ಕರ್ನಾಟಕ

karnataka

ETV Bharat / bharat

ಮನುಕುಲಕ್ಕೆ ಸಾಂಕ್ರಾಮಿಕ ರೋಗಗಳು ಹೇಳಿದ ಪಾಠ, ಚರಿತ್ರೆ ಎಚ್ಚರಿಸುತ್ತಿದೆ; ಮನುಷ್ಯತ್ವವೇ ಪ್ರಧಾನ! - ಸಾಂಕ್ರಾಮಿಕ ರೋಗಗಳು ಹೇಳಿದ ಪಾಠ

ವೈರಸ್​ಗಳು ನಡೆಸುವ ದಾಳಿಗಳು ಕಳೆದ ಎರಡು ಮೂರು ದಶಕಗಳಲ್ಲಿ ಪದೇ ಪದೇ ಎದುರಾಗುತ್ತಲೇ ಇವೆ. ಸಾರ್ಸ್, ಹಂದಿ ಜ್ವರ, ಎಬೊಲಾ, ಮರ್ಸ್, ಜೈಕಾ, ಹಳದಿ ಜ್ವರ. ಇವೆಲ್ಲ ಒಂದಲ್ಲ ಒಂದು ಬಗೆಯಲ್ಲಿ ಇಡೀ ಮನುಷ್ಯಕುಲಕ್ಕೇ ಸವಾಲೊಡ್ಡಿವೆ. ಈ ವೈರಾಣು ಮುಂದಿನ ಕೆಲವು ದಿನಗಳಲ್ಲಿ ಕಣ್ಮರೆಯಾಗಬಹುದು. ಅದಕ್ಕೆ ಒಂದು ಔಷಧಿ ಕಂಡುಹಿಡಿದು ಅದನ್ನು ನಿಯಂತ್ರಣಕ್ಕೆ ತರಲೂಬಹುದು! ಹಾಗಂತ ಅಷ್ಟು ಮಾತ್ರಕ್ಕೆ ನಮ್ಮನ್ನು ನಾವು ಅಜೇಯರು ಎಂದುಕೊಂಡರೆ ನಮ್ಮಂತಹ ಮೂರ್ಖರಿರಲು ಸಾಧ್ಯವಿಲ್ಲ!

The lesson of corona epidemic
ಕೊರೊನಾ

By

Published : Mar 28, 2020, 10:12 AM IST

ಫುಟ್ಬಾಲ್ ಆಟಗಾರನೊಬ್ಬನಿಗೆ ತಿಂಗಳಿಗೆ 10 ಲಕ್ಷ ಯೂರೋಗಳ ಸಂಬಳ ನೀಡಲಾಗುತ್ತದೆ. ಅವನನ್ನು ಹೆಚ್ಚೂ ಕಡಿಮೆ ಒಬ್ಬ ದೇವತಾ ಪುರುಷನ ರೀತಿಯಲ್ಲಿಯೇ ಮೆರೆಸಲಾಗುತ್ತದೆ! ಇದೇ ಹೊತ್ತಲ್ಲಿ ಜೀವಶಾಸ್ತ್ರದ ಸಂಶೋಧಕನೊಬ್ಬನಿಗೆ ತಿಂಗಳಿಗೆ ಬರೀ 1,800 ಯೂರೋಗಳಷ್ಟು ಸಂಬಳ ನೀಡಲಾಗುತ್ತದೆ! ಹಾಗಿದ್ದರೆ ಈಗ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಬಳಿ ಹೋಗಿ ಕೊರೊನಾಗೆ ಔಷಧಿ ಕೇಳಿ ನೋಡೋಣ. ಸ್ಪೇನಿನ ಜೀವ ವಿಜ್ಞಾನ ಸಂಶೋಧಕರ ಪರವಾಗಿ ಇಂತಹ ಒಂದು ಸಂದೇಶವನ್ನು ವಾಟ್ಸಾಪ್​ನಲ್ಲಿ ಯಾರೋ ಕಳಿಸಿದ್ದರು. ಇದು ಫುಟ್ಬಾಲ್ ಆಟಗಾರರ ಮೇಲಿನ ಸಿಟ್ಟಾಗಲೀ, ಹೊಟ್ಟೆಕಿಚ್ಚಾಗಲೀ ಅಲ್ಲ, ಆದರೆ ಪ್ರಪಂಚದ ದೇಶಗಳು, ಸರ್ಕಾರಗಳು, ಮತ್ತು ಪ್ರಪಂಚ ನಾಯಕರು ಯಾವ ಸಂಗತಿಗಳಿಗೆ ಆದ್ಯತೆ ನೀಡಬೇಕಿತ್ತೋ ಅದಕ್ಕೆ ಸೂಕ್ತ ಆದ್ಯತೆ ನೀಡದೇ ಹೋಗಿದ್ದರ ಕುರಿತ ನೋವನ್ನಷ್ಟೇ ಈ ಸಂದೇಶ ಬಿಂಬಿಸುತ್ತದೆ.

