ್ಕೆ ಪರ್ಯಾಯ ವ್ಯವಸ್ಥೆ ಇದೆಯೇ?. ಖಂಡಿತಾ ಇದೆ. ಇಲ್ಲಿನ ಮನೆಗಳಿಂದ ಸಂಗ್ರಹವಾಗುವ ಏಕಬಳಕೆ ಪ್ಲಾಸ್ಟಿಕ್ಗಳನ್ನು ಸಂಗ್ರಹಿಸಿ ಅದನ್ನು ರಸ್ತೆ ನಿರ್ಮಾಣಕ್ಕೆ ಮರುಬಳಕೆ ಮಾಡಲಾಗುತ್ತಿದೆ. ಭಾರತೀಯ ಪೆಟ್ರೋಲಿಯಂ ಸಂಸ್ಥೆಗೆ ಡಿಸೇಲ್ ನಿರ್ಮಾಣಕ್ಕೆ ಬೇಕಾದ ಕಚ್ಛಾ ವಸ್ತುವಾಗಿಯೂ ಈ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕಳುಹಿಸಲಾಗುತ್ತದೆ.