ಹೊಸದಿಲ್ಲಿ: ಹಣಕಾಸು ವರ್ಷ 2018-19 ರ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಅವಧಿಯನ್ನು ಜೂನ್ 30, 2020 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಐಟಿ, ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆ ಅವಧಿ ವಿಸ್ತರಣೆ
ಕೊರೊನಾ ವೈರಸ್ ಬಿಕ್ಕಟ್ಟಿನಿಂದ ಹೈರಾಣಾಗಿರುವ ನಾಗರಿಕರ ನೆರವಿಗೆ ನಿಂತಿರುವ ಕೇಂದ್ರ ಹಣಕಾಸು ಇಲಾಖೆ ಟಿಡಿಎಸ್ ಮತ್ತು ಜಿಎಸ್ಟಿ ರಿಟರ್ನ್ಸ್ ಫೈಲ್ ಮಾಡುವ ಕೊನೆಯ ದಿನಾಂಕಗಳನ್ನು ವಿಸ್ತರಣೆ ಮಾಡಿದೆ.
ಈ ಮುಂಚೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಕೊನೆಯ ದಿನಾಂಕ ಮಾ.31 ಆಗಿತ್ತು. ಹಾಗೆಯೇ ಮಾರ್ಚ್, ಏಪ್ರಿಲ್ ಮತ್ತು ಮೇ 2020 ರ ತಿಂಗಳುಗಳ ಜಿಎಸ್ಟಿ ರಿಟರ್ನ್ಸ್ ಫೈಲ್ ಮಾಡುವ ದಿನಾಂಕವನ್ನು ಜೂನ್ 30, 2020 ರವರೆಗೆ ವಿಸ್ತರಿಸಲಾಗಿದೆ. ತಡವಾಗಿ ಪಾವತಿಸಲಾಗುವ ಮೊತ್ತಕ್ಕೆ ವಿಧಿಸಲಾಗುತ್ತಿದ್ದ ಬಡ್ಡಿ ದರವನ್ನು ಶೇ.12 ರಿಂದ ಶೇ.9 ಕ್ಕೆ ಇಳಿಸಲಾಗಿದೆ ಎಂದು ಹಣಕಾಸು ಸಚಿವೆ ಹೇಳಿದ್ದಾರೆ.
ದೇಶಾದ್ಯಂತ ಕೊರೊನಾ ವೈರಸ್ನಿಂದಾಗಿ ಲಾಕ್ಡೌನ್ ವಿಧಿಸಲಾಗಿರುವುದು, ಯಾವುದೇ ಕಚೇರಿಗಳು ಕಾರ್ಯನಿರ್ವಹಿಸದಿರುವುದು ಮತ್ತು ಜನತೆ ಸಾಕಷ್ಟು ಸಮಸ್ಯೆಗಳ ಸುಳಿಯಲ್ಲಿರುವುದರಿಂದ ಟಿಡಿಎಸ್, ಜಿಎಸ್ಟಿ ಸಲ್ಲಿಕೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.