ವಿಕೋಪಗಳ ಸಂದರ್ಭದಲ್ಲಿ, ಕೊರೊನಾ ದಂತಹ ವಿಪತ್ತುಗಳ ಹೊತ್ತಿನಲ್ಲಿ ನಮ್ಮ ಶಿಕ್ಷಣವೆಲ್ಲಾ ವ್ಯರ್ಥ, ಯಾತಕ್ಕೂ ಪ್ರಯೋಜನವಿಲ್ಲ ಎನಿಸಿಬಿಡುತ್ತದೆ. ನಮ್ಮ ಅಸ್ತಿತ್ವಕ್ಕೇ ಬಂದಿರುವ ಸಂಚಕಾರವನ್ನು ಅರಿಯಲು ನಾವು ಸೋತಿದ್ದೇವೆ. ಜಾಗತಿಕ ಸೋಂಕು ರೋಗಗಳು ಅಥವಾ ಪ್ಯಾಂಡೆಮಿಕ್ಸ್ ನಮ್ಮ ಪ್ರಪಂಚಕ್ಕೆ ಹೊಸತೇನೂ ಅಲ್ಲ. ಕ್ರಿ.ಪೂ 430ರ ಹೊತ್ತಿಗೆ ಅಥೆನ್ಸ್​ನಲ್ಲಿ ಹರಡಿದ್ದ ಪ್ಲೇಗ್ ರೋಗದಿಂದ ಮೊದಲುಗೊಂಡು ಇತ್ತೀಚಿನ ಸಾರ್ಸ್, ಎಬೋಲಾದವರೆಗೆ ಅದೆಷ್ಟೋ ಸಾಂಕ್ರಾಮಿಕ ರೋಗಗಳನ್ನು ಕಂಡಿದ್ದೇವೆ, ಎದುರಿಸಿದ್ದೇವೆ! ಜೀವಕ್ಕೇ ಅಪಾಯವಿದ್ದರೂ ಮನುಷ್ಯ ಇವೆಲ್ಲವುಗಳ ವಿರುದ್ಧವೂ ಹೋರಾಡಿ ಗೆದ್ದಿದ್ದಾನೆ. ಅವೆಲ್ಲವೂ ಸಾಕಷ್ಟು ತೊಂದರೆ ಕೊಟ್ಟು ಭೀತಿಯನ್ನೂ ಹುಟ್ಟು ಹಾಕಿರಬಹುದು. ಆದರೆ ಯಾವುದೇ ಸಾಂಕ್ರಾಮಿಕ ರೋಗವು ಇಡೀ ಮನುಕುಲವನ್ನೇ ನಾಶ ಮಾಡಲು ಸಾಧ್ಯವಾಗಲಿಲ್ಲ. ಇದಕ್ಕೆ ಕೊರೊನಾ ಕೂಡಾ ಹೊರತಲ್ಲ. ಆದರೆ ಪ್ರತಿಯೊಂದು ರಂಗದಲ್ಲಿಯೂ ನಾವು ಅತ್ಯಂತ ಮುಂದುವರಿದ ಜೀವಿಗಳು ಎಂದು ಎದೆಯುಬ್ಬಿಸಿಕೊಂಡು ಹೇಳುತ್ತಿರುವಾಗಲೇ. 5ಜಿ ಮತ್ತು ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳ ಒಡೆಯರಾಗಿದ್ದೇವೆ ಎಂದುಕೊಳ್ಳುವಾಗಲೇ ಅಮೆರಿಕ, ಯೂರೋಪ್ ಚೀನಾದಂತಹ ಬಲಾಢ್ಯ ದೇಶಗಳೂ ಸೇರಿದಂತೆ ಪ್ರತಿಯೊಂದು ದೇಶಕ್ಕೂ ಕೊರೊನಾ ಒಡ್ಡಿರುವ ಸವಾಲು ಕಡಿಮೆಯದಲ್ಲ. ಈ ವೈರಾಣು ಮುಂದಿನ ಕೆಲವು ದಿನಗಳಲ್ಲಿ ಕಣ್ಮರೆಯಾಗಬಹುದು. ಇಲ್ಲವೇ ನಾವದಕ್ಕೆ ಒಂದು ಔಷಧಿ ಕಂಡುಹಿಡಿದು ಅದನ್ನು ನಿಯಂತ್ರಣಕ್ಕೆ ತರಲೂಬಹುದು! ಹಾಗಂತ ಅಷ್ಟು ಮಾತ್ರಕ್ಕೆ ನಮ್ಮನ್ನು ನಾವು ಅಜೇಯರು ಎಂದುಕೊಂಡರೆ ನಮ್ಮಂತಹ ಮೂರ್ಖರಿರಲು ಸಾಧ್ಯವಿಲ್ಲ!

ಮನುಕುಲಕ್ಕೆ ಎದುರಾಗಿರುವ ಹಲವು ಪ್ರಶ್ನೆಗಳು!

ಕೊರೊನಾ ಬಿಕ್ಕಟ್ಟಿನಿಂದ ನಾವುಯ ಕಲಿಯಬಹುದಾದ ಪಾಠಗಳೇನು? ಕೊರೊನಾ ನಂತರದಲ್ಲಿ ಮನುಷ್ಯರಾಗಿ ನಾವು ಹೇಗೆ ವರ್ತಿಸಬಹುದು? ಪ್ರಕೃತಿ ಮತ್ತು ಸಹಮನುಷ್ಯರನ್ನು ನಾವು ಹೇಗೆ ನಡೆಸಿಕೊಳ್ಳಬಹುದು? ಜೀವನವನ್ನು ಇನ್ಸ್ಟಂಟ್ ಕಾಫಿ ಕುಡಿದಷ್ಟೇ ಸಲೀಸಾಗಿ ತೆಗೆದುಕೊಳ್ಳುತ್ತಿದ್ದ ಈಗಿನ ಪೀಳಿಗೆಯ ತರುಣರ ಆಲೋಚನಾ ಗತಿ ಮುಂದೆ ಹೇಗಿರಲಿದೆ? ಸರ್ಕಾರಗಳು ತಮ್ಮ ಕೆಲಸ ಕಾರ್ಯಗಳನ್ನು ಹೇಗೆ ನಡೆಸಲಿವೆ? ರಾಜಕೀಯ ನೇತಾರರು ಹೇಗೆ ದೇಶಕ್ಕೆ ನಾಯಕತ್ವ ನೀಡುತ್ತಾರೆ? ಸಂಶೋಧಕರು ಹೇಗೆ ಪ್ರತಿಕ್ರಿಯಿಸುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೆ ಮತ್ತು ಇಂತಹುದೇ ಇನ್ನಿತರ ಪ್ರಶ್ನೆಗಳಿಗೆ ನಾವು ಯಾವ ಉತ್ತರ ನೀಡುತ್ತೇವೆ ಎಂಬುದರ ಮೇಲೆ ಮನುಕುಲದ ಭವಿಷ್ಯ ನಿಂತಿರುತ್ತದೆ!

ಮನುಕುಲವನ್ನು ಶ್ರೀಮಂತ ದೇಶಗಳು, ಬಡ ದೇಶಗಳು, ಅಭಿವೃದ್ಧಿಶೀಲ ದೇಶಗಳು, ಸೂಪರ್ ಪವರ್ ದೇಶಗಳು, ಆಧುನಿಕವಾದಿ ದೇಶಗಳು, ಶ್ವೇತವರ್ಣೀಯರು, ಕಪ್ಪು ವರ್ಣೀಯರು, ಆ ಜಾತಿ, ಈ ಧರ್ಮ, ಬಂಡವಾಳಶಾಹಿ, ಕಮ್ಯುನಿಸಂ, ಕೃತಕ, ವರ್ಚುಅಲ್,…ನಾವು ಮಾತ್ರ ಶ್ರೇಷ್ಠರು ಮಿಕ್ಕವರು ಕನಿಷ್ಠರು ಹೀಗೇ ನಾನಾ ತರದಲ್ಲಿ ವಿಭಜಿಸಿಕೊಂಡು ಕುಳಿತಿರುವ ಮನುಷ್ಯರ ನಿಜವಾದ ತಾಕತ್ತೇನು, ಅಭಿವೃದ್ಧಿ, ಪ್ರಗತಿಗಳ ನಿಜಮೌಲ್ಯವೆಷ್ಟು ಎಂಬುದನ್ನು ಮಂಗಳ ಗ್ರಹದಿಂದ ಪಡೆದ ಹೈ ರೆಸೊಲೂಶನ್ ಇಮೇಜುಗಳಷ್ಟೇ ಸ್ಪಷ್ಟವಾಗಿ ಸ್ಫುಟವಾಗಿ ಕೊರೊನಾ ವೈರಾಣು ನಮ್ಮ ಮುಖಕ್ಕೆ ರಾಚಿ ಹಿಡಿದಿದೆ.

ಕೊರೊನಾವು ಚೀನಾ ದೇಶಕ್ಕೆ ಅದರ ಮಿತಿ ಮೀರಿದ ಮಹತ್ವಕಾಂಕ್ಷೆಯ ಮತ್ತು ಜಗತ್ತನ್ನೇ ತನ್ನ ಮುಷ್ಠಿಯಲ್ಲಿ ಹಿಡಿಯಲು ತೋರಿದ ಆತುರದ ಕರಾಳ ಮುಖವನ್ನು ಅದಕ್ಕೆ ತೋರಿಸಿದೆ. ಅಮೆರಿಕ ಮತ್ತು ಯೂರೋಪಿನ ದೇಶಗಳಿಗೆ ಬೀಗಲು ಕಾರಣವಾಗಿದ್ದ ಅಲ್ಲಿನ ಉತ್ಕೃಷ್ಟ ಪೌಷ್ಠಿಕತೆ, ಆರೋಗ್ಯ ಮತ್ತು ಅಭಿವೃದ್ಧಿ ಎಲ್ಲಾ ಎಂತಹ ಪೊಳ್ಳು ಎಂಬುದನ್ನು ಕೊರೊನಾ ಈಗ ಜಗಜ್ಜಾಹಿರು ಮಾಡಿದೆ. ವೈರಾಣುಗಳು ಕೇವಲ ಬಡ ದೇಶಗಳಿಗೆ ಮತ್ತು ಬಡ ಜನರಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳದೇ ಎಲ್ಲರನ್ನೂ ಒಂದೇ ರೀತಿ ದಾಳಿ ಮಾಡಬಲ್ಲವು ಹಾಗೂ ನಮ್ಮ ಜಗತ್ತು ನಂಬಿಕೊಂಡು ಬಂದ ತಥಾಕಥಿತ ಅಭಿವೃದ್ಧಿ ಎನ್ನುವುದಕ್ಕೆ ತನ್ನದೇ ಆದ ಮಿತಿಯಿದೆ ಎಂಬುದನ್ನು ಸಹ ಕೊರೊನಾ ಸ್ಪಷ್ಟವಾಗಿ ತೋರಿಸಿದೆ.

ಪ್ರತಿಯೊಂದು ಸಾಂಕ್ರಾಮಿಕ ರೋಗವೂ ಸಹ ಮನುಷ್ಯನ ಲೋಪ ಮತ್ತು ಅಜಾಗರೂಕತೆಗಳತ್ತ ಬೊಟ್ಟು ಮಾಡಿರುವುದಲ್ಲದೇ ಈ ಲೋಪಗಳನ್ನು ತಿದ್ದಿಕೊಳ್ಳಬೇಕಾದ ಎಚ್ಚರವನ್ನೂ ನೀಡಿವೆ. ಇವನ್ನು ಅನುಸರಿಸದೇ ಕಡೆಗಣಿಸಿದ ಸಮುದಾಯಗಳು ಕಹಿ ಪಾಠಗಳನ್ನು ಕಲಿಯಬೇಕಾಯಿತು. 1346-1353ರ ನಡುವೆ ಮಧ್ಯ ಏಷ್ಯಾದಿಂದ ಯೂರೋಪಿಗೆ ಹರಡಿದ ‘ಕರಾಳ ಮರಣ’ ಎಂದೇ ಕುಖ್ಯಾತಿ ಪಡೆದ ಸಾಂಕ್ರಾಮಿಕ ರೋಗವು ಅರ್ಧದಷ್ಟು ಯೂರೋಪನ್ನು ನಿರ್ನಾಮ ಮಾಡಿ ಯೂರೋಪಿನ ಚರಿತ್ರೆಯ ಜಾಡನ್ನೇ ಬದಲಿಸಿತು. ಅಂದು ಅಸ್ತಿತ್ವದಲ್ಲಿದ್ದ ಫ್ಯೂಡಲ್ ಕೂಲಿ ಪದ್ಧತಿ ಈ ಸಾಂಕ್ರಾಮಿಕ ರೋಗದಿಂದಲೇ ನಾಮಾವಶೇಷಗೊಂಡಿತು. ಅನೇಕರು ಸತ್ತುಹೋದ ಪರಿಣಾಮವಾಗಿ ಬದುಕುಳಿದ ಕೆಲವರ ಕೂಲಿಯಲ್ಲಿ ಹೆಚ್ಚಳವಾಗಲು ಕಾರಣವಾಯಿತು. ಮುಂದಿನ ದಿನಗಳಲ್ಲಿ ತಾಂತ್ರಿಕ ಆವಿಷ್ಕಾರಗಳಿಗೂ ಇದು ದಾರಿ ಮಾಡಿತೆನ್ನಲಾಗಿದೆ. ಆದರೆ ಮೊದಲ ಮಹಾಯುದ್ಧದಲ್ಲಿ ಬಾಧಿಸಿದ ಪ್ಲೇಗ್ ನಂತಹ ಸಾಂಕ್ರಾಮಿಕ ಕಾಯಿಲೆಗಳು ಸಹ ಒಂದು ದೇಶ ಮತ್ತೊಂದನ್ನು ಹತೋಟಿಗೆ ಪಡೆಯಬೇಕೆಂಬ ಬಲಾಢ್ಯ ರಾಷ್ಟ್ರಗಳ ಹಪಾಹಪಿಯನ್ನು ನಿಯಂತ್ರಿಸಲು ಸೋತಿತು ಎಂಬುದಕ್ಕೂ ಚರಿತ್ರೆ ಸಾಕ್ಷಿಯಾಗಿದೆ.

ನಿಸರ್ಗವನ್ನು ಅರಿಯುವುದರಲ್ಲೇ ಪ್ರಗತಿ ಸಾಧ್ಯವಿದೆ...

ಈಗ ಕೊರೊನಾದಿಂದ ಸಾಕಷ್ಟು ನರಳುತ್ತಿರುವ ಇಟಲಿಯನ್ನೂ ಸೇರಿಕೊಂಡಂತೆ ಕೆಲವು ದೇಶಗಳು ಸೇರಿ 1960ರ ದಶಕದಲ್ಲಿ ‘ಕ್ಲಬ್ ಆಫ್ ರೋಮ್' ಎಂಬ ಗುಂಪನ್ನು ರಚಿಸಿಕೊಂಡಿದ್ದವು. ಹೆಚ್ಚಿನ ವಿಜ್ಞಾನಿಗಳು, ಕೈಗಾರಿಕೋದ್ಯಮಿಗಳು ಮತ್ತು ರಾಜಕಾರಣಿಗಳು ಅದರ ಸದಸ್ಯರಾಗಿದ್ದರು. 1972ರಲ್ಲಿ ಈ ಗುಂಪು 'ಅಭಿವೃದ್ಧಿಯ ಮಿತಿಗಳು' ಎಂಬ ವರದಿಯೊಂದನ್ನು ಸಲ್ಲಿಸಿತು. ಅಭಿವೃದ್ಧಿಗೆ ಮಿತಿಗಳಿವೆ ಎಂಬುದನ್ನು ಸ್ಪಷ್ಟಪಡಿಸಿದ್ದ ಆ ವರದಿಯು, ಭೂಮಿಯೊಂದಿಗೆ ಸಮತೋಲನ ಸಾಧಿಸಿಕೊಂಡೇ ಅಭಿವೃದ್ಧಿ ನಡೆಯಬೇಕು ಎಂದು ಒತ್ತಿ ಹೇಳಿತ್ತು. ನಮ್ಮ ಪರಿಸರ ವ್ಯವಸ್ಥೆಯು ಜನಸಂಖ್ಯಾ ಸ್ಫೋಟವನ್ನಾಗಲೀ, ತೀವ್ರಗತಿಯ ಆರ್ಥಿಕ ಬೆಳವಣಿಗೆಯನ್ನಾಗಲೀ 2100ರ ಆಚೆಗೆ ತಾಳಿಕೊಳ್ಳಲು ಸಾಧ್ಯವಿಲ್ಲ ಎಂದು ಈ ಗುಂಪು ಅಂತಿಮವಾಗಿ ಅಭಿಪ್ರಾಯಪಟ್ಟಿತ್ತು.

ಸಂಶೋಧನೆಗಳಿಗೆ ಮಿಲಿಯಾಂತರ ರೂಪಾಯಿಗಳನ್ನು ಚೆಲ್ಲುತ್ತಿರುವ ಹೊರತಾಗಿಯೂ ನಾವು ಈ ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಗಳ ಎದುರು ಹೋರಾಡಲು ಅಸಮರ್ಥತೆ ತೋರುತ್ತಿದ್ದೇವೆ! ಇದುವರೆಗೂ ಮಲೇರಿಯಾ ರೋಗಕ್ಕೆ ಒಂದು ಸೂಕ್ತವಾದ ಲಸಿಕೆಯನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಸಿಡುಬು ಕಾಯಿಲೆ ಅಮೆರಿಕದಂತಹ ದೇಶದಲ್ಲೂ ಮತ್ತೆ ಮತ್ತೆ ತಲೆದೋರುತ್ತಲೇ ಬಂದಿದೆ! ಜಾಗತಿಕ ಮಟ್ಟದ ಜೈವಿಕ ವೈದ್ಯಕೀಯ ಸಂಶೋಧನೆಗೆ ಗರ ಬಡಿದುಕೊಂಡಿದೆಯೇ? ನಾವದನ್ನು ‘ವಿಜ್ಞಾನ ಮತ್ತು ತಂತ್ರಜ್ಞಾನ’ ಎಂದು ಕರೆದರೂ ಸಹ ಬಹುತೇಕ ವಿದ್ಯಾರ್ಥಿಗಳು ಕೇವಲ ತಂತ್ರಜ್ಞಾನದ ಕುರಿತು ಆಸಕ್ತಿ ತೋರುತ್ತಿದ್ದಾರೆ. ಈ ‘ಇನ್ಸ್ಟಂಟ್’ ಕಾಲದಲ್ಲಿ ವಿದ್ಯಾರ್ಥಿಗಳು ಕಾಲೇಜು ಬಿಟ್ಟೊಡನೆ ಚಿಟಿಕೆ ಹೊಡೆಯುವಷ್ಟರಲ್ಲಿ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸಲು ಬಯಸುತ್ತಿದ್ದಾರೆ. ಯಾರಿಗೂ ಮೂಲ ವಿಜ್ಞಾನ ಅಥವಾ ಶುದ್ಧ ವಿಜ್ಞಾನದ ಕೋರ್ಸುಗಳಿಗೆ ಸೇರಿ ಕಲಿಯಬೇಕೆಂಬ ಆಸೆಯಾಗಲೀ, ಮನಸ್ಸಾಗಲೀ, ತಾಳ್ಮೆಯಾಗಲೀ ಕಾಣುತ್ತಲೇ ಇಲ್ಲ.

ಅಭಿವೃದ್ಧಿಯ ಫಲ ಎಲ್ಲರಿಗೂ ಎಟುಕಬೇಕು...

ಸದ್ಯದ ಸನ್ನಿವೇಶದಲ್ಲಿ ಎಲ್ಲಾ ಸರ್ಕಾರಗಳ, ದೇಶಗಳ ನಾಯಕರ ಮತ್ತು ಜಾಗತಿಕ ಮಟ್ಟದ ನಾಯಕರ ಏಕೈಕ ಗುರಿ ಇರುವುದು ಚುನಾವಣೆಗಳನ್ನು ಗೆಲ್ಲುವುದು, ವ್ಯಾಪಾರ ನಡೆಸುವುದು, ಯುದ್ಧಗಳನ್ನು ನಡೆಸುವುದು ಮತ್ತು ಪ್ರಪಂಚದ ಮೇಲೆ ಪ್ರಾಬಲ್ಯ ಸಾಧಿಸುವುದು ಇಷ್ಟೇ ಆಗಿದೆ. ಇಡೀ ಮನುಕುಲದ ಒಳಿತಿಗಾಗಿ ವಿಶಾಲ ಹೃದಯದಿಂದ ಮತ್ತು ಮುಂದಾಲೋಚನೆಯಿಂದ ಆಲೋಚಿಸಬಲ್ಲವರು ಯಾರಿದ್ದಾರೆ? ಸಮೂಹ ವಿನಾಶಿ ಅಸ್ತ್ರಗಳ ಆವಿಷ್ಕಾರದಲ್ಲಿ ಎಲ್ಲಿಲ್ಲದ ಆಸಕ್ತಿ ಶತ್ರುವನ್ನು ಎದುರು ಕಾಣಿಸಿಕೊಳ್ಳದೇ ಡ್ರೋನ್ ಮೂಲಕ ಕೊಲ್ಲುವ ಬಗೆಗಳನ್ನು ಕಂಡು ಹಿಡಿಯುವುದು ಇವೇ ಇವರ ಆದ್ಯತೆಗಳು ತಾನೇ? ಇದಕ್ಕೆಲ್ಲಾ ನೀಡುವ ಆದ್ಯತೆಯ ಒಂದಂಶವನ್ನಾದರೂ ನಾವು ನಮ್ಮ ಜನರ ಆರೋಗ್ಯವನ್ನು ಸುಧಾರಿಸಲು ನೀಡಿದ್ದರೆ ಪರಿಸ್ಥಿತಿ ಹೀಗಿರುತ್ತಿರಲಿಲ್ಲ. ನಮ್ಮ ರಾಜಕೀಯ ಪಂಡಿತರು ಕೆಲಸಕ್ಕೆ ಬಾರದ ತತ್ವಪುರಾಣಗಳಲ್ಲಿ ಮತ್ತು ಐಡಿಯಾಲಜಿಗಳಲ್ಲಿ ಮುಳುಗಿ ಹೋಗಿರುವುದು ಮನುಕುಲದ ಅತಿದೊಡ್ಡ ದುರದೃಷ್ಟದ ವಿಷಯ. ಮಾನವತೆಯ ಮುಂದೆ ಯಾವ ತತ್ವಶಾಸ್ತ್ರವೂ ನಿಲ್ಲುವುದಿಲ್ಲ. ಯಾವ ಧರ್ಮವೂ ಮಾನವತೆಗಿಂತ ಮಿಗಿಲಾದುದಲ್ಲ. ಈ ಸತ್ಯವನ್ನೇ ಚರಿತ್ರೆ ನಮಗೆ ಮತ್ತೆ ಮತ್ತೆ ಮನವರಿಕೆ ಮಾಡಿಕೊಡಲು ಯತ್ನಿಸಿ ವಿಫಲವಾಗಿದೆ. ಹಾಗಿದ್ದರೂ ಬಂಡವಾಳಶಾಹಿ, ಕಮ್ಯುನಿಸಂ, ಬಲಪಂಥ, ಎಡಪಂಥ ಮತ್ತು ಎಲ್ಲಾ ಧರ್ಮಗಳ ಹೆಸರಿನಲ್ಲಿ ನಡೆಯುತ್ತಿರುವ ಈ ಆತ್ಮವಂಚನೆ ಯಾತಕ್ಕೆ? ಪ್ರಬಲ ದೇಶಗಳಾದ ಅಮೆರಿಕ ಮತ್ತು ಚೀನಾಗಳಿಗೆ ಈಗ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಲು ಸಕಾಲವೆನಿಸುತ್ತದೆ. ಅವು ತಾವು ನಡೆಯಬೇಕಾದ ದಾರಿ ಯಾವುದೆಂದು ನೋಡಿಕೊಳ್ಳಬೇಕು—ಸಹ ಮಾನವರಿಗೆ ಅಗತ್ಯವಿದ್ದಾಗ ಸಹಾಯ ಮಾಡುವುದೋ ಅಥವಾ ವೈಯಕ್ತಿಕ ಲಾಭಕ್ಕೆ ಜಗತ್ತನ್ನು ಛಿದ್ರಗೊಳಿಸುವುದೋ ಎಂದು ತೀರ್ಮಾನಿಸಬೇಕು.

ಸಹಮನುಷ್ಯರ ಜೀವನದ ಗುಣಮಟ್ಟದಲ್ಲಿ ಪ್ರಗತಿ ಸಾಧಿಸದೇ ಅಭಿವೃದ್ಧಿ ಸಾಧಿಸಿದ್ದೇವೆ ಎಂದು ಬೀಗುವುದು ದೊಡ್ಡ ಮಿಥ್ಯೆ. ನೆರೆಹೊರೆಯವರೊಂದಿಗೆ ಸಹಜೀವನ ನಡೆಸಲು ಹೊಂದಾಣಿಕೆ ಕಲಿಸದ ಅಭಿವೃದ್ಧಿ ಒಂದು ಅಭಿವೃದ್ಧಿಯೇ ಅಲ್ಲ. ಸಂಕುಚಿತ ಸಿದ್ಧಾಂತಗಳಿಂದಾಗಿ ಎಲ್ಲಾ ದೇಶಗಳೂ ಒಂದೇ ರೀತಿಯಲ್ಲಿ ನರಳಾಡುತ್ತಿವೆ.

ಕನಿಷ್ಟ ಪಕ್ಷ ಈಗಲಾದರೂ ಸಮಗ್ರ ಸಾರ್ವಜನಿಕ ಆರೋಗ್ಯವನ್ನು ಎಲ್ಲಾ ದೇಶಗಳೂ ತಮ್ಮ ಆದ್ಯತೆ ಮಾಡಿಕೊಂಡು ನಂತರದಲ್ಲಿ ತಮ್ಮ ವ್ಯಾಪಾರಿ ಹಿತಾಸಕ್ತಿಗಳನ್ನು ಇಟ್ಟುಕೊಳ್ಳಬೇಕು. ದೇಶಗಳು ಸಾರ್ವಜನಿಕ ಆರೋಗ್ಯದ ಮೇಲೆ ವೈಯಕ್ತಿಕವಾಗಿ ಇಲ್ಲವೇ ಒಟ್ಟಾಗಿ ಹೂಡಿಕೆ ಮಾಡಬೇಕು. ಆರೋಗ್ಯವಂತ ಜಗತ್ತು ಪ್ರಥಮ ಆದ್ಯತೆಯಾಗಬೇಕು. ಕೊರೊನಾದಂತಹ ಮಹಾಮಾರಿ ಎದುರಾದಾಗ ದೇಶಗಳು ತಮ್ಮ ನಡುವಿನ ಎಲ್ಲಾ ಭಿನ್ನಮತಗಳನ್ನು ಬದಿಗಿರಿಸಿ ಒಂದಾಗಿ ಮುನ್ನಡೆಯಬೇಕಲ್ಲದೇ ಈ ಬಿಕ್ಕಟ್ಟಿನಿಂದ ಹೊರಕ್ಕೆ ಬದಲು ಬೇಕಾದ ವೈಜ್ಞಾನಿಕ ಸಂಶೋಧನೆಯನ್ನು ಎಲ್ಲರ ಭಾಗವಹಿಸುವಿಕೆಯಿಂದ ನಡೆಸಬೇಕು. ಅನುಮಾನಗಳು, ಪರಸ್ಪರ ಆರೋಪಗಳು, ದ್ರೋಹಗಳು, ಮುಂತಾದುವು ಮನುಷ್ಯ ಸಂಕುಲವನ್ನೇ ಕೊನೆಗೊಳಿಸುತ್ತವೆಯೇ ವಿನಃ ಜಗತ್ತನ್ನು ಸುಖ ಶಾಂತಿ ಸಮೃದ್ಧಿಗೆ ಕೊಂಡೊಯ್ಯುವುದು ಸಾಧ್ಯವಿಲ್ಲ.

ನಾವು ವ್ಯಕ್ತಿಗತವಾಗಿ ಮತ್ತು ಇಡೀ ಮನುಷ್ಯ ಸಮಾಜವಾಗಿ ನಮ್ಮ ಇದುವರೆಗಿನ ಆಲೋಚನಾ ವಿಧಾನಗಳನ್ನು ಬದಲಿಸಿಕೊಳ್ಳಬೇಕೆಂದು ‘ಕೊರೊನಾ’ ಒತ್ತಿ ಹೇಳುತ್ತಿದೆ! ನಾವು ಯಕಶ್ಚಿತ್ ಹುಲುಮಾನವರು ಎಂಬುದನ್ನು ಇದು ಸಾಬೀತುಪಡಿಸಿದೆ! ನಾವು ರೋಬೋಟುಗಳು, ಕೃತಕ ಬುದ್ಧಿಮತ್ತೆ, ವರ್ಚುಅಲ್ ರಿಯಾಲಿಟಿ ಇತ್ಯಾದಿಗಳೊಂದಿಗೆ ಬದುಕು ನಡೆಸುವ ಮೊದಲು ಪ್ರಕೃತಿ ಮತ್ತು ಇತರ ಜೀವಿಗಳೊಂದಿಗೆ ಸಹಬಾಳ್ವೆ ನಡೆಸಬೇಕು ಎಂಬ ಪಾಠವನ್ನು ಅದು ಹೇಳಿಕೊಟ್ಟು ನಮ್ಮನ್ನು ಎಚ್ಚರಿಸಿದೆ. ಈ ಕಟುವಾಸ್ತವಕ್ಕೆ ನಾವು ಕುರುಡುತನ ತೋರುವುದಾದರೆ ನಾವು ಈಗ ಎದುರಿಸುತ್ತಿರುವುದಕ್ಕಿಂತಲೂ ಮಾರಣಾಂತಿಕ ಬಿಕ್ಕಟ್ಟನ್ನು ಮುಂದೆ ಎದುರಿಸಬೇಕಾಗಬಹುದು! ಇನ್ನು ಮುಂದಕ್ಕೆ ನಾವು ಚರಿತ್ರೆಯನ್ನು ಹೇಳುವಾಗ ಕ್ರಿಸ್ತ ಪೂರ್ವ, ಕ್ರಿಸ್ತ ಶಕ ಎಂದು ಹೇಳುವ ಬದಲು ಕೊರೊನಾ ಪೂರ್ವ ಮತ್ತು ಕೊರೊನೋತ್ತರ ಶಕ (Before Corona, After Corona) ಎಂದು ಬಳಸಬೇಕಾಗಬಹುದು. ಕೊರೊನಾ ದಾಳಿಗೆ ಮುಂಚೆಯಂತೂ ನಾವು ಉತ್ತಮವಾಗಿರಲು ಸಾಧ್ಯವಾಗಲಿಲ್ಲ. ಕನಿಷ್ಟ ಕೊರೊನಾ ಶಕೆಯಲ್ಲಾದರೂ ಮನುಷ್ಯರಾಗೋಣ…ಮತ್ತಷ್ಟು ಮನುಷ್ಯತ್ವ ಮೈಗೂಡಿಸಿಕೊಳ್ಳೋಣ! ಇದು ನಮ್ಮಿಂದಾಗಬಲ್ಲುದೇ?

ವೈರಸ್ಸುಗಳಿಂದ ಅಪಾರ ಹಾನಿ...

ಹೆಸರುಗಳು ಭಿನ್ನವಾಗಿರಬಹುದು; ಆದರೆ ಈ ವೈರಸ್​ಗಳು ನಡೆಸುವ ದಾಳಿಗಳು ಕಳೆದ ಎರಡು ಮೂರು ದಶಕಗಳಲ್ಲಿ ಪದೇ ಪದೇ ಎದುರಾಗುತ್ತಲೇ ಇವೆ. ಸಾರ್ಸ್, ಹಂದಿ ಜ್ವರ, ಎಬೊಲಾ, ಮರ್ಸ್, ಜೈಕಾ, ಹಳದಿ ಜ್ವರ. ಇವೆಲ್ಲ ಒಂದಲ್ಲ ಒಂದು ಬಗೆಯಲ್ಲಿ ಇಡೀ ಮನುಷ್ಯಕುಲಕ್ಕೇ ಸವಾಲೊಡ್ಡಿವೆ. ವಿಶ್ವ ಆರೋಗ್ಯ ಸಂಸ್ಥೆಗೆ ವರ್ಷಂಪ್ರತಿ ಏನಿಲ್ಲವೆಂದರೂ 5,000 ಹೊಸ ಹೊಸ ರೋಗಲಕ್ಷಣಗಳ ಕುರಿತು ಮಾಹಿತಿ ಲಭ್ಯವಾಗುತ್ತದೆ ಎಂಬುದು ಇದರ ಗಂಭೀರತೆಯನ್ನು ತೋರಿಸುತ್ತದೆ. ವಿಶ್ವಬ್ಯಾಂಕ್ ಮಾಡಿರುವ ಅಂದಾಜಿನ ಪ್ರಕಾರ ಈ ಸಾಂಕ್ರಾಮಿಕ ರೋಗಗಳಿಂದ ಸಂಭವಿಸಿರುವ ನಷ್ಟದ ಪ್ರಮಾಣ ವರ್ಷಕ್ಕೆ ಸುಮಾರು 57 ಶತಕೋಟಿ ಡಾಲರುಗಳಷ್ಟು! ರಾಷ್ಟ್ರ- ರಾಷ್ಟ್ರಗಳ ನಡುವೆ ನಡೆಯುವ ಯುದ್ಧಗಳಿಂದಲೇ ಅಪಾರ ಹಾನಿಯಾಗಿದೆ ಎಂದು ಯೋಚಿಸುವುದು ತಪ್ಪಾಗುತ್ತದೆ. ಈಗಲಾದರೂ ನಾವು ವಿವೇಕದಿಂದ ವರ್ತಿಸದಿದ್ದಲ್ಲಿ ಈ ಅದೃಶ್ಯ ಸೂಕ್ಷ್ಮ ಜೀವಿಗಳೊಂದಿಗೆ ನಡೆಸುವ ಹೋರಾಟದಿಂದ ಆಗುವ ನಷ್ಟ ಇನ್ನೂ ಹೆಚ್ಚಾಗಲಿದೆ!

ABOUT THE AUTHOR

...view